ನೂತನ ಸಂಸತ್‌ ಭವನದ ಮೇಲೆ ರಾಷ್ಟ್ರ ಲಾಂಛನ ಅನಾವರಣಗೊಳಿಸಿದ ಪ್ರಧಾನಿ

ನವದೆಹಲಿಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಸಂಸತ್ ಭವನದ ಮೇಲ್ಭಾಗದಲ್ಲಿ ಸ್ಥಾಪಿಸಲಾಗಿರುವ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ಮೋದಿ ಇಂದು ಅನಾವರಣಗೊಳಿಸಿದರು. ನಾಲ್ಕು ದಿಕ್ಕುಗಳನ್ನು ನೋಡುತ್ತಿರುವ ಸಿಂಹಗಳ ಮುಖಗಳಿರುವ ಕಂಚಿನ ‘ರಾಷ್ಟ್ರ ಲಾಂಛನ’ ಒಟ್ಟು 9,500 ಕೆ.ಜಿ ತೂಕವಿದ್ದು, 6.5 ಮೀಟರ್‌ ಎತ್ತರ, 4.4 ಮೀಟರ್ ಅಗಲವಿದೆ.

ಈ ರಚನೆಗಾಗಿ 6,500 ಕೆಜಿ ಸ್ಟೀಲ್‌ ಬಳಸಲಾಗಿದೆ. ಲಾಂಛನ ನಿರ್ಮಿಸಲು ಬರೋಬ್ಬರಿ ಒಂಬತ್ತು ತಿಂಗಳು ಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ಲಾಂಛನ ಅನಾವರಣ ಸಂದರ್ಭದಲ್ಲಿ ಪ್ರಧಾನಿ ಮೋದಿ ಸಂಸತ್ ಭವನದ ಕಾಮಗಾರಿಯ ಮೇಲ್ವಿಚಾರಣೆ ನಡೆಸಿದರು. ಅಲ್ಲಿನ ಅಧಿಕಾರಿಗಳು ಹಾಗೂ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು. ಮೋದಿಯವರಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ಕೆಲ ಸಂಸದರು ಸಾಥ್‌ ನೀಡಿದರು.

ಹೊಸ ಸಂಸತ್ ಕಟ್ಟಡವನ್ನು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ನಿರ್ಮಿಸುತ್ತಿದ್ದು, ಕಟ್ಟಡವನ್ನು ಎಚ್‌ಸಿಪಿ ಡಿಸೈನ್, ಪ್ಲಾನಿಂಗ್ ಮತ್ತು ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ವಿನ್ಯಾಸಗೊಳಿಸಿದೆ. ನೂತನ ಸಂಸತ್ ಭವನ ನಿರ್ಮಾಣಕ್ಕೆ ಸುಮಾರು ರೂ.971 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ಸಂಸತ್ ಕಟ್ಟಡಕ್ಕೆ ಆರು ಪ್ರವೇಶ ದ್ವಾರಗಳಿದ್ದು, ಒಂದು ಗೇಟ್ ರಾಷ್ಟ್ರಪತಿ ಮತ್ತು ಪ್ರಧಾನಿಗೆ, ಎರಡನೇ ಗೇಟ್ ಲೋಕಸಭೆಯ ಸ್ಪೀಕರ್, ರಾಜ್ಯಸಭೆಯ ಅಧ್ಯಕ್ಷರು ಮತ್ತು ಸಂಸದರಿಗೆ, ಮೂರನೇ ಗೇಟ್ ಸಾಮಾನ್ಯ ಪ್ರವೇಶವಾಗಿದೆ. ನಾಲ್ಕನೇ ಗೇಟ್ ಸಂಸದರಿಗಾಗಿಯೂ, ಐದನೇ ಮತ್ತು ಆರನೇ ಗೇಟ್‌ಗಳನ್ನು ಸಾರ್ವಜನಿಕ ಪ್ರವೇಶದ್ವಾರಗಳಾಗಿ ಗೊತ್ತುಪಡಿಸಲಾಗಿದೆ. ನಾಲ್ಕು ಮಹಡಿಗಳಲ್ಲಿ ನಿರ್ಮಾಣವಾಗಲಿದ್ದು, ಭೂಕಂಪವನ್ನು ತಡೆದುಕೊಳ್ಳುವ ರೀತಿಯಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ.

 
 
 
 
 
 
 
 
 
 
 

Leave a Reply