ಸಹಕಾರಿ ಕ್ಷೇತ್ರಗಳು ಗ್ರಾಮೀಣ ಜನರ ಬದುಕಿಗೆ ಆರ್ಥಿಕ ಚೈತನ್ಯ ನೀಡುವಲ್ಲಿ ಸಹಕಾರಿಯಾಗಿವೆ. : ಡಾ.ಎಂ.ಎನ್. ರಾಜೇಂದ್ರ ಕುಮಾರ್

ಕೊರೋನಾದಿಂದ ವೈರಸ್ ನಿಂದ ಉಂಟಾದ ಸಂಕಷ್ಟ ಹಿನ್ನೆಲೆಯಲ್ಲಿ ಹಾಲು ಪೂರೈಸುವ ರೈತರಿಗೆ ಹಾಲಿನ ದರ ಕಡಿತ ಮಾಡಲಾಗಿದೆ. ಸೊಸೈಟಿಗೆ ಹಾಲು ಹಾಕುವವರಿಗೆ ಮುಂದಿನ ಜನವರಿ 1 ರಿಂದ ಈ ಹಿಂದಿನ ದರ ಸಿಗುವಂತಾಗಬೇಕು. ಆ ಮೂಲಕ ಗ್ರಾಮೀಣ ಭಾಗದ ಹೈನುಗಾರರಿಗೆ ಆರ್ಥಿಕ ಚೈತನ್ಯ ಸಿಗಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಆಶ್ರಯದಲ್ಲಿ ‘ಕೊರೋನಾ ಸೋಂಕು- ಆತ್ಮನಿರ್ಭರ ಭಾರತ- ಸಹಕಾರ ಸಂಸ್ಥೆಗಳು’ ಎಂಬ ಧ್ಯೇಯಯೊಂದಿಗೆ 67ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಕುಲಶೇಖರದ ಮಂಗಳೂರು ಡೇರಿ ಆವರಣದಲ್ಲಿ ಬುಧವಾರ ನಡೆದ ‘ವ್ಯವಹಾರ ಉದ್ಯೋಗ ಕಳೆದುಕೊಂಡವರು, ಬಾಧಿತರು, ಪುನರುದ್ಯೋಗಸ್ಥರಾಗಲು ಕೌಶಲ್ಯಾಭಿವೃದ್ಧಿ’ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕೊರೋನ ಸಂದರ್ಭದಲ್ಲೂ ಜಿಲ್ಲಾ ಸಹಕಾರಿ ಬ್ಯಾಂಕ್, ಹಾಲು ಉತ್ಪಾದಕರ ಒಕ್ಕೂಟ ಹಾಗೂ ಕ್ಯಾಂಪ್ಕೊ ದಂತಹ ಸಹಕಾರಿ ಕ್ಷೇತ್ರಗಳು ಗ್ರಾಮೀಣ ಜನರ ಬದುಕಿಗೆ ಆರ್ಥಿಕ ಚೈತನ್ಯ ನೀಡುವಲ್ಲಿ ಸಹಕಾರಿಯಾಗಿವೆ. ಹೊರ ದೇಶಗಳಿಂದ ಅಡಿಕೆ ಆಮದು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಅಡಿಕೆ ಬೆಲೆ ಹೆಚ್ಚಳವಾಗಿ ಕ್ಯಾಂಪ್ಕೊ, ರೈತರಿಗೆ ಸಹಕಾರಿಯಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಆರು ತಿಂಗಳು ಸಾಲ ಮರುಪಾವತಿ ಅವಧಿಯ ವಿಸ್ತರಣೆಯ ಸಂದರ್ಭದ ಚಕ್ರ ಬಡ್ಡಿಯನ್ನು ಕೇಂದ್ರ ಸರಕಾರ ಭರಿಸಿದ್ದರಿಂದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರಕ್ಕೂ ಹೆಚ್ಚಿನ ಹೊರೆ ಬಿದ್ದಿಲ್ಲ. 
ಆದರೆ ಕೊರೋನದಿಂದಾಗಿ ಕೆಲ ಸಮಯ ಹಾಲು ಉತ್ಪಾದಕರಿಂದ ಸಂಗ್ರಹಿಸಿದ ಹಾಲನ್ನು ವಿತರಿಸಲು ಸಾಧ್ಯವಾಗದೆ ಹಾಲು ಒಕ್ಕೂಟ ನಷ್ಟ ಅನುಭವಿಸಬೇಕಾಯಿತು. ಪ್ರಸ್ತುತ ಚೇತರಿಸಿಕೊಳ್ಳುತ್ತಿದೆ. ಗ್ರಾಮಾಂತರ ಸೊಸೈಟಿಗೆ ಹಾಲು ಹಾಕುವವರ ಬಗ್ಗೆ ಚಿಂತಿಸಿ ಅವರಿಗೆ ಉತ್ತಮ ದರ ಸಿಗುವಂತಾಗಬೇಕು ಎಂದರು. ಪ್ರಧಾನ ಮಂತ್ರಿ ಜನೌಷಧ ಕೇಂದ್ರ ಆರಂಭಿಸಲು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಸಹಕಾರಿ ಕ್ಷೇತ್ರಕ್ಕೆ ಅವಕಾಶ ನೀಡಿದ್ದಾರೆ. 
ಈಗಾಗಲೇ ಯೋಜನೆ ಉದ್ಘಾಟನೆಗೊಂಡಿದ್ದು, 500 ಸಹಕಾರಿ ಸಂಸ್ಥೆಗಳು ಮುಂದೆ ಬಂದಿವೆ. ಹಾಲಿನ ಸೊಸೈಟಿಗಳಲ್ಲೂ ಜನೌಷಧಿ ಮಳಿಗೆ ಆರಂಭಿಸಲು ಹಾಲು ಉತ್ಪಾದಕರ ಒಕ್ಕೂಟ ಪ್ರಯತ್ನ ನಡೆಸಬೇಕು ಎಂದು ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
 
 
 
 
 
 
 
 
 
 
 

Leave a Reply