ಮಲಗಿದ್ದಲ್ಲೇ ಮೃತಪಟ್ಟ ಯುವತಿ!

ಯುವತಿಯೋರ್ವಳು ಮಲಗಿದ್ದಲ್ಲೇ ಮೃತಪಟ್ಟ ಘಟನೆ ಬಂಟ್ವಾಳದ ಮಧ್ವ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.

ಕಾವಳಮೂಡುರು ಗ್ರಾಮದ ಪುಳಿಮಜಲು ನಿವಾಸಿ ರಾಜ ಅವರ ಪುತ್ರಿ ಮಿತ್ರ ಶೆಟ್ಟಿ (23) ಮೃತಪಟ್ಟ ಯುವತಿ. ರಾತ್ರಿ ಊಟ ಮಾಡಿ ಮಲಗಿದ ಯುವತಿ ಬೆಳಗ್ಗೆ ನೋಡುವಾಗ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಈಕೆಯ ತಂದೆ ಮತ್ತು ಸಹೋದರ ಇಬ್ಬರೂ ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಕಾರಣ ಮಿತ್ರ ಮತ್ತು ಈಕೆಯ ತಾಯಿ ಪ್ರಸ್ತುತ ಕಾವಳಪಡೂರು ಗ್ರಾಮದ ಮದ್ವ ಕಂಬಲಡ್ಡದ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದರು. ರಾತ್ರಿ ಊಟ ಮಾಡಿ ಒಟ್ಟಿಗೆ ಮಲಗಿದ್ದವಳು ಬೆಳಿಗ್ಗೆ ಎದ್ದು ನೋಡುವಾಗ ಎದ್ದೇಳದೇ, ಮಾತನಾಡದೇ ಇದ್ದಾಗ ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ವೇಳೆ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ.

ಬಳಿಕ ಮೃತದೇಹವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ. ಆರಂಭದಲ್ಲಿ ಹೃದಯಾಘಾತದಿಂದ  ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿತ್ತು. ಆದರೂ ಸಾವಿನಲ್ಲಿ ಸಂಶಯವಿದ್ದು ವೈದ್ಯರು ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಿದ ಬಳಿಕ ಸಾವಿನ ಸ್ಪಷ್ಟವಾದ ಕಾರಣ ಸಿಗಬಹುದು ಎಂದಿದ್ದಾರೆ.

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 

Leave a Reply