ಅಭಿನವ ಹಾಲಶ್ರೀ ಸ್ವಾಮೀಜಿ ಅಂದರ್

ಬೆಂಗಳೂರು: ಬಿಜೆಪಿ ಟಿಕೆಟ್ ಹಗರಣದಲ್ಲಿ ಮೂರನೇ ಆರೋಪಿಯಾಗಿರುವ ವಿಜಯನಗರ ಜಿಲ್ಲೆಯ ಹಿರೇಹಡಗಲಿ ತಾಲೂಕಿನ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಬೆಂಗಳೂರು ಪೊಲೀಸ್ ನ ಅಪರಾಧ ನಿಗ್ರಹ ದಳದ ಪೊಲೀಸರು ಒಡಿಶಾದಲ್ಲಿ ವಶಕ್ಕೆ ಪಡೆದಿದ್ದಾರೆ.

ಪ್ರಕರಣ ಬೆಳಕಿಗೆ ಬಂದಾಗಿನಿಂದ ಸ್ವಾಮೀಜಿ ನಾಪತ್ತೆಯಾಗಿದ್ದರು. ಅವರು ಆಶ್ರಮದಲ್ಲಿರುವ ಕಾರನ್ನು ಖುದ್ದಾಗಿ ಡ್ರೈವ್ ಮಾಡಿಕೊಂಡು ಬೇರೆಲ್ಲಿಗೋ ಹೋಗಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿದ್ದವು. ಹಾಗಾಗಿ, ಅತ್ತ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.

ಮೂರು ದಿನಗಳ ಹಿಂದೆ, ಸ್ವಾಮೀಜಿಯವರ ಖಾಸಗಿ ಡ್ರೈವರ್ ಲಿಂಗರಾಜುನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಆತನ ವಿಚಾರಣೆ ನಡೆಸಿದಾಗ, ಸ್ವಾಮೀಜಿಯವರು ತಾವೇ ಖುದ್ದಾಗಿ ಕಾರು ಚಲಾಯಿಸಿಕೊಂಡು ಮೈಸೂರಿಗೆ ಹೋಗಿದ್ದಾಗಿಯೂ, ಅಲ್ಲಿ ಕಾರಿನ ನಂಬರ್ ಪ್ಲೇಟ್ ಗಳನ್ನು ಕಳಚಿಟ್ಟು ಅಲ್ಲಿಂದ ಹೈದರಾಬಾದ್ ಗೆ ತೆರಳಿದ್ದಾಗಿಯೂ ತಿಳಿದುಬಂದಿತ್ತು. ಹಾಗಾಗಿ, ಸಿಸಿಬಿ ಪೊಲೀಸರ ತಂಡವೊಂದು ಹೈದರಾಬಾದ್ ತೆರಳಿತ್ತು.

ಆದರೆ, ಸೆ. 19ರ ಬೆಳಗ್ಗೆ ಬಂದ ಮಾಹಿತಿ ಪ್ರಕಾರ, ಸ್ವಾಮೀಜಿಯವರನ್ನು ಒಡಿಶಾದಲ್ಲಿ ಬಂಧಿಸಲಾಗಿದೆ. ಒಡಿಶಾದ ಕಟಕ್ ನಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ನೆಲೆಸಿದ್ದ ಸ್ವಾಮೀಜಿಯನ್ನು ಪತ್ತೆ ಹಚ್ಚಿದ್ದ ಪೊಲೀಸರು ಹೋಟೆಲ್ ಗೆ ಹೋಗಿದ್ದರು.

ಸಿಸಿಬಿ ಅಧಿಕಾರಿಗಳು ಸ್ವಾಮಿಜಿಯನ್ನು ಒಡಿಶಾದಿಂದ ಬಂಧಿಸಿದ್ದು ,ಸಂಜೆ ವೇಳೆಗೆ ಬೆಂಗಳೂರಿಗೆ ಕರೆತಂದು ಕೋರ್ಟ್ ಮುಂದೆ ಹಾಜರ್​​ ಪಡಿಸಲಿದ್ದಾರೆ. ಹಾಲಶ್ರೀ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಜಾಮೀನು ಸಿಗೋ ಮುನ್ನವೇ ಸಿಸಿಬಿ ಪೊಲೀಸರಿಂದ ಅರೆಸ್ಟ್​ ಆಗಿದ್ದಾರೆ.

 
 
 
 
 
 
 
 
 
 
 

Leave a Reply