ಗೋವಾದಲ್ಲೂ ಆಪರೇಷನ್ ಕಮಲ!?

ಮಹಾರಾಷ್ಟ್ರದ ಬಳಿಕ ಇದೀಗ ಗೋವಾದಲ್ಲಿ ದಿಢೀರ್ ರಾಜಕೀಯ ಬಿರುಗಾಳಿ ಎದ್ದಿದ್ದು, ಆಪರೇಷನ್ ಕಮಲ ಚಾಲ್ತಿಯಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮೂಲಗಳ ಪ್ರಕಾರ ಗೋವಾ ಕಾಂಗ್ರೆಸ್ ನ 8 ಶಾಸಕರು ಬಿಜೆಪಿ ಪಕ್ಷಕ್ಕೆ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬಿಜೆಪಿಗೆ ಸೇರ್ಪಡೆಯಾಗುವ ಶಾಸಕರ ಈ ಪಟ್ಟಿಯಲ್ಲಿ ಹಲವು ಕಾಂಗ್ರೆಸ್ ನಿಷ್ಠಾವಂತರ ನಾಯಕರ ಹೆಸರು ಕೂಡ ಇದೆ ಎಂದು ಹೇಳಲಾಗಿದೆ. 

ಈ ಮಧ್ಯೆ ಗೋವಾ ರಾಜ್ಯದ ಕಾಂಗ್ರೆಸ್ನ ಉಸ್ತುವಾರಿ ನೋಡಿಕೊಳ್ಳುತ್ತಿರುವ ದಿನೇಶ್ ಗುಂಡೂರಾವ್ ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಸೇರಲು ಸಿದ್ಧರಾಗಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, ಇದೊಂದು ವದಂತಿ.. ಅಂತಹ ಪರಿಸ್ಥಿತಿ ಸೃಷ್ಟಿಯಾಗಿಲ್ಲ ಎಂದು ತಳ್ಳಿಹಾಕಿದ್ದಾರೆ.

ವಿಧಾನಸಭೆ ಅಧಿವೇಶನಕ್ಕೂ ಒಂದು ದಿನ ಮುಂಚಿತವಾಗಿ ಗೋವಾದ ಕಾಂಗ್ರೆಸ್ ಶಾಸಕರು ಪಕ್ಷದ ಸಭೆಯಿಂದ ಹೊರಗುಳಿದಿದ್ದಾರೆ ಎಂದು ಮೂಲಗಳು ಭಾನುವಾರ ತಿಳಿಸಿವೆ. ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿರುವ ಗೋವಾ ಘಟಕದ ಮುಖ್ಯಸ್ಥ ಅಮಿತ್ ಪಾಟ್ಕರ್ ಅವರು, ವಿಧಾನಸಭೆಯ ಎರಡು ವಾರಗಳ ಬಜೆಟ್ ಅಧಿವೇಶನಕ್ಕೂ ಮುಂಚಿತವಾಗಿ ಆಡಳಿತಾರೂಢ ಬಿಜೆಪಿಯಿಂದ ಇಂತಹ ವದಂತಿಗಳು ಹರಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬೆಳವಣಿಗೆಗಳ ಮಧ್ಯೆ ಅನರ್ಹತೆ ತಪ್ಪಿಸಲು ಕಾಂಗ್ರೆಸ್ ನ 8 ಶಾಸಕರು ಒಟ್ಟಾಗಿ ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಕಾಮತ್ ಮತ್ತು ಲೋಬೋ ಈ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ. 40 ಸದಸ್ಯರು ಇರುವ ವಿಧಾನಸಭೆಯಲ್ಲಿ ಕಾಂಗ್ರೆಸ್ 11 ಶಾಸಕರನ್ನು ಹೊಂದಿದ್ದರೆ, ಬಿಜೆಪಿ 20 ಹಾಗೂ ಎಂಜಿಪಿ ಇಬ್ಬರು ಶಾಸಕರನ್ನು ಹೊಂದಿದೆ. ಹಾಗೆಯೇ ಮೂವರು ಶಾಸಕರು ಸ್ವತಂತ್ರರಾಗಿದ್ದಾರೆ.

ಮೂಲಗಳ ಪ್ರಕಾರ, ಬಿಜೆಪಿಯ ರಾಜ್ಯ ಘಟಕವು ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಉತ್ಸುಕರಾಗಿಲ್ಲ. ಆದರೆ, 2024ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಕೇಂದ್ರ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

 
 
 
 
 
 
 
 
 
 
 

Leave a Reply