ಸಹಕಾರಿ ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯತ್ವ ಸ್ಥಾನ ಅಗತ್ಯ: ​ಇಂದ್ರಾಳಿ ಜಯಕರ ಶೆಟ್ಟಿ

ಉಡುಪಿ, ಸೆ.22: ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕ 850 ಸಹಕಾರಿ ಸಂಘಗಳಿದ್ದು, ಅವುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತ್ಯೇಕ ಪ್ರಾಧಿಕಾರ ಸ್ಥಾಪಿಸಬೇಕು. ಅದೇ ರೀತಿ ರಾಜ್ಯದ 5ಕೋಟಿ ಮತದಾರರ ಪೈಕಿ ಶೇ.60ರಷ್ಟು ಮಂದಿ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದುದರಿಂದ ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಸಹಕಾರಿ ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯತ್ವ ಸ್ಥಾನವನ್ನು ನೀಡಬೇಕು ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಒತ್ತಾಯಿಸಿದ್ದಾರೆ. 

 
ಉಡುಪಿ ಅಜ್ಜರಕಾಡು ಪುರಭವನದ ಮಿನಿ ಹಾಲ್‌ನಲ್ಲಿ ಶುಕ್ರವಾರ ಜರಗಿದ ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ನ 2022-2023ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ರಾಜ್ಯ ಸರಕಾರ ಸಹಕಾರಿ ಕಾನೂನಿಗೆ ತಿದ್ದುಪಡಿಗೆ ಸಂಬಂಧಿಸಿ ಏಳು ಮಂದಿ ಸದಸ್ಯರ ಸಮಿತಿ ರಚಿಸಿದ್ದು, ಈ ಸಂಬಂಧ ಯಾವುದೇ ಸೂಚನೆ ಗಳಿದ್ದರೂ ಸಹಕಾರಿಗಳು ಯೂನಿ ಯನ್‌ಗೆ ಬರೆದು ಕಳುಹಿಸಬಹುದು. ಮುಂದೆ ಅದನ್ನು ಕ್ರೋಢಿಕರೀಸಿ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಯೂನಿಯನ್ ನಿರ್ದೇಶಕ ಹಾಗೂ ಶಾಸಕ ಯಶ್ಪಾಲ್ ಸುವರ್ಣ ಹಾಗೂ ಇತರ ಸಹಕಾರಿಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಯಶ್‌ಪಾಲ್ ಸುವರ್ಣ, ಸಹಕಾರಿ ಕಾನೂನುಗಳನ್ನು ತಿದ್ದು ಪಡಿ ಮಾಡುವ ಮೊದಲು ಸಹಕಾರಿಗಳ ಜೊತೆ ಚರ್ಚೆ ಮಾಡಬೇಕಾ ಗಿರುವುದು ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಯೂನಿಯನ್ ನೇತೃತ್ವದಲ್ಲಿ ಸಹಕಾರಿ ಸಚಿವ ರೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

ಸಹಕಾರಿ ಸಂಘಗಳಿಗೆ ಶಿಕ್ಷಣ ನಿಧಿಯನ್ನು ವಿತರಿಸಲಾಯಿತು. ವಾರ್ಷಿಕ ವರದಿ ಮತ್ತು ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಲಾಯಿತು. ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ನಿರ್ದೇಶಕರಾದ ಶಂಕರ ಪೂಜಾರಿ ಕಟಪಾಡಿ, ಎಚ್.ಗಂಗಾಧರ ಶೆಟ್ಟಿ, ಕೊರಗ ಪೂಜಾರಿ, ಮಂಜಯ್ಯ ಶೆಟ್ಟಿ, ಕೃಷ್ಣಮೂರ್ತಿ, ಅನಿಲ್ ಎಸ್.ಪೂಜಾರಿ, ಸುರೇಶ್ ರಾವ್, ಹರೀಶ್ ಶೆಟ್ಟಿ, ಹರೀಶ್ ಕಿಣಿ ಅಲೆವೂರು, ಅಶೋಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಯೂನಿಯನ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಹಾಲಪ್ಪ ಕೋಡಿಹಳ್ಳಿ ಸ್ವಾಗತಿಸಿದರು. ನಿರ್ದೇಶಕ ಮನೋಜ್ ಕರ್ಕೇರ ವಂದಿಸಿದರು. ನಿರ್ದೇಶಕ ಶ್ರೀಧರ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು

 
 
 
 
 
 
 
 
 
 
 

Leave a Reply