‘ಹೊಳಪು 2022’ ಸ್ಪರ್ಧಾಕೂಟದ ಟೀ-ಶರ್ಟ್ ಬಿಡುಗಡೆ, ಪ್ರಶಸ್ತಿ ಫಲಕ-ಸ್ಮರಣಿಕೆ ಅನಾವರಣ

ಕೋಟತಟ್ಟು ಗ್ರಾಮ ಪಂಚಾಯತ್ ಮತ್ತು ಡಾ! ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ ಇದರ ಆಶ್ರಯದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 400ಕ್ಕೂ ಮಿಕ್ಕಿ ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟ ‘ಹೊಳಪು’ ಕಳೆದ ಐದು ವರ್ಷಗಳಿಂದ ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಸಾರಥ್ಯದಲ್ಲಿ ಕೋಟ ವಿವೇಕ ಪ್ರೌಢ ಶಾಲಾ ಆವರಣದಲ್ಲಿ ಅತ್ಯಂತ ವ್ಯವಸ್ಥಿತವಾಗಿ ನೆರವೇರುತ್ತಾ ಬಂದಿರುವುದು ಪ್ರಶಂಸನೀಯ. ಅಪೇಕ್ಷಿತ ಜನಪ್ರತಿನಿಧಿಗಳ ಪ್ರತಿಭಾ ವಿಕಸನಕ್ಕೆ ನಾಂದಿ ಹಾಡಿರುವ ‘ಹೊಳಪು’ ಸ್ಪರ್ಧಾಕೂಟ ದೇಶಕ್ಕೇ ಮಾದರಿಯಾಗಿದೆ ಎಂದು ಮೈಸೂರ್ ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಕೆ.ಉದಯ ಕುಮಾರ್ ಶೆಟ್ಟಿ ಹೇಳಿದರು.

ಅವರು ಕೋಟ ವಿವೇಕ ಪ್ರೌಢ ಶಾಲಾ ವಠಾರದಲ್ಲಿ ನ.26ರಂದು ನಡೆಯಲಿರುವ 6ನೇ ವರ್ಷದ ‘ಹೊಳಪು-2022’ ಸ್ಪರ್ಧಾಕೂಟದ ಟೀ-ಶರ್ಟ್ ಮತ್ತು ಕ್ಯಾಪ್ ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಅವಿಭಜಿತ ದ.ಕ. ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ. ಈಗಾಗಲೇ 388 ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯಾಡಳಿತ ಸಂಸ್ಥೆಗಳು ಹೆಸರು ನೊಂದಾಯಿಸಿರುವ ‘ಹೊಳಪು-2022’ ಸ್ಪರ್ಧಾಕೂಟವು ಎಲ್ಲ ಪ್ರತಿನಿಧಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಅತ್ಯಂತ ಯಶಸ್ವಿಯಾಗಿ ಮೂಡಿಬರಲಿ; ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಫೂರ್ತಿ ಮೇಳೈಸಲಿ ಎಂದರು.

ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ ಪ್ರಶಸ್ತಿ ಫಲಕವನ್ನು ಹಾಗೂ ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಸ್ಮರಣಿಕೆಯನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.

ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಕುಂದಾಪುರ ಪುರಸಭೆ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ, ಅಮೃತೇಶ್ವರಿ ದೇವಸ್ಥಾನದ ಟ್ರಸ್ಟಿ ಸುಬ್ರಾಯ ಆಚಾರ್ಯ, ವಿವೇಕ ಸಮೂಹ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಜಗದೀಶ್ ನಾವಡ, ಮುಖ್ಯ ದೈಹಿಕ ಶಿಕ್ಷಕ ವಸಂತ ಶೆಟ್ಟಿ, ಅಂಬಲಪಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಹಾಗೂ ವಿವಿಧ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಕೋಟತಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿ ಶೇಖರ ಮರವಂತೆ ಸ್ವಾಗತಿಸಿದರು. ಸಚಿವರ ಆಪ್ತ ಸಹಾಯಕರಾದ ಹರೀಶ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಿವೇಕ್ ಅಮೀನ್ ವಂದಿಸಿದರು.

ಕಾರ್ಯಕ್ರಮದ ಬಳಿಕ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿರುವ ಕೋಟ ವಿವೇಕ ಸಮೂಹ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರ ವಿಶೇಷ ಮುತುರ್ವಜಿಯಿಂದ ಶಾಲಾ ಪರಿಸರದಲ್ಲಿ ಅಭಿವೃದ್ಧಿಪಡಿಸಿರುವ 50ಕ್ಕೂ ಮಿಕ್ಕಿ ವಿವಿಧ ಔಷಧೀಯ ಮತ್ತು ಹಣ್ಣಿನ ಗಿಡಗಳ ತೋಟವನ್ನು ಕೆ.ಉದಯ ಕುಮಾರ್ ಶೆಟ್ಟಿಯವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply