ಸಂಸ್ಕೃತ ಸಾಹಿತ್ಯವು ಜೀವನ ಮೌಲ್ಯವನ್ನು ಬೋಧಿಸುತ್ತದೆ – ಶ್ರೀ ಶ್ರೀ  ಈಶಪ್ರಿಯ ತೀರ್ಥ ಸ್ವಾಮೀಜಿ.

ಕಡಿಮೆ ಪದಗಳಲ್ಲಿ ಬಹ್ವರ್ಥಗಳನ್ನು, ಬಹುವಿಚಾರಗಳನ್ನು ನಿರೂಪಿಸುವ ಭಾಷೆ ಸಂಸ್ಕೃತ ಭಾಷೆ’ ಎಂದು ಶ್ರೀ ಶ್ರೀ ಈಶಪ್ರಿಯ ತೀರ್ಥ  ಶ್ರೀಪಾದರು ಹೇಳಿದರು.

ಅವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಇದರ ಸಹಯೋಗದಲ್ಲಿ ಮಂಗಳೂರು ವಿವಿ ಸಂಸ್ಕೃತ ಶಿಕ್ಷಕ ಸಂಘವು ಆಯೋಜಿಸಿದ ಪದವಿ ತರಗತಿಗಳ ಸಂಸ್ಕೃತ ಪಾಠ್ಯ ವಿಷಯಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಆಶೀರ್ವಚನವನ್ನು ನೀಡಿದರು.

‘ಶಾಲಾಕಾಲೇಜುಗಳ ಪಾಠ್ಯ ಪುಸ್ತಕಗಳು ವಿದ್ಯಾರ್ಥಿಗಳಲ್ಲಿ ಸಂಸ್ಕೃತ ಭಾಷೆಯ ಬಗ್ಗೆ ಒಲವನ್ನೂ ಅಭಿಮಾನವನ್ನೂ ಮೂಡಿಸುವ ಕೆಲಸ ಮಾಡಬೇಕು. ಸಂಸ್ಕೃತದಲ್ಲೇ ಹೆಚ್ಚೆಚ್ಚು ಯೋಚನೆ ಮಾಡುವ ಮೂಲಕ, ಮಾತನಾಡುವ ಮೂಲಕ ಸತತ ಪರಿಶ್ರಮದಿಂದ ದೇವಭಾಷೆಯನ್ನು ಉಳಿಸಬೇಕು’ ಎಂದು ನುಡಿದರು.

ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.‌ಮಧುಸೂದನ ಭಟ್ ಅವರು ‘ಸಂಸ್ಕೃತ ಸಾಹಿತ್ಯವು ಜೀವನ ಮೌಲ್ಯವನ್ನು ಬೋಧಿಸುತ್ತದೆ.‌ ಮಾತ್ರವಲ್ಲ ಎಲ್ಲರೂ  ಸಂಸ್ಕೃತದ ಪದಗಳನ್ನು ತಮ್ಮ ನಿತ್ಯದ ಆಡುಭಾಷೆಯಲ್ಲಿ ತಿಳಿದೋ ತಿಳಿಯದೆಯೋ ಬಳಸುತ್ತಿದ್ದಾರೆ. ಹಾಗಾಗಿ ಸಂಸ್ಕೃತವು ವ್ಯವಹಾರ ಭಾಷೆಯಲ್ಲ ಎಂಬ ಅಭಿಪ್ರಾಯ ಸರಿಯಲ್ಲ’ ಎಂದು ಹೇಳಿದರು.

ಅಭ್ಯಾಗತರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದ ಮಂಗಳೂರು ವಿವಿ ಸಂಸ್ಕೃತ ಶಿಕ್ಷಕರ ಸಂಘದ ಅಧ್ಯಕ್ಷರಾದ ಡಾ. ರಮೇಶ್ ಟಿ. ಎಸ್. ಅವರು ‘ಮ‌ಂಗಳೂರು ವಿವಿಯ ಸಂಸ್ಕೃತದ ಶೇಕಡಾ ಎಂಭತ್ತು ಪಾಠಗಳು ರಾಜ್ಯ ಸಮಿತಿಯಿಂದ ಸ್ವೀಕೃತವಾಗಿವೆ.

ಪಾಠ್ಯಗಳಲ್ಲಿ ಅಳವಡಿಸಿಕೊಂಡಿರುವ ಸಮಗ್ರತೆಗೆ ಇದು ಸಾಕ್ಷಿಯಾಗಿದೆ’ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸೇವಾನಿವೃತ್ತಿಯನ್ನು ಹೊಂದಿದ ಪ್ರೊ. ಜಯರಾಮ ಬಿ., ಪ್ರೊ. ಲೀಲಾವತಿ ಬಾಯಿ, ಡಾಕ್ಟರೇಟ್ ಪದವಿ ಪಡೆದ ಡಾ. ವಸುಮತಿ ಭಟ್, ಡಾ. ವಿಜಯಲಕ್ಷ್ಮಿ ಎಂ, ಹಾಗೂ ಅಂಬಿಕಾ ಪದವಿ‌ ಕಾಲೇಜಿನ ಪ್ರಾಂಶುಪಾಲರಾಗಿ ನಿಯುಕ್ತರಾದ ಡಾ. ವಿನಾಯಕ ಭಟ್ ಗಾಳಿಮನೆ ಇವರನ್ನು ಸಮ್ಮಾನಿಸಲಾಯಿತು.

ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಎ. ಅಧ್ಯಕ್ಷತೆ ವಹಿಸಿದರು. ಮಂಗಳೂರು ವಿವಿ ಸಂಸ್ಕೃತ ಶಿಕ್ಷಕರ ಸಂಘದ ಕಾರ್ಯದರ್ಶಿ ಡಾ. ಮಂಜುನಾಥ ಭಟ್ ಧನ್ಯವಾದಗಳನ್ನು ಅರ್ಪಿಸಿದರು.

ಡಾ. ಆನಂದ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಡಾ. ರಾಘವೇಂದ್ರ ಉಡುಪ ಸಮ್ಮಾನಿತರ ಪರಿಚಯ ಮಾಡಿದರು. ಪೂರ್ಣಪ್ರಜ್ಞ ಕಾಲೇಜಿನ ಎಕ್ಯೂಎಸಿ ಸಂಯೋಜಕರಾದ ಡಾ. ವಿನಯ ಕುಮಾರ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply