ನಶಾ ಮುಕ್ತ ಉಡುಪಿ ಜಿಲ್ಲೆಯನ್ನಾಗಿ ಪರಿವರ್ತಿಸಲು ಸಹಕರಿಸಿ~ ಜಿಲ್ಲಾಧಿಕಾರಿ ಜಿ. ಜಗದೀಶ್  

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ನಶಾ ಮುಕ್ತ ಭಾರತ್ ಅಭಿಯಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಉಡುಪಿ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸರಬರಾಜು, ಬಳಕೆಯನ್ನು ಸಂಪೂರ್ಣವಾಗಿ ನಿಗ್ರಹಿಸುವ ಮೂಲಕ ಉಡುಪಿಯನ್ನು ನಶೆ ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಅಗತ್ಯವಿರುವ ಯೋಜನೆಗಳನ್ನು ಸಿದ್ದಪಡಿಸುವಂತೆ ಸೂಚಿಸಿದರು. ಕೇಂದ್ರ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ನಶಾ ಮುಕ್ತ ಭಾರತ ಶಿಬಿರ ಆಯೋಜಿಸಬೇಕಿದೆ, ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕ್ರಿಯಾಶೀಲ ಪ್ರಯತ್ನಗಳನ್ನು ನಡೆಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತಂತೆ ಹೆಚ್ಚು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ, ಪ್ರತಿ ಶಾಲಾ ಕಾಲೇಜುಗಳಲ್ಲಿ ಪ್ರತ್ಯೇಕ ಕ್ಲಬ್ ಗಳನ್ನು ರಚಿಸಿ, ಅದರ ಮೂಲಕ ವಿವಿಧ ಚಟುವಟಿಕೆ , ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಯಾವುದೇ ಶಾಲೆ ಅಥವಾ ಕಾಲೇಜಿನ ಕ್ಯಾಂಪಸ್ ಗಳಲ್ಲಿ ಮಾದಕ ವಸ್ತುಗಳ ಬಳಕೆ ಪ್ರಕರಣ ಕಂಡುಬಂದಲ್ಲಿ ಆ ಸಂಸ್ಥೆಯ ಮುಖ್ಯಸ್ಥರ ವಿರುದ್ದ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದರು.

ಮಾದಕ ವಸ್ತುಗಳ ಬಳಕೆ ನಡೆಯುತ್ತಿರುವ ಬಗ್ಗೆ, ಸರಬರಾಜು ಬಗ್ಗೆ ಮತ್ತು ಮಾದಕ ವ್ಯವನಿಗಳ ಕುರಿತು ಮಾಹಿತಿ ನೀಡಲು ಪ್ರತ್ಯೇಕ ದೂರವಾಣಿ ಸಂಖ್ಯೆಯ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬೇಕು, ಪ್ರತ್ಯೇಕ ಫೇಸ್ ಬುಕ್ ಪೇಜ್ ರಚಿಸಿ, ಮಾದಕ ವಸ್ತುಗಳ ಬಳಕೆಯ ಅಪಾಯ, ಇದರ ನಿಯಂತ್ರಣ ಕುರಿತು ಜಿಲ್ಲೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಪ್ರಗತಿ ವರದಿಯನ್ನು ಇದರಲ್ಲಿ ಅಳವಡಿಸಿ ಎಂದು ಜಿಲ್ಲಾಧಿಕಾರಿ ಹೇಳಿದರು. ಜಿಲ್ಲೆಯೊಳಗೆ ಮಾದಕ ವಸ್ತುಗಳ ಸರಬರಾಜು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಹೆಚ್ಚಿನ ಪರಿಶೀಲನೆ, ಅನಿರೀಕ್ಷಿತ ದಾಳಿಗಳನ್ನು ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಡಿಡಿಪಿಯ ಶೇಷಶಯನ ಕಾರಿಂಜ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply