ಸಚಿವ ಈಶ್ವರಪ್ಪ ಮೇಲೆ ದಾಖಲಾದ FIRನಲ್ಲಿ ಏನಿದೆ?

ಉಡುಪಿ :ಗುತ್ತಿಗೆದಾರ ಸಂತೋಷ್ ಕೆ. ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಹೋದರ ಪ್ರಶಾಂತ್ ಗೌಡಪ್ಪ ಪಾಟೀಲ್ ನೀಡಿದ ದೂರಿನ ಅನ್ವಯ ಸಚಿವ ಈಶ್ವರಪ್ಪ ಅವರ ಮೇಲೆ FIR ದಾಖಲಾಗಿದೆ.

ಐಪಿಸಿ ಸೆಕ್ಷನ್ 34 ಮತ್ತು 306ರಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ.

ಈಶ್ವರಪ್ಪ ಮತ್ತು ಅವರ ಇಬ್ಬರು ಸಹಚರರ ಮೇಲೆ FIR ದಾಖಲಾಗಿದೆ ಎಂದು ಪಶ್ಚಿಮ ವಲಯದ ಐಜಿಪಿ ದೇವ ಜ್ಯೋತಿ ಮಾಹಿತಿ ನೀಡಿದ್ದು, ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಪಂಚನಾಮೆ ನಡೆಸಲಾಗಿದೆ.

ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದವರು ಹೇಳಿದ್ದಾರೆ.

2020-21ರಲ್ಲಿ ಹಿಂಡಾಲ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳ ನಿಮಿತ್ತ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಸಲುವಾಗಿ ಸಚಿವ ಈಶ್ವರಪ್ಪ ಅವರನ್ನು ಗುತ್ತಿಗೆದಾರ ಸಂತೋಷ್ ಅವರು ಕೆಲವು ಸ್ವಾಮೀಜಿಯವರೊಂದಿಗೆ ಭೇಟಿಯಾಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ವೇಳೆ ಕಾಮಗಾರಿ ನಡೆಸುವಂತೆ ಸಚಿವ ಈಶ್ವರಪ್ಪ ಅವರು ಹೇಳಿದ್ದು, ನಂತರ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದ್ದರು ಎನ್ನಲಾಗಿದೆ. ಅದರಂತೆ ಸರಕಾರದ ಆದೇಶ ಇಲ್ಲದೆಯೇ ಸಂತೋಷ್ ಅವರು 4 ಕೋಟಿ ರೂಪಾಯಿಯ ಕಾಮಗಾರಿಗಳನ್ನು ನಡೆಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಾಮಗಾರಿ ನಡೆಸಿದ ಮೇಲೆ ಸಚಿವ ಈಶ್ವರಪ್ಪ, ಮತ್ತು ಅವರ ಜೊತೆಗಾರರಾದ ಬಸವರಾಜು, ರಮೇಶ್ ಅವರನ್ನು ಹಲವು ಬಾರಿ ಭೇಟಿಯಾಗಿ ಅನುದಾನ ಬಿಡುಗಡೆಗೆ ಮನವಿ ಮಾಡಿದ್ದು, ಅವರು 40 ಶೇಕಡಾ ಕಮಿಷನ್ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಬೆಳಗಾವಿಯ ಗುತ್ತಿಗೆದಾರರ ಸಂಘ ಬಗ್ಗೆ ದೂರು ನೀಡಿದ್ದು, ಸಂತೋಷ್ ಪಾಟೀಲ್ ಕೂಡಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಸಂತೋಷ್ ತನ್ನ ಪತ್ನಿಗೆ ತಿಳಿಸಿ ಅನುದಾನ ಬಿಡುಗಡೆಗೆ ಹಲವಾರು ಬಾರಿ ಬೆಂಗಳೂರಿಗೂ ತೆರಳಿದ್ದರು.

 ತನಗೇನಾದರೂ ಅನಾಹುತವಾದರೆ ಅದಕ್ಕೆ ಸಚಿವ ಈಶ್ವರಪ್ಪ ಅವರೇ ಹೊಣೆ ಎಂದು ಸಂತೋಷ್ ಸಾಯುವ ಮೊದಲು ವೀಡಿಯೋ ಡೆತ್ ನೋಟ್ ಮಾಡಿ ಮಾಧ್ಯಮಗಳಿಗೆ ಕಳುಹಿಸಿದ್ದರು.

40 ಶೇಕಡಾ ಕಮಿಷನ್ ವಿಚಾರದಲ್ಲಿ ದೆಹಲಿಗೆ ತೆರಳಿ ಪ್ರದಾನ ಮಂತ್ರಿಯವರ ಕಚೇರಿಗೂ ದೂರಉ ನೀಡಿದ್ದರು.

ಕೊನೆಗೂ ಬಿಲ್ ಪಾವತಿ ಯಾಗದ ಕಾರಣಕ್ಕೆ ನೊಂದು ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ 5 ಪುಟಗಳ ದೂರಿನಲ್ಲಿ ಉಲ್ಲೇಖಿಸಲಾಗಿದೆ.

 ಪೊಲೀಸರು ಆತ್ಮಹತ್ಯೆ ಮಾಡಿದ ಲಾಡ್ಜಿನಿಂದ ಮೃತರ ಮೊಬೈಲ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸಚಿವ ಈಶ್ವರಪ್ಪ ಅವರನ್ನು ಅರೆಸ್ಟ್ ಮಾಡದೆ ಸಂತೋಷ್ ಅವರ ಶವಸಂಸ್ಕಾರ ಮಾಡುವುದಿಲ್ಲ ಎಂದು ಸಂತೋಷ್ ಕುಟುಂಬಸ್ಥರು ಪಟ್ಟುಹಿಡಿದಿದ್ದಾರೆ.

 
 
 
 
 
 
 
 
 
 
 

Leave a Reply