ಭಾಷೆಯಲ್ಲಿ ಮಡಿವಂತಿಕೆ ಜಾಸ್ತಿಯಾದರೆ ಭಾಷೆಯೂ ಮಡಿಯುತ್ತದೆ

ಬಹುಭಾಷಾ ಪ್ರದೇಶವಾಗಿರುವ ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅನುವಾದದ ಕುರಿತಾಗಿ ಹಮ್ಮಿಕೊಂಡಿರುವ ರಾಷ್ಟ್ರೀಯ ವಿಚಾರ ಸಂಕಿರಣ ಔಚಿತ್ಯಪೂರ್ಣ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಎಚ್. ವೆಂಕಟೇಶ್ವರಲು ಹೇಳಿದರು. ಭಾಷೆಗಳ ಅಳಿವು ಉಳಿವಿನ ಮೇಲೆ ಮನುಷ್ಯನ ಅಸ್ತಿತ್ವವಿದೆ. ಭಾರತದ ವಿವಿಧ ಪ್ರಾದೇಶಿಕ ಭಾಷೆಗಳ ಅಭಿವೃದ್ದಿಯನ್ನು ಪ್ರೋತ್ಸಾಹಿಸಬೇಕಾಗಿದೆ ಎಂದರು.

ಕಾಸರಗೋಡಿನ ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ನಡೆದ ‘ಅನುವಾದ – ಅನುಸಂಧಾನ: ತತ್ವ ಮತ್ತು ಪ್ರಯೋಗ’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಭಾಷಾ ವಿಭಾಗಗಳ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳನ್ನು ಸಶಕ್ತವಾಗಿ ಕಟ್ಟುತ್ತಿದೆ. ಈ ನಿಟ್ಟಿನಲ್ಲಿ ಕನ್ನಡ ವಿಭಾಗವು ಸಪ್ತಭಾಷಾ ಸಂಗಮ ಭೂಮಿಯಾದ ಕಾಸರಗೋಡಿನ ಪ್ರದೇಶದಲ್ಲಿ ಹಮ್ಮಿಕೊಂಡಿರುವ ಅನುವಾದ ತತ್ವ ಮತ್ತು ಪ್ರಯೋಗ ಕುರಿತ ವಿಚಾರ ಸಂಕಿರಣವು ಅತ್ಯಂತ ಮಹತ್ವವನ್ನು ಪಡೆದಿದೆ ಎಂದರು.

ವಿಚಾರ ಸಂಕಿರಣದ ಕುರಿತು ದಿಕ್ಸೂಚಿ ಮಾತುಗಳನ್ನಾಡಿದ ಖ್ಯಾತ ವಿಮರ್ಶಕ ಪ್ರೊ. ಒ.ಎಲ್. ನಾಗಭೂಷಣ ಸ್ವಾಮಿ, ನಾವು ಕಲಿತ ಭಾಷೆಯ ವಿಚಾರಗಳನ್ನು ನಮ್ಮ ಭಾಷೆಗೆ ತರುವುದು ಮುಖ್ಯ. ಯಾವ ಭಾಷೆಯೂ ಇನ್ನೊಂದು ಭಾಷೆಗೆ ಶತ್ರುವಲ್ಲ ಎಂದು ಹೇಳಿದರು. ಭಾಷೆಯನ್ನು ಕಗ್ಗಂಟು ಮಾಡಬಾರದು. ಭಾಷೆ ಹೇಗೆ ಬಳಕೆಯಲ್ಲಿದೆಯೋ ಅದಕ್ಕೆ ಮಾನ್ಯತೆ ನೀಡಬೇಕು. ಭಾಷೆಯಲ್ಲಿ ಮಡಿವಂತಿಕೆ ಜಾಸ್ತಿಯಾದರೆ ಭಾಷೆ ಮಡಿಯುತ್ತದೆ. ಎಲ್ಲ ಗ್ರಹಿಕೆಗಳೂ ಅನುವಾದವಾಗಬಲ್ಲುದು ಎಂದು ಅವರು ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಮುರಳೀಧರನ್ ನಂಬಿಯಾರ್ ಅವರು ವಿಚಾರ ಸಂಕಿರಣವನ್ನುದ್ದೇಶಿಸಿ ಮಾತನಾಡಿದರು. ಹಿರಿಯ ಪತ್ರಕರ್ತ ಡಾ. ರಾಘವ ನಂಬಿಯಾರ್ ‘ಸಂಸ್ಕೃತಿ ದಡಗಳ ನಡುವೆ’ ಮತ್ತು ಭಾಷಾಂತರಕಾರ ಡಾ. ಮಾಧವ ಚಿಪ್ಪಳಿ ‘ಪದ, ಪದಾರ್ಥ ಪ್ರಯೋಗ’ ವಿಚಾರಗಳ ಬಗೆಗೆ ಗೋಷ್ಠಿಗಳನ್ನು ನಡೆಸಿಕೊಟ್ಟರು. ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಪ್ರಾಂಶುಪಾಲ ಮಹಮದ್ ಆಲಿ ಕೆ. ಪ್ರಬಂಧ ಮಂಡನೆಯ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕ ಗೋವಿಂದರಾಜು ಕೆ.ಎಂ. ಮತ್ತು ಚೇತನ್ ಎಂ. ವಿವಿಧ ಗೋಷ್ಠಿಗಳನ್ನು ನಿರ್ವಹಿಸಿದರು.

ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ. ಸೌಮ್ಯಾ ಹೆಚ್. ಪ್ರಾಸ್ತಾವಿಕ ಮಾತುಗಳನ್ನಾಡಿ, ಅನುವಾದ ಕೇವಲ ಭಾಷಾಂತರ ಮಾತ್ರವಲ್ಲ, ಬೇರೆ ಬೇರೆ ಭಾಷೆ, ಸಂಸ್ಕೃತಿಗಳ ಜೊತೆಗೆ ಅನುಸಂಧಾನ ಮಾಡಿಕೊಳ್ಳುವುದೇ ಆಗಿದೆ ಎಂದು ಹೇಳಿದರು. ಕಾರ್ಯಕ್ರಮ ಸಂಯೋಜಕ ಡಾ. ಪ್ರವೀಣ ಪದ್ಯಾಣ ವಂದಿಸಿ, ಬಬಿತಾ ನಿರೂಪಿಸಿದರು. ಕೇರಳ ವಿಶ್ವವಿದ್ಯಾಲಯದ ಡೀನರು, ಪ್ರಾಧ್ಯಾಪಕರು, ಸಾಹಿತ್ಯಾಸಕ್ತರು ಹಾಜರಿದ್ದರು. ಕರ್ನಾಟಕದ ವಿವಿಧ ಭಾಗಗಳಿಂದ ಬಂದಿದ್ದ ಸಂಶೋಧಕರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು.

 
 
 
 
 
 
 
 
 
 
 

Leave a Reply