ಮಾದಕ ದ್ರವ್ಯ ಸೇವನೆಯಲ್ಲಿ ವಿಪರೀತ ಹೆಚ್ಚಳ; ಹೆಚ್ಚಿನ ಆಸ್ಪತ್ರೆಗಳು ಕ್ಯಾನ್ಸರ್ ವೈದ್ಯರನ್ನು ಇಟ್ಟು ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ – ಡಾ.ಪಿ.ವಿ ಭಂಡಾರಿ

ಹೂಡೆ:ಜಮಾಅತೆ ಇಸ್ಲಾಮಿ ಹಿಂದ್, ಹೂಡೆ, ಸಾಲಿಡಾರಿಟಿ ಹೂಡೆ ಮತ್ತು ಎಸ್.ಐ.ಓ ಹೂಡೆಯ ಸಹಯೋಗ ದೊಂದಿಗೆ ಹಮ್ಮಿಕೊಂಡಿದ್ದ ಮಾದಕ ವ್ಯಸನ ಅಭಿಯಾನದ ಸಮಾರೋಪ ಕಾರ್ಯಕ್ರಮ ಶುಕ್ರವಾರ ಉರ್ದು ಶಾಲಾ ವಠಾರದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಖ್ಯಾತ ಮನೋರೋಗ ತಜ್ಞರಾದ ಡಾ.ಪಿ.ವಿ ಭಂಡಾರಿ, ಒಂದೇ ಒಂದು ಹಾನಿ ಅಲ್ಕೋಹಾಲ್ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಗಟ್ಕಾ, ತಂಬಾಕು ಆರೋಗ್ಯ ಹಾನಿ ಮಾಡುವುದಿಲ್ಲ ಎಂಬುವುದು ತಪ್ಪು ಕಲ್ಪನೆಯಾಗಿದೆ. ಇವತ್ತು ಹೆಚ್ಚಿನ ಆಸ್ಪತ್ರೆಗಳು ಕ್ಯಾನ್ಸರ್ ವೈದ್ಯರನ್ನು ಇಟ್ಟು ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಗುಟ್ಕಾದಿಂದಾಗಿ ಕ್ಯಾನ್ಸರ್ ಹೆಚ್ಚಾಗುತ್ತಿದೆ ಎಂದರು.

ಗಾಂಜಾ ಉಪಯೋಗದಿಂದಾಗಿ ಮಾನಸಿಕ ರೋಗ ಜಾಸ್ತಿಯಾಗುತ್ತಿದೆ. ಗಾಂಜಾ ಕ್ರಿಯಾಶೀಲತೆ,ಸೃಜನಶೀಲ ಹೆಚ್ಚಿಸುತ್ತದೆ ಎಂಬ ತಪ್ಪು ಕಲ್ಪನೆ ಯುವ ಜನರಲ್ಲಿದೆ.ಯುವ ಜನರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದರಿಂದಾಗ ಆತ್ಮಹತ್ಯೆ ಹೆಚ್ಚಾಗುತ್ತಿದೆ ಎಂದರು.

ಗಾಂಜಾ ವ್ಯಕ್ತಿಯ ಅರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಇದರಿಂದಾಗಿ ವ್ಯಕ್ತಿ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಾನೆ. ಮಕ್ಕಳು, ಹದಿಹರೆಯದ ಯುವಕರು ಇಂತಹ ವ್ಯಸನಗಳಿಗೆ ತುತ್ತಾಗದಂತೆ ಜಾಗೃತಿ‌ ಮೂಡಿಸಬೇಕೆಂದು ಕರೆ ನೀಡಿದರು.

ನಂತರ ಮಾತನಾಡಿದ ಪ್ರೊ. ಜಮಾಲ್ ಹಿಂದಿ, ಮಾದಕ ದ್ರವ್ಯ ವ್ಯಸನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ವೈದ್ಯರು, ಪೊಲೀಸರಿಗಿಂತ ಪೋಷಕರು, ಶಿಕ್ಷಕರು ಇದರ ಕುರಿತು ಜಾಗೃತರಾಗಿ ಮಕ್ಕಳನ್ನು ಇಂತಹ ಚಟಗಳಿಂದ ಸಂರಕ್ಷಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಪವಿತ್ರ ಕುರಾನಿನಲ್ಲೂ ಇಂತಹ ಚಟಗಳಿಂದ ನಮ್ಮನ್ನು ನಾವು ಸಂರಕ್ಷಿಸಲು ಕರೆ ನೀಡಲಾಗಿದೆ. “ಓ ಸತ್ಯವಿಶ್ವಾಸಿಗಳೇ, ಮದ್ಯ, ಜೂಜು, ‘ಬಲಿ ಪೀಠಗಳು’ ಮತ್ತು ‘ದಾಳ ಹಾಕುವುದು’ ಇವೆಲ್ಲ ಹೊಲಸು ಪೈಶಾಚಿಕ ಕೃತ್ಯಗಳಾಗಿವೆ. ಅವುಗಳನ್ನು ವರ್ಜಿಸಿರಿ, ನಿಮಗೆ ಯಶಸ್ಸು ಲಭಿಸುವುದೆಂದು ನಿರೀಕ್ಷಿಸಬಹುದು.” ಎಂದು ಕುರಾನ್ ಹೇಳುತ್ತದೆ. ಇಂತಹ ಕೃತ್ಯಗಳು ಪಾಪವಾಗಿದ್ದು, ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಂಡರೆ ಸೃಷ್ಟಿರ್ತನಿಗೆ ಅದರ ಕುರಿತು ಉತ್ತರಿಸಬೇಕಾದ ದಿನವೊಂದು ಬರಲಿದೆ. ಆದ್ದರಿಂದ ಜೀವನದಲ್ಲಿ ಧಾರ್ಮಿಕ ಮೌಲ್ಯವನ್ನು ಅಳವಡಿಸಿಕೊಳ್ಳಬೇಕಾದದ್ದು ಅತೀ ಅಗತ್ಯ ಎಂದರು.

ಮಲ್ಪೆ ಠಾಣಾಧಿಕಾರಿಯಾದ ಸುಧಾ ಪ್ರಭು ಅವರು ಈ ಸಂದರ್ಭದಲ್ಲಿ ಮಾತನಾಡಿದರು. ಇದ್ರಿಸ್ ಹೂಡೆ ಪ್ರಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಯಾಸೀನ್ ನಿರೂಪಿಸಿ ಧನ್ಯವಾದವಿತ್ತರು.

ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹೂಡೆಯ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್, ಅಭಿಯಾನದ ಸಂಚಾಲಕರಾದ ಇಸ್ಮಾಯಿಲ್ ಕಿದೆವರ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply