ಮಲ್ಪೆ: ಒಂದೇ ಕುಟುಂಬದ ನಾಲ್ವರ ಭೀಕರ ಕೊಲೆ!

ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹಂಪನಕಟ್ಟೆ ಸಮೀಪದ ನೇಜಾರಿನ ತೃಪ್ತಿ ಲೇಔಟ್‌ನಲ್ಲಿ ಭಾನುವಾರ ನಡೆದಿದೆ.

ಕೊಲೆಯಾದವರನ್ನು ಹಸೀನಾ (46 ), ಅಫ್ನಾನ್ (23), ಅಯ್ನಾಝ್ (21), ಆಸಿಂ (12) ಎಂದು ಗುರುತಿಸಲಾಗಿದೆ. ಚೂರಿಯಿಂದ ಚುಚ್ಚಿ ಕೊಲೆಗೈಯಲಾಗಿದೆ. ಮೃತ ಹಸೀನಾ ಅವರ ಅತ್ತೆಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವ ಉದ್ದೇಶಕ್ಕೆ ಕೊಲೆಯಾಗಿದೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ.

ಮನೆಯಲ್ಲಿ ಯಾವ ವಸ್ತುಗಳು ಕಳವು ನಡೆದಿಲ್ಲ. ಅಪರಿಚಿತ ವ್ಯಕ್ತಿಯೊಬ್ಬ ಬಿಳಿ ಬಣ್ಣದ ಶರ್ಟ್, ಬಿಳಿ ಬಣ್ಣದ ಮಾಸ್ಕ್ ಧರಿಸಿ ಬಂದು ಈ ಕೃತ್ಯ ಎಸಗಿರುವ ಮಾಹಿತಿ ಲಭ್ಯವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಏಕಾಏಕಿ ಮನೆಗೆ ನುಗ್ಗಿದ ದುಷ್ಕರ್ಮಿ ಮಾತಿನ ಚಕಮಕಿ ನಡೆಸಿದ್ದಾನೆ. ಮೊದಲು ಹಸೀನಾ, ಅಫ್ನಾನ್ ಹಾಗೂ ಅಯ್ನಾಝ್‌ಗೆ ಇರಿದಿದ್ದಾನೆ. ಈ ವೇಳೆ ಹೊರಗಡೆ ಆಟವಾಡುತ್ತಿದ್ದ ಆಸಿಂ ಸದ್ದು ಕೇಳಿ ಮನೆ ಒಳಗಡೆ ಬಂದಿದ್ದಾನೆ. ನಂತರ ಕಿರಿಯ ಮಗನನ್ನೂ ಕೊಂದಿದ್ದಾನೆ.

ಇದಾದ ಬಳಿಕ ಗಲಾಟೆ ಕೇಳಿ ಪಕ್ಕದ ಮನೆಯ ಯುವತಿ ತನ್ನ ಮನೆಯಿಂದ ಹೊರ ಬಂದಿದ್ದಾಳೆ. ದುಷ್ಕರ್ಮಿ ಆಕೆಯನ್ನೂ ಬೆದರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮನೆಯೊಳಗಿದ್ದ ಹಸೀನಾ ಅತ್ತೆಗೂ ತೀವ್ರವಾದ ಗಾಯಗಳಾಗಿವೆ. ಹಸೀನಾ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಅವರ ಅನುಪಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ನಡೆದಿದೆ.

ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಎಸ್‌ಪಿ ಅರುಣ್ ತಿಳಿಸಿದ್ದಾರೆ.

 
 
 
 
 
 
 
 

Leave a Reply