ಕೃಷ್ಣನ ನಾಡಿಗೆ ಡಿ ಕೆ ಶಿವಕುಮಾರ್

ಉಡುಪಿ: ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಅವರು ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ನವೆಂಬರ್ 29 ರಂದು ಆಗಮಿಸಿ, ಬರಲಿರುವ ಗ್ರಾಮ ಪಂಚಾಯತ್ ಚುನಾವಣೆಗಳಿಗೆ ಪಕ್ಷದ ಕಾರ್ಯಕರ್ತರಿಗೆ ಹುರುಪು ನೀಡಲಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು.

ಶನಿವಾರ ಉಡುಪಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 28ರಂದು ಸಂಜೆ 8 ಗಂಟೆಗೆ ಉತ್ತರಕನ್ನಡ ಜಿಲ್ಲಾ ಪ್ರವಾಸ ಮುಗಿಸಿ ಉಡುಪಿ ಜಿಲ್ಲಾ ಗಡಿಯಾದ ಶಿರೂರಿಗೆ ಆಗಮಿಸಲಿದ್ದಾರೆ. ಅಲ್ಲಿ ಪಕ್ಷದ ವತಿಯಿಂದ ಸ್ವಾಗತಿಸಲಾಗುವುದು, ಬಳಿಕ ಕಮಲ ಶಿಲೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಕೊಲ್ಲೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ನವೆಂಬರ್ 29ರ ಬೆಳಿಗ್ಗೆ ಕೊಲ್ಲೂರು ಮೂಕಾಂಬಿಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಉಡುಪಿಗೆ ಆಗಮಿಸಲಿದ್ದು, ಉಡುಪಿ ಬಾಸೆಲ್ ಮಿಷನರಿಸ್ ಆಡಿಟೋರಿಯಂ ನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಬಳಿಕ ಮಧ್ಯಾಹ್ನ 2 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ ಪುಷ್ಪಾ ಅಮರನಾಥ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಯು ಆರ್ ಸಭಾಪತಿ, ಕಿಸಾನ್ ಘಟಕದ ಸಚಿನ್ ಮಿಗಾ ಹಾಗೂ ಇತರ ನಾಯಕರು ಭಾಗವಹಿಸಲಿದ್ದು, ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದರು.

ಇನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ಡಿ ಕೆ ಶಿವಕುಮಾರ್ ಅವರು ಎನ್ ಎಸ್ ಯು ಐ ಅಧ್ಯಕ್ಷರಾಗಿದ್ದ ವೇಳೆ, ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಸಚಿವರಾಗಿದ್ದಾಗ ಕೂಡ ಉಡುಪಿಗೆ ಆಗಮಿಸಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಕಾರ್ಯಕರ್ತರಲ್ಲಿ ಸ್ಪೂರ್ತಿ ತುಂಬಿಸುವ ಕೆಲಸ ಮಾಡಲಿದ್ದು,ಈ ಬಾರಿ ಕೆಪಿಸಿಸಿ ಅಧ್ಯಕ್ಷರಾಗಿ ಮೊದಲ ಬಾರಿಗೆ ಆಗಮಿಸುತ್ತಿದ್ದಾರೆ.ಹಾಗೆ ಈ ಸಮಾವೇಶದ ಮೂಲಕ ಗ್ರಾಮೀಣ ಮಟ್ಟದಿಂದ ಕಾರ್ಯಕರ್ತರನ್ನು ಸಂಘಟಿಸುವ ಕೆಲಸ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಪ್ರಶಾಂತ್ ಜತ್ತನ್ನ, ಕೀರ್ತಿ ಶೆಟ್ಟಿ, ಅಣ್ಣಯ್ಯ ಶೇರಿಗಾರ್ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply