‘ದಾಸಭಾರತ’ ಹಿಂದಿ ಭಾಷಾಂತರ ಕೃತಿ ಲೋಕಾರ್ಪಣೆ

ಹಿರಿಯ ಸಾಹಿತಿ ಪ್ರೊ ರಾಮದಾಸ್‌ ಅವರ ಮೂಲ ಕನ್ನಡ ಕೃತಿ ‘ದಾಸಭಾರತ’ದ ಹಿಂದಿ ಅನುವಾದಿತ ಆವೃತ್ತಿಯು ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ನ ಮಣಿಪಾಲ್‌ ಯೂನಿವರ್ಸಲ್‌ ಪ್ರೆಸ್‌ ಮಾಹೆಯ ಬೇಸಿಕ್‌ ಸಾಯನ್ಸ್‌ ಬಿಲ್ಡಿಂಗ್‌ನ ಸಿರಿಗನ್ನಡ ಪುಸ್ತಕ ಮಳಿಗೆಯ ಅಂಗಣದಲ್ಲಿ ಆಯೋಜಿಸಿದ ‘ತಿಂಗಳ ಬೆಳಕು’ ಕಾರ್ಯಕ್ರಮದಲ್ಲಿ ಆಗಸ್ಟ್‌ 11, 2022 ರಂದು ಲೋಕಾರ್ಪಣೆಗೊಂಡಿತು. ಈ ಕೃತಿಯನ್ನು ಗುಂಡ್ಮಿಯ ನಿರಾಲ- ಮುಕ್ತಿಬೋಧ್‌ ಪ್ರಕಾಶನ ಪ್ರಕಟಿಸಿದೆ.

ಕೃತಿಯನ್ನು ಬಿಡುಗಡೆಗೊಳಿಸಿದ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷ ಅಜಕ್ಕಳ ಗಿರೀಶ ಭಟ್‌ ಹಿಂದಿ ಅನುವಾದದ ಮೂಲಕ ಕನ್ನಡಕೃತಿಯೊಂದು ಭಾರತದಾದ್ಯಂತ ವಾಚಕರನ್ನು ಗಳಿಸಿಕೊಳ್ಳುವ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು, ‘ಪುರಾಣ ಕಥನಗಳನ್ನು ಮತ್ತೆ ಮತ್ತೆ ಹೇಳಲು, ಕೇಳಲು ಬಯಸುವುದರ ಹಿಂದೆ ಯಾವುದೋ ಅಜ್ಞಾತ ಕಾರಣವಿದೆ. ಅಂಥ ಕಾವ್ಯ-ಕಲ್ಪನೆಗಳನ್ನು ಗೌರವಿಸಿಯೇ ನಾವು ಪುರಾಣಗಳನ್ನು ಮರುಕಥನಕ್ಕೊಳಪಡಿಸಬೇಕು. ಪುರಾಣಗಳನ್ನು ಅತಿಶಯವಾದ ವಾಸ್ತವತಾವಾದದ ಮೂಲಕ ವಿಶ್ಲೇಷಿಸಿದರೆ ಸ್ವಾರಸ್ಯ ಕೆಡುವುದು, ಮಹಾಭಾರತವನ್ನು ಮರುಕಥನಕ್ಕೆ ಒಳಪಡಿಸುವಲ್ಲಿ ‘ದಾಸಭಾರತ’ವು ಸಂಯಮವನ್ನು ಕಾಯ್ದುಕೊಂಡಿದೆ’ ಎಂದರು.
ರಾಮದಾಸ್‌ ಅವರು ಕನ್ನಡ ‘ಭಾಸಭಾರತ’ದ ಕೆಲವು ಭಾಗಗಳನ್ನು ಓದಿ, ಪುರಾಣ ಮರುಕಥನಕ್ಕೆ ಪ್ರೇರಣೆಯಾದ ವಿಚಾರಗಳನ್ನು ಪ್ರಸ್ತಾವಿಸಿದರು, ‘ದಾಸಭಾರತ’ವನ್ನು ಹಿಂದಿಗೆ ಅನುವಾದಿಸಿದ ಹಿರಿಯ ಸಾಹಿತಿ ಮಾಧವಿ ಭಂಡಾರಿ ಅವರು ‘ದಾಸಭಾರತ’ದ ಜೊತೆಗಿನ ಅನುವಾದ ಪ್ರಕ್ರಿಯೆಯ ದೀರ್ಘಪ್ರಯಾಣವನ್ನು ವಿವರಿಸಿದರು. ಮಹಾಭಾರತದಂಥ ಮಹಾಕಧನವನ್ನು ನಿರೂಪಿಸಲು ಸಂಸ್ಕೃತಭೂಯಿಷ್ಠವಾದ ಹಿಂದಿ ಭಾಷೆಯನ್ನು ಬಳಸಿರುವ ಬಗ್ಗೆ ಉಲ್ಲೇಖಿಸಿದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುರಲೀಧರ ಉಪಾಧ್ಯ ಹಿರಿಯಡಕ ಅವರು, ‘ ರಾಮದಾಸ್‌ ಅವರು ಕರ್ನಾಟಕದ ಅತ್ಯುತ್ತಮ ಕನ್ನಡ ಪ್ರಾಧ್ಯಾಪಕರಲ್ಲಿ ಒಬ್ಬರು. ಸಾಹಿತ್ಯದ ಕುರಿತ ಅವರ ಅಪಾರವಾದ ಓದಿನಿಂದಾಗಿ ‘ದಾಸಭಾರತ’ ಮೌಲಿಕ ಕೃತಿಯಾಗಿ ಬಂದಿದೆ. ಪುರಾಣವನ್ನು ಬಗೆಯುವುದರಲ್ಲಿ ಇರಾವತಿ ಕರ್ವೆಯವರ ‘ಯುಗಾಂತ’ ಮೂಡಿಸಿದ ವಿಚಾರಪರಂಪರೆಯನ್ನು ‘ಭಾಸಭಾರತ’ ಮುಂದುವರಿಸಿಕೊಂಡು ಬಂದಿದೆ. ಈ ಕೃತಿಯ ಕುರಿತು ಕನ್ನಡದಲ್ಲಿ ವಿಮರ್ಶೆಗಳು ಮೂಡಿಬರಬೇಕಿವೆ’ ಎಂದರು.
ಮಣಿಪಾಲ್‌ ಯೂನಿವರ್ಸಲ್‌ ಪ್ರೆಸ್‌ನ ಪ್ರಧಾನ ಸಂಪಾದಕರಾದ ನೀತಾ ಇನಾಂದಾರ್‌ ಅವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಮಣಿಪಾಲ್‌ ಯೂನಿವರ್ಸಲ್‌ ಪ್ರೆಸ್‌ನ ‘ತಿಂಗಳ ಬೆಳಕು’ ಕಾರ್ಯಕ್ರಮದ ಹಿಂದಿರುವ ಅನೌಪಚಾರಿಕ ಮಾತು-ಕತೆಯ ಕಲ್ಪನೆಯನ್ನು ಉಲ್ಲೇಖಿಸಿದ ಅವರು, ಹಿಂದಿ ಮತ್ತು ದಕ್ಷಿಣಭಾರತ ಭಾಷೆಗಳ ಸಂಘರ್ಷ ನಡೆಯುತ್ತಿರುವಾಗಲೇ ಭಾಷಾಸೌಹಾರ್ದತೆಯ ಸೂಚಕವಾಗಿ ‘ದಾಸಭಾರತ’ನ ಹಿಂದಿ ಅವತರಣಿಕೆಯನ್ನು ಬಿಡುಗಡೆ ಮಾಡುವ ಸಂದರ್ಭ ಒದಗಿರುವುದು ಅರ್ಥಪೂರ್ಣ ಎಂದರು.

‘ದಾಸಭಾರತ’ದ ಆಯ್ದ ಕನ್ನಡ-ಹಿಂದಿ ಭಾಗಗಳನ್ನು ಮಣಿಪಾಲ್‌ ಯೂನಿವರ್ಸಲ್‌ ಪ್ರೆಸ್‌ನ ಮಾರ್ಕೆಂಟಿಂಗ್‌ ಕಾರ್ಯನಿರ್ವಾಹಕಿ ರೇವತಿ ನಾಡಗೀರ್‌ ಮತ್ತು ಮಾಹೆಯ ಭಾಷಾಧ್ಯಯನ ವಿಭಾಗದ ಉಪನ್ಯಾಸಕಿ ಅದಿತ್ಯಾ ದಿವ್ಯಾ ಸಿಂಗ್‌ ವಾಚನ ಮಾಡಿದರು. ಶಿಲ್ಪಾ ಜೋಶಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಕಾಶಕರ ಪರವಾಗಿ ಎಸ್‌. ವಿ. ಭಟ್‌ ವಂದನಾರ್ಪಣೆ ಗೈದರು.

 
 
 
 
 
 
 
 
 
 
 

Leave a Reply