ಅವಧಿ ಮುಗಿದಿರುವ ಬಿ ಮತ್ತು ಸಿ ಯ ದೇವಸ್ಥಾನಗಳಿಗೆ ನೇಮಕಾತಿ ಶೀಘ್ರ~ಕೋಟ ಶ್ರೀನಿವಾಸ ಪೂಜಾರಿ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ನ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯಲ್ಲಿ ಈಗಾಗಲೇ ಬಿ ಮತ್ತು ಸಿ ವರ್ಗದ ಒಟ್ಟು 52 ದೇವಸ್ಥಾನಗಳ ಅವಧಿ ಮುಗಿದಿದ್ದು, ಆಡಳಿತಾಧಿಕಾರಿ ನೇಮಕಾತಿ ಆಗಿರುವ ಈ ದೇವಸ್ಥಾನಗಳಿಗೆ, ನೂತನ ವ್ಯವಸ್ಥಾಪನ ಸಮಿತಿಯನ್ನು ರಚಿಸಲು ಪ್ರಕಟಣೆ ನೀಡುವಂತೆ ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಈಗಾಗಲೇ ಅವಧಿ ಮುಗಿದಿರುವ ಬಿ ಮತ್ತು ಸಿ ಯ ದೇವಸ್ಥಾನಗಳಿಗೆ ನೇಮಕಾತಿ ಮಾಡಿರುವ ಆಡಳಿತಾಧಿಕಾರಿ ಆದೇಶಕ್ಕೆ ಅನುಮೋದನೆ ನೀಡಿದ ಸಚಿವರು, ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾದ ಧಾರ್ಮಿಕ ಪರಿಷತ್ ಸದಸ್ಯರಿಗೆ ಪರಿಷತ್ ನ ಕಾರ್ಯ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ವೇದ ಪಾಠಶಾಲೆ ಆರಂಭಿಸುವ ಕುರಿತಂತೆ ಸೂಕ್ತ ಸ್ಥಳ ಗುರುತಿಸುವಂತೆ ಸಮಿತಿಯ ಸದಸ್ಯರಿಗೆ ತಿಳಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎಲ್ಲಾ ಸದಸ್ಯರಿಗೆ ಗುರುತಿನ ಚೀಟಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿ, ಜಿಲ್ಲೆಯಲ್ಲಿ ತಸ್ತೀಕ್ ಬಿಡುಗಡೆ ಕುರಿತಂತೆ ಮಾಹಿತಿ ಪಡೆದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಧಾರ್ಮಿಕ ಧತ್ತಿ ಇಲಾಖೆಯ ಪ್ರಭಾರ ಸಹಾಯಕ ಆಯುಕ್ತ ಶೇಷಪ್ಪ, ತಹಸೀಲ್ದಾರ್ ಸುಧಾಕರ್, ಜಿಲ್ಲಾ ಧಾರ್ಮಿಕ ಪರಿಷತ್ ನ ಸದಸ್ಯರುಗಳಾದ ಹರಿಪ್ರಸಾದ್ ಭಟ್, ರಾಮ ಭಟ್, ವಾಸುದೇವ ಹಂಗಾರಕಟ್ಟೆ, ಶಾಲಿನಿ, ಸುನೀಲ್, ಪ್ರಣಯ್ ಶೆಟ್ಟಿ, ರಮಾಕಾಂತ ದೇವಾಡಿಗ, ಮೋಹನ ಉಪಾಧ್ಯಾಯ ಉಪಸ್ಥಿತರಿದ್ದರು.

Leave a Reply