ಉತ್ಸವ, ಧಾರ್ಮಿಕ ಕಾರ್ಯಕ್ರಮ, ಕೋಲ, ನೇಮೋತ್ಸವಕ್ಕೆ ಅವಕಾಶವಿಲ್ಲ-ಜಿಲ್ಲಾಧಿಕಾರಿ ಜಿ. ಜಗದೀಶ್

ಉಡುಪಿ: ನೈಟ್ ಕರ್ಫ್ಯೂಗೆ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಮಲ್ಪೆ-ಉಡುಪಿ-ಮಣಿಪಾಲದಲ್ಲಿ ಒಟ್ಟು 5 ಕಡೆಗಳಲ್ಲಿ ತಾತ್ಕಾಲಿಕ ಚೆಕ್‌ಪೋಸ್ಟ್ ಇರಲಿದೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸ ಲಾಗಿದ್ದು, ಒಬ್ಬರು ಡಿವೈಎಸ್‌ಪಿಯನ್ನು ನೋಡಲ್ ಅಧಿಕಾರಿಯಾಗಿ ಇರಲಿದ್ದಾರೆ ಎಂದು ಎಸ್‌ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ರಾತ್ರಿ 10 ಗಂಟೆ ಬಳಿಕ ಜನರು ಅನಗತ್ಯ ಓಡಾಡದೆ ಸರ್ಕಾರದ ನಿಯಮ ಪಾಲಿಸಬೇಕು. ನಿಯಮ ಮೀರಿದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಎಂದಿನಂತೆ ರಾತ್ರಿ ಬೀಟ್ ಪೊಲೀಸ್ ವ್ಯವಸ್ಥೆ ವಿಶೇಷ ನಿಗಾ ಇಡಲಿದೆ ಎಂದರು.

10ರಿಂದ 20 ರ ವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಗೆವರೆಗೆ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮುಂದಿನ ಆದೇಶದವರೆಗೆ ನೈಟ್ ಕರ್ಫ್ಯೂ ವಿಧಿಸಲಾಗಿದ್ದು, ಬಾರ್, ವೈನ್ ಶಾಪ್, ಹೋಟೆಲ್, ರೆಸ್ಟೋರೆಂಟ್, ಅಂಗಡಿ, ಮುಂಗಟ್ಟು ಮತ್ತು ಎಲ್ಲ ರೀತಿಯ ವ್ಯವಹಾರದ ಅಂಗಡಿ, ಶಾಪಿಂಗ್ ಕಾಂಪ್ಲೆಕ್ಸ್‌ಗಳನ್ನು 10 ಗಂಟೆಯೊಳಗೆ ಬಂದ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ಉತ್ಸವ, ಧಾರ್ಮಿಕ ಕಾರ್ಯಕ್ರಮ, ಕೋಲ, ನೇಮೋತ್ಸವಕ್ಕೆ ಅವಕಾಶವಿಲ್ಲ. ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ವೈದ್ಯಕೀಯ ಸೇವೆಗಾಗಿ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಕಾರ್ಖಾನೆ, ಕಂಪನಿ, ಸಂಸ್ಥೆಗಳು ಯಥಾ ರೀತಿಯಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಆದರೆ ಸಂಬಂಧಿಸಿದ ಕಾರ್ಮಿಕರು, ನೌಕರರು ಕರೊನಾ ಕರ್ಪ್ಯೂ ಅವಧಿಗೆ ಮುನ್ನವೇ ಕರ್ತವ್ಯಕ್ಕೆ ಹಾಜರಿರಬೇಕು ಎಂದರು.

ವೈದ್ಯಕೀಯ ಸೇವೆ ಮತ್ತು ತುರ್ತು ಚಟುವಟಿಕೆಗೆ ಮಾತ್ರ ಅನುಮತಿ. ಉಳಿದಂತೆ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ನಿಬರ್ಂಧಿಸಲಾಗಿದೆ. ಅತ್ಯವಶ್ಯ ಸೇವೆ ಒದಗಿಸುವ ವಾಹನಗಳು, ಸರಕು ಸಾಗಾಟ ವಾಹನಗಳು, ಹೋಮ್ ಡೆಲಿವರಿ, ಇ-ಕಾಮರ್ಸ್ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

 
 
 
 
 
 
 
 
 
 
 

Leave a Reply