ಜನಪದ ಉಳಿಸಲು ಜಾನಪದ ಹಬ್ಬ: ತಲ್ಲೂರು

ಉಡುಪಿ: ನಮ್ಮ ಜನಪದ ಕಲೆಗಳನ್ನು ಉಳಿಸಬೇಕು ಎಂಬ ಮಹತ್ತರವಾದ ಉದ್ದೇಶದಿಂದ ಜಿಲ್ಲೆಯಾದ್ಯಂತ ಜಾನಪದ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.

ಸುಮನಸಾ ಕೊಡವೂರು, ತಲ್ಲೂರ್ಸ್‌ ಫ್ಯಾಮಿಲಿ ಟ್ರಸ್ಟ್‌, ಕರ್ನಾಟಕ ಜಾನಪದ ಪರಿಷತ್ತು, ಉಡುಪಿ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ನಡೆದ ಜಾನಪದ ಹಬ್ಬ–2023 ಹಾಗೂ ಜಾನಪದ ಸಂಘಟಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸುಮನಸಾದ ರಂಗಹಬ್ಬದ ವೇದಿಕೆಯಲ್ಲಿ ಅವರು ಏಳು ದಿನ ಕಾರ್ಯಕ್ರಮ ನಡೆಸಿದ್ದರು. ಅಲ್ಲಿಯೇ ಒಂದು ದಿನ ಕಾರ್ಯಕ್ರಮ ಮಾಡಲು ವೇದಿಕೆ ಒದಗಿಸಿ ಎಂದು ಕೇಳಿದಾಗ ಅವಕಾಶ ಮಾಡಿ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 25ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಎಲ್ಲರ ಸಹಕಾರವನ್ನು ಪಡೆದು ಇನ್ನಷ್ಟು ಕಡೆಗಳಲ್ಲಿ ಜಾನಪದ ಹಬ್ಬ ನಡೆಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಕಾಶ್‌ ಜಿ. ಕೊಡವೂರು ಮಾತನಾಡಿ, ಕರ್ನಾಟಕದ ಕಲೆಗಳಲ್ಲಿ ಬಹುವಿಧ ವಿದ್ದರೂ ಒಂದರಿಂದ ಒಂದು ಪ್ರೇರಿತವಾಗಿದೆ. ಪ್ರದೇಶಕ್ಕೆ ಅನುಗುಣವಾಗಿ ಕಲೆಗಳನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ. ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಎಂದು ಗುರುತಿಸಲಾಗಿದೆ. ಈ ಕಲೆಗಳಲ್ಲಿ ಬೇರೆ ಬೇರೆ ಪ್ರಕಾರಗಳಿವೆ. ಆರಾಧನಾ ಕುಣಿತ, ಮಾಂತ್ರಿಕ ಕುಣಿತ, ಮತಸಂಬಂಧಿ ಕುಣಿತ, ಕುಟುಂಬ ಸಂಬಂಧಿ ಕುಣಿತ ಕೃಷಿ ಸಂಬಂಧಿ ಕುಣಿತ ಎಂದು ಪ್ರಕಾರಗಳನ್ನಾಗಿ ಮಾಡಲಾಗಿದೆ ಎಂದು ಹೇಳಿದರು.

ಈ ಕಲೆಗಳನ್ನು ಮಕ್ಕಳಲ್ಲಿ ಅಭಿವ್ಯಕ್ತಿಗೊಳಿಸಬೇಕು. ಇಂಥ ಜವಾಬ್ದಾರಿ ಹಿರಿಯರ ಮೇಲಿದೆ. ಜನಪದ ಕಲೆಗಳು ನಮ್ಮ ನೆಮ್ಮದಿಯನ್ನು ಹೆಚ್ಚಿಸುತ್ತದೆ ಎಂದರು.

ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳ್‌ ಮಾತನಾಡಿ, ಜಾನಪದ ಬಹಳಷ್ಟು ಶ್ರೀಮಂತವಾದ ಕಲೆ. ಓದಲು, ಬರೆಯಲು ಬಾರದವರು ಹಾಡು ಕೇಳಿ ಕಲಿತು ಹಾಡಬಲ್ಲರು. ಅದಮ್ಯ ಪ್ರೀತಿ, ಉತ್ಸಾಹ ಇದ್ದಾಗ ಇಂಥ ಜಾನಪದ ಉತ್ಸವ ಮಾಡಲು ಸಾಧ್ಯ. ತಲ್ಲೂರಿಗೆ ಅಂಥ ಪ್ರೀತಿ ಇದೆ ಎಂದು ಶ್ಲಾಘಿಸಿದರು.

ಟಿ.ವಿ., ಮೊಬೈಲ್‌ ಸಹಿತ ಎಲ್ಲ ತಂತ್ರಜ್ಞಾನಗಳು ಬೇಕು. ಆದರೆ, ಇದರಿಂದಾಗಿ ಜಾನಪದ ಎಲ್ಲಿ ಮರೆಯಾಗಿ ಹೋಗುತ್ತೋ ಎನ್ನುವ ಆತಂಕ ಕಾಡುತ್ತಿದೆ ಎಂದರು.

ಮಾಹೆ ಸಹಾಯಕ ಉಪಕುಲಪತಿ ನಾರಾಯಣ ಸಭಾಹಿತ್‌ ಮಾತನಾಡಿ, ಜಾನಪದಗಳನ್ನು ಸರಿಯಾಗಿ ಬಳಸಿಕೊಂಡರೆ ನಮ್ಮ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ನಮ್ಮಲ್ಲಿರುವ ಜ್ಞಾನವನ್ನು ಬಳಸಿಕೊಳ್ಳಬೇಕು. ನಮ್ಮ ಜಾನಪದ ಕಲೆಯನ್ನು ಮರೆಯಬಾರದು ಎಂದು ಹೇಳಿದರು.

ಜಾನಪದ ಸಂಘಟಕ ಪ್ರಶಸ್ತಿಯನ್ನು ಗೋಪಾಲ ಸಿ. ಬಂಗೇರ ಅವರಿಗೆ ನೀಡಿ ಸನ್ಮಾನಿಸಲಾಯಿತು. ಗಿರಿಜಾ ಹೆಲ್ತ್‌ಕೇರ್‌ ಮತ್ತು ಸರ್ಜಿಕಲ್ಸ್‌ನ ರವೀಂದ್ರ ಶೆಟ್ಟಿ, ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಜಾನಪದ ಪರಿಷತ್‌ನ ಕಾರ್ಯದರ್ಶಿ ರವಿರಾಜ್‌ ನಾಯಕ್‌ ಉಪಸ್ಥಿತರಿದ್ದರು.

ಪ್ರಶಾಂತ್‌ ಭಂಡಾರಿ ಸ್ವಾಗತಿಸಿದರು. ಪ್ರವೀಣ್‌ ಕೊಡವೂರು ವಂದಿಸಿದರು

 
 
 
 
 
 
 
 
 
 
 

Leave a Reply