ಕುತೂಹಲ ಮೂಡಿಸಿದ ಸೋನಿಯಾ ದೀದಿ ಚಾಯ್ ಪೇ ಚರ್ಚಾ

ನವದೆಹಲಿ: ಕಳೆದ ಏಪ್ರಿಲ್​-ಮೇನಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಮತ್ತು ಟಿಎಂಸಿ ಎದುರಾಳಿಗಳಾಗಿ ಸ್ಪರ್ಧಿಸಿದ ಬಳಿಕ ಇದೇ ಮೊದಲ ಬಾರಿಗೆ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಇಂದು ದೆಹಲಿಯಲ್ಲಿ ಭೇಟಿ ಮಾಡಿರುವುದು ಭಾರೀ ಕುತೂಹಲ ಸೃಷ್ಟಿಸಿದೆ.

ಭೇಟಿಯ ವೇಳೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೂಡ ಉಪಸ್ಥಿತರಿದ್ದರು ಎಂಬ ಮಾಹಿತಿ ಇದೆ. ಮತ್ತೊಮ್ಮೆ ಒಗ್ಗಟ್ಟಿನ ಮಂತ್ರ ಜಪಿಸಿರುವ ಉಭಯ ನಾಯಕರು, ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮಣಿಸಲು ಮತ್ತೆ ಒಂದಾಗಲು ಚರ್ಚೆ ನಡೆಸಿರುವುದಾಗಿ ತಿಳಿದುಬಂದಿದೆ.

ಭೇಟಿಯ ಬಗ್ಗೆ ಮಾತನಾಡಿರುವ ಮಮತಾ ಬ್ಯಾನರ್ಜಿ, ಸೋನಿಯಾ ಅವರು ಒಂದು ಕಪ್​ ಟೀಗಾಗಿ ಆಹ್ವಾನಿಸಿದ್ದರು. ಇದೇ ವೇಳೆ ರಾಹುಲ್​ ಗಾಂಧಿ ಸಹ ಇದ್ದರು. ದೇಶದಲ್ಲಿನ ಕೋವಿಡ್​ ಪರಿಸ್ಥಿತಿ ಮತ್ತು ಇಸ್ರೇಲಿ ಬೇಹುಗಾರಿಕಾ ಸಾಫ್ಟ್​ವೇರ್​ ಪೆಗಾಸಸ್​ ಬಗ್ಗೆ ನಾವು ಚರ್ಚಿಸಿದ್ದೇವೆ. ಪ್ರತಿಪಕ್ಷಗಳ ಒಗ್ಗೂಡುವಿಕೆ ಬಗ್ಗೆಯೂ ಮಾತುಕತೆ ನಡೆಸಿದ್ದೇವೆ. ಇದೊಂದು ಒಳ್ಳೆಯ ಹಾಗೂ ಧನಾತ್ಮಕ ಭೇಟಿ ಆಗಿತ್ತು. ಬಿಜೆಪಿಯನ್ನು ಸೋಲಿಸಲು ಎಲ್ಲರೂ ಒಗ್ಗೂಡಬೇಕಿದೆ ಮತ್ತು ಎಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಅಂದಹಾಗೆ ಬಂಗಾಳದ ಸಿಎಂ ಐದು ದಿನಗಳ ದೆಹಲಿ ಪ್ರವಾಸದಲ್ಲಿದ್ದಾರೆ. ಕಮಲ್​ ನಾಥ್​ ಮತ್ತು ಆನಂದ್​ ಶರ್ಮಾರಂತಹ ಹಿರಿಯ ಕಾಂಗ್ರೆಸ್​ ನಾಯಕರನ್ನು ಮಮತಾ ಬ್ಯಾನರ್ಜಿ ಅವರು ಮಂಗಳವಾರ ಭೇಟಿ ಆಗಿದ್ದಾರೆ. ಸೋನಿಯಾ ಮತ್ತು ರಾಹುಲ್​ ಗಾಂಧಿಯ ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ರನ್ನು ಭೇಟಿ ಮಾಡಿ ಮಮತಾ ಮಾತುಕತೆ ನಡೆಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಅಭೂತಪೂರ್ವ ವಿಜಯ ಸಾಧಿಸಿದ ಬಳಿಕ ಮಮತಾ ಬ್ಯಾನರ್ಜಿ ಅವರ ವರ್ಚಸ್ಸು ಇಮ್ಮಡಿಯಾಗಿದೆ. ಅದರಲ್ಲೂ ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ವಿರೋಧಿ ಪಾಳಯದ ಪ್ರಮುಖ ಶಕ್ತಿಯಾಗಿ ಮಮತಾ ಅವರು ಹೊರ ಹೊಮ್ಮಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ರಾಜಕೀಯ ಪಡಸಾಲೆಯಲ್ಲಿ ಭಾರಿ ಚರ್ಚೆಯಾಗುತ್ತಿದೆ. 

 
 
 
 
 
 
 
 
 
 
 

Leave a Reply