ದೆಹಲಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜಕ್ಕೆ ವಂದನೆ ಸಲ್ಲಿಸಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆ ಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದು, ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಮೋದಿಯವರು ಮೊದಲಿಗೆ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.

ಗಾಂಧಿ, ಚಂದ್ರ ಶೇಖರ್ ಆಜಾದ್, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ದೇಶದ ಪ್ರಥಮ ಗೃಹ ಸಚಿವ ವಲ್ಲಭ್ ಭಾಯಿ ಪಟೇಲ್ ಅವರನ್ನು ಸ್ಮರಿಸಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಹಲವರು ಹೋರಾಡಿದ್ದಾರೆ. ಅವರೆಲ್ಲರಿಗೂ ನನ್ನ ನಮನಗಳು ಎಂದು ಹೇಳಿದರು.

ಕೋವಿಡ್‌ ಸಂಕಷ್ಟದ ಸಮಯದಲ್ಲಿ ನಮ್ಮ ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಕೆಲಸಗಾರರು, ವಿಜ್ಞಾನಿಗಳು ಮತ್ತು ಕೋಟ್ಯಾಂತರ ನಾಗರೀಕರು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ.

ಈ ಅವಧಿಯಲ್ಲಿ ಇತರರ ಸೇವೆಗಾಗಿ ಪ್ರತಿ ಕ್ಷಣವನ್ನೂ ಮೀಸಲಿಟ್ಟವರು ನಮ್ಮ ಮೆಚ್ಚುಗೆಗೆ ಅರ್ಹರು ಎನ್ನುವ ಮೂಲಕ ಕೊರೋನಾ ವಾರಿಯರ್ಸ್ ಗಳಿಗೆ ಅಭಿನಂದನೆ ಸಲ್ಲಿಸಿದರು.

ಜಪಾನ್’ನ ಟೊಕಿಯೋದಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ನಮಗೆ ಹೆಮ್ಮೆ ತಂದ ಕ್ರೀಡಾಪಟುಗಳು ಇಂದು ನಮ್ಮ ನಡುವೆ ಇದ್ದಾರೆ. ಅವರ ಸಾಧನೆಯನ್ನು ಶ್ಲಾಘಿಸುವಂತೆ ನಾನು ರಾಷ್ಟ್ರವನ್ನು ಒತ್ತಾಯಿಸುತ್ತೇನೆ.

ಅವರು ನಮ್ಮ ಹೃದಯವನ್ನು ಗೆಲ್ಲುವುದಲ್ಲದೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡಿದ್ದಾರೆ ಎನ್ನುವ ಮೂಲಕ ಚಪ್ಪಾಳೆ ತಟ್ಟಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು.

ಇದೇ ವೇಳೆ ದೇಶದ ವಿಭಜನೆಯನ್ನು ನೆನೆದ ಪ್ರಧಾನಿ ಮೋದಿ ವಿಭಜನೆ ಸಮಯದಲ್ಲಿ ಭಾರತದ ಜನರು ಅನುಭವಿಸಿದ ನೋವು ಮತ್ತು ಸಂಕಷ್ಟಗಳನ್ನು ಸ್ಮರಿಸಲು ನಾವು ಆಗಸ್ಟ್ 14ನ್ನು ವಿಭಜನೆಯ ಕರಾಳ ದಿನವನ್ನಾಗಿ ಆಚರಿಸಲು ನಿರ್ಧಾರ ಕೈಗೊಂಡಿದ್ದೇವೆಂದು ತಿಳಿಸಿದರು.

ಕಳೆದ 7 ವರ್ಷಗಳಲ್ಲಿ ಆರಂಭವಾದ ಅನೇಕ ಯೋಜನೆಗಳ ಪ್ರಯೋಜನಗಳು ಕೋಟ್ಯಾಂತರ ಬಡವರ ಮನೆಬಾಗಿಲನ್ನು ತಲುಪಿವೆ. ಉಜ್ವಲದಿಂದ ಆಯುಷ್ಮಾನ್ ಭಾರತ್ ವರೆಗೆ ರಾಷ್ಟ್ರದ ಬಡವರಿಗೆ ಯೋಜನೆಗಳ ಸಾಮರ್ಥ್ಯದ ಬಗ್ಗೆ ತಿಳಿದಿದೆ.

ಇಂದು ಸರ್ಕಾರದ ಯೋಜನೆಗಳು ವೇಗವನ್ನು ಪಡೆದುಕೊಂಡಿದ್ದು, ಶೀಘ್ರಗತಿಯಲ್ಲಿ ಜನರನ್ನು ತಲುಪುತ್ತಿವೆ ಎಂದರು.  

 
 
 
 
 
 
 
 
 

Leave a Reply