ಜಪ್ಪಿನಮೊಗರು: ಹಿಟ್ & ರನ್; ಓರ್ವ ಸಾವು, ಮತ್ತೋರ್ವ ಗಂಭೀರ

ಹೆದ್ದಾರಿ ಅಂಚಿನ ಗಿಡಗಂಟಿಗಳನ್ನ ಕಡಿದು ಸ್ವಚ್ಛತೆಯಲ್ಲಿ ತೊಡಗಿದ್ದ ಇಬ್ಬರು ಕಾರ್ಮಿಕರಿಗೆ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದ್ದು ಓರ್ವ ವಲಸೆ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಕಾರ್ಮಿಕನ ಬೆನ್ನು ಮೂಳೆ ಮುರಿದು ಆಸ್ಪತ್ರೆ ಸೇರಿದ ಘಟನೆ ಶುಕ್ರವಾರ ಬೆಳ್ಳಂಬೆಳಗ್ಗೆ ರಾ.ಹೆ .66 ರ ಜಪ್ಪಿನಮೊಗರಿನಲ್ಲಿ ಸಂಭವಿಸಿದೆ.

ಮೃತ ಯುವಕ ಬಿಹಾರ ಮೂಲದ ಎಂ.ಡಿ. ವಿಕ್ಕಿ ಖಾನ್(26) ಮತ್ತು ಗಾಯಗೊಂಡ ವ್ಯಕ್ತಿ ಸಾಸ್ತಾನ ನಿವಾಸಿ ಗೋಪಾಲ ಪೂಜಾರಿ ಎಂದು ತಿಳಿದು ಬಂದಿದೆ. ಜಪ್ಪಿನಮೊಗರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಪಕ್ಕದಲ್ಲೇ ಘಟನೆ ಸಂಭವಿಸಿದೆ. ಹೆದ್ದಾರಿಯ ಅಂಚಿನಲ್ಲಿ ಹಾಕಿರುವ ತಗಡಿನ ರಕ್ಷಣಾ ಬೇಲಿಯ ಬಳಿಯಲ್ಲಿ ನಾಲ್ವರು ವಲಸೆ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು. 

ಈ ವೇಳೆ ತೊಕ್ಕೊಟ್ಟಿನಿಂದ ಮಂಗಳೂರಿಗೆ ಧಾವಿಸುತ್ತಿದ್ದ ವಾಹನವೊಂದು ಇಬ್ಬರು ಕಾರ್ಮಿಕರಿಗೆ ಬಲವಾಗಿ ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಓರ್ವ ಕಾರ್ಮಿಕ ಸ್ಥಳದಲ್ಲೇ ಅಸುನೀಗಿದರೆ ಮತ್ತೋರ್ವ ಗಂಭೀರ ಗಾಯಗೊಂಡಿದ್ದು ಆತನನ್ನ ಸಂಚಾರಿ ಪೊಲೀಸರು ತಕ್ಷಣ ಆಸ್ಪತ್ರೆ ಸೇರಿಸಿದ್ದಾರೆ. ಘಟನಾ ಸ್ಥಳದಲ್ಲಿದ್ದ ವಿದ್ಯಾರ್ಥಿಗಳಿಬ್ಬರು ಪಿಕ್ ಅಪ್ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿರುವುದಾಗಿ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರ ಮಾಹಿತಿಯಂತೆ ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ತನಿಖೆ ನಡಸುತ್ತಿದ್ದಾರೆ.

Leave a Reply