ತಲ್ಲೂರು: 15ನೆ ಶತಮಾನದ ಅಪ್ರಕಟಿತ ಶಾಸನ ಪತ್ತೆ

ಕುಂದಾಪುರ ತಾಲೂಕು ವ್ಯಾಪ್ತಿಯ ತಲ್ಲೂರು ಪ್ರದೇಶದ ಗಾಯತ್ರಿ ಟಿಂಬರಿನಲ್ಲಿರುವ ಶಾಸನದ ಬಗ್ಗೆ ಹೆಮ್ಮಡಿಯ ಶರತ್ ಭಟ್ ಅವರು ಮಾಹಿತಿ ನೀಡಿದ್ದು, ಈ ಶಾಸನದ ಅಧ್ಯಯನವನ್ನು ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ಇದರ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ. ಕೃಷ್ಣಯ್ಯ ಮತ್ತು ಯು. ಕಮಲಬಾಯಿ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕರಾದ ಕೆ. ಶ್ರೀಧರ ಭಟ್ ಇವರ ನೇತೃತ್ವದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನ ಮಾಡಿರುತ್ತಾರೆ.

ಕಣ (ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು ಅಪರಿಪೂರ್ಣವಾಗಿದ್ದು, ಕನ್ನಡ ಲಿಪಿ ಮತ್ತು ಭಾಷೆಯ 10 ಸಾಲುಗಳನ್ನು ಒಳಗೊಂಡಿದೆ. ಶಾಸನವು 4 ಅಡಿ ಎತ್ತರ ಮತ್ತು 2.5 ಅಡಿ ಅಗಲವಿದ್ದು, ಮೇಲ್ಭಾಗದಲ್ಲಿ ಶಿವಲಿಂಗ ಇದರ ಇಕ್ಕೆಲಗಳಲ್ಲಿ ನಂದಿ, ದೀಪಕಂಬ ಹಾಗೂ ಸೂರ್ಯ-ಚಂದ್ರರ ಉಬ್ಬು ಕೆತ್ತನೆಯಿದೆ. “ಶ್ರೀ ಗಣಾಧಿಪತಯೆಂ ನಮಃ” ಎಂಬ ಶ್ಲೋಕದಿಂದ ಪ್ರಾರಂಭವಾಗುವ ಈ ಶಾಸನವು ಶಕವರುಷ 1467 ಸಂದು ಸಲುವ ವರ್ತಮಾನ ವಿಶ್ವಾವಸು ಸಂವತ್ಸರದ ವಯಿಶಾಖ ಮಾಸಕ್ಕೆ ಸೇರಿದ್ದು ಅಂದರೆ ಇದು ಕ್ರಿ. ಶ 1545ರ ಕಾಲಮಾನಕ್ಕೆ ಸರಿ ಹೊಂದುತ್ತದೆ.

ಹೊಸಅಂಗಡಿಯ ಶ್ರೀ ವಿರೂಪಾಕ್ಷ ದೇವರ ಸನ್ನಿಧಿಯಲ್ಲಿ ಬಾರಕೂರ ಮೂರುಕೇರಿಯ ಚೊಕಣಪ ಸೆಟ್ಟಿಯ ಮಗನಾದ ಉಪ್ಪಿನಕುದಿರ ನಾರಾಣ ಸೆಟ್ಟಿಯು ಶ್ರೀ ವೀರಯ್ಯನವರ ಮೂಲಿ ಮುರಿದು ಅರಮನೆಯ ಧರ್ಮಕ್ಕೆ ನೀಡಿದ ದಾನದ ಬಗ್ಗೆ ಹಾಗೂ ಈ ಸಂದರ್ಭದಲ್ಲಿ ಗುರುತಿಸದ ಚತುಸ್ಸೀಮೆಯ ಗಡಿಯ ಉಲ್ಲೇಖವನ್ನು ಶಾಸನವು ಮಾಡುತ್ತದೆ. ಶಾಸನವು ಅಪರಿಪೂರ್ಣವಾಗಿರುವುದರಿಂದ ಮುಂದಿನ ಯಾವುದೇ ವಿವರಗಳು ಕಂಡು ಬರುವುದಿಲ್ಲ. ಶಾಸನದಲ್ಲಿ ಉಲ್ಲೇಖಗೊಂಡ ‘ಹೊಸ ಅಂಗಡಿ’ ಮತ್ತು ‘ಉಪ್ಪಿನಕುದಿರ’ ಎಂಬ ಹೆಸರುಗಳು ಪ್ರಸ್ತುತವಾಗಿ ಕರೆಯಲ್ಪಡುವ ‘ಹೊಸಂಗಡಿ’ ಮತ್ತು ‘ಉಪ್ಪಿನಕುದ್ರು’ ಇದರ ಪ್ರಾಚೀನ ಹೆಸರಾಗಿರಬಹುದೆಂದು ಸಂಶೋಧನಾರ್ಥಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಕ್ಷೇತ್ರಕಾರ್ಯ ಸಂದರ್ಭದಲ್ಲಿ ರವಿ ಸಂತೋಷ್ ಆಳ್ವ, ಕೆ. ನಾಗರಾಜ್ ಮತ್ತು ಸಂದೇಶ್ ಅವರು ಸಹಕಾರ ನೀಡಿರುತ್ತಾರೆ.

 
 
 
 
 
 
 
 
 
 
 

Leave a Reply