ಟ್ರೆಕ್ಕಿಂಗ್ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ರಾಮಬಾಣ – ಕಿರಣ್ ಪೈ ಮಂಗಳೂರು

ಒಂದು ಕಡೆ ಲಾಕ್ಡೌನ್ ಮತ್ತೊಂದೆಡೆ ರೂಪಾಂತರಿ ವೈರಸ್ ಅಲೆಗಳ ಹಿನ್ನಲೆಯಲ್ಲಿ ಎರಡು ವರ್ಷಗಳಿಂದ ಬೇಸತ್ತ ಜನತೆ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ಪಿಕ್ ನಿಕ್,ಟೂರ್ ಪ್ಲಾನ್ ಮಾಡುತ್ತಿದ್ದಾರೆ. ಅನೇಕರು ಏನು ಬೇಡ ಕಾಡಿಗೆ ಹೋಗಿ ಬರುವ ಅನ್ನುವುದು ನೀವು ಕೇಳಿರಬಹುದು.

ದಿನನಿತ್ಯದ ಜೀವನದ ಜಂಜಾಟದಲ್ಲಿ ಟ್ರೆಕ್ಕಿಂಗ್ ಹವ್ಯಾಸ ದೇಹಕ್ಕೆ, ಮನಸ್ಸಿನ ಆರೋಗ್ಯಕ್ಕೆ ಸಹಕಾರಿ ಎಂಬುದವರ ಅನಿಸಿಕೆ. ಬೆಟ್ಟ-ಗುಡ್ಡ ಹತ್ತುವುದು,ಹೊಳೆ ನದಿ, ಕಾಡುಗಳಲ್ಲಿ ನಡೆದುಕೊಂಡು ಹೋಗುವ ಅನುಭವ ಚಾರಣಿಗರಿಗೆ ಮಾತ್ರ ಗೊತ್ತು.ದಟ್ಟ ಕಾನನದ ಸೌಂದರ್ಯ ಮನಸಾರೆ ಆನಂದಿಸಿ. ದೇಹಕ್ಕೂ, ಮನಸ್ಸಿಗೂ ವಿಶ್ರಾಂತಿ ಬಯಸುವ ಚಾರಣ ಯಾವತ್ತು ಸುರಕ್ಷಿತವಾಗಿರಲಿ ಎಂಬುದು ಈ ಲೇಖನದ ಉದ್ದೇಶ.

ಬಹುತೇಕ ಚಾರಣ ಪ್ರಿಯರು ಪ್ರಕೃತಿ ಸೌಂದರ್ಯ ಸವಿಯಲೆಂದು ಕಾಡು ಮೇಡು ಸುತ್ತಾಡುತ್ತಾರೆ. ಫ್ಯಾಮಿಲಿ, ಫ್ರೆಂಡ್ಸ್,ಸಹೋದ್ಯೋಗಿಗಳು ಹೀಗೆ ತಂಡವಾಗಿ ಚಾರಣಕ್ಕೆ ಹೊರಡುತ್ತಾರೆ. ಧೈರ್ಯ, ಸಾಹಸ, ಆತ್ಮವಿಶ್ವಾಸ, ನಾಯಕತ್ವ ಬೆಳೆಸುವಲ್ಲಿ, ಭವಿಷ್ಯದಲ್ಲಿ ಅದನ್ನು ಅನುಷ್ಟಾನಗೊಳಿಸಲು ಚಾರಣ ಸಹಕಾರಿ ಆಗಿದೆ ಅನ್ನುವುದು ಚಾರಣಿಗರ ಮಾತು.

ಟ್ರೆಕ್ಕಿಂಗ್ ಪ್ಯಾರಡೈಸ್ ಕರ್ನಾಟಕದ ಪಶ್ಚಿಮ ಘಟ್ಟಗಳು:

ಕರ್ನಾಟಕದ ಕರಾವಳಿ ಭಾಗಕ್ಕೆ ಅಂಟಿಕೊಂಡಿರುವ ಪಶ್ಚಿಮ ಘಟ್ಟಗಳು ಚಾರಣಿಗರ ಹಾಟ್ ಸ್ಪಾಟ್. ದಕ್ಷಿಣದಲ್ಲಿ ಕೇರಳ ಮತ್ತು ನಮ್ಮ ರಾಜ್ಯದಲ್ಲಿ ಅದೆಷ್ಟೋ ಈವರೆಗೆ ಚಾರಣ ಮಾಡದ, ಅನ್ವೇಷಣೆ ಮಾಡದಂತಹ ಕಾಡುಗಳು ಬೆಟ್ಟಗಳೊಳಗೊಂಡ ಜಲಪಾತಗಳಿವೆ. ಸರಕಾರ,ಅರಣ್ಯ ಇಲಾಖೆ ಜನರ ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಕಾಡುಗಳಲ್ಲಿ ಚಾರಣಕ್ಕೆ ಮುಕ್ತ ಅವಕಾಶ ಕೊಟ್ಟಿಲ್ಲ.ಮಂಗಳೂರು, ಉಡುಪಿ, ಶಿವಮೊಗ್ಗ,ಚಿಕ್ಕಮಗಳೂರು, ಶಿರಸಿ, ಉತ್ತರ ಕನ್ನಡದ ಅನೇಕ ಕಡೆ ಸುಲಭದಿಂದ ಕಠಿಣವಾದ ಚಾರಣದ ಸ್ಥಳಗಳಿವೆ.ಸಂಬಂಧಪಟ್ಟ ಇಲಾಖಾನುಮತಿ ಮತ್ತು ಗೈಡ್ ಲೈನ್ ನಿಯಮಗಳನ್ನು ಪಾಲಿಸಿ ಚಾರಣ ಮಾಡಬಹುದಾಗಿದೆ.

ಪಶ್ಚಿಮ ಘಟ್ಟಗಳ ಚಾರಣದ ಕಾಡುಗಳಲ್ಲಿ ಸಾಮಾನ್ಯವಾಗಿ ಮೊದಲ ಶೇ. 60-70 ದಟ್ಟವಾದ ಕಾಡುಗಳಿರುತ್ತದೆ.ನಂತರ ಬೆಟ್ಟದ ಮೇಲೆ ಶೋಲಾ ಕಾಡುಗಳು,ಅಥವಾ ಹುಲ್ಲುಗಾವಲುಗಳಿದ್ದರೆ, ಕೆಲವೊಂದು ಕಡೆ ಸುಂದರ ಮನಮೋಹಕ ಶುಭ್ರ ಸ್ವಚ್ಛ ನೀರಿನ ಜಲಪಾತಗಳ ಸೌಂದರ್ಯವನ್ನು ಕಾಣಬಹುದು.

ಮೋಜು,ಮಸ್ತಿಗಾಗಿ ಚಾರಣ ಮಾಡದಿರಿ :

ಚಾರಣವೆಂದರೆ ಮನಸ್ಸು ಬಂದಾಗೆ ಹೊರಡವುದು, ಏಕಾಏಕಿ ಬೆಟ್ಟ ಗುಡ್ಡ ಹತ್ತುವುದಲ್ಲ.ನದಿಗೆ ಇಳಿಯುವುದಲ್ಲ. ಅದಕ್ಕೊಂದಿಷ್ಟು ಪೂರ್ವ ಸಿದ್ಧತೆ ಬೇಕು.ಮಾನಸಿಕವಾಗಿ ಮತ್ತು ದೈಹಿಕವಾಗಿ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ತೆರಳುವ ರೂಟ್, ಉಳಿದುಕೊಳ್ಳುವ ಪ್ರದೇಶದ ಬಗ್ಗೆ ಮೊದಲೇ ಮಾಹಿತಿ ಸಂಗ್ರಹಿಸಿರಬೇಕು. ಕ್ರಮಿಸಬೇಕಾದ ದೂರವನ್ನು ಅವಲಂಬಿಸಿ ಉಳಿದ ಸಿದ್ಧತೆಯನ್ನು ಮಾಡಿಡಬೇಕು. ಅಪಾಯ ಇರುವ ಪ್ರದೇಶದ ಮಾಹಿತಿ ತಿಳಿದು ಎಚ್ಚರಿಕೆ ವಹಿಸಬೇಕು. ಹಾಗಾಗಿ ಹೆಚ್ಚಾಗಿ ಚಾರಣಕ್ಕೆ ತೆರಳುವ ಪ್ರದೇಶದ ಸಮಗ್ರ ಮಾಹಿತಿ ಪಡೆದೇ ತೆರಳುವುದು ಅತ್ಯಂತ ಅವಶ್ಯಕ.

ಚಾರಣದ ವೇಳೆಯಲ್ಲಿ ಚಾರಣಿಗರು ಅಗತ್ಯವಾಗಿ ಬೇಕಾದ ಆಹಾರ ಪದಾರ್ಥಗಳನ್ನು ಕೊಂಡೊಯ್ಯಬೇಕು. ವಿಶ್ರಾಂತಿ ಪಡೆಯಲು ಬೇಕಾದ ಸರಂಜಾಮುಗಳು ಜತೆಗಿರಬೇಕು. ಚಾರಣದ ದಿನಗಳ ಸಂಖ್ಯೆ ಹೆಚ್ಚಾದಂತೆ ಹೊರಬೇಕಾದ ಸಾಮಗ್ರಿ ಸಂಖ್ಯೆ ಅಧಿಕ ಎಂದೇ ಅರ್ಥ. ಹಾಗಾಗಿ ಎಲ್ಲ ಯೋಜನೆ ಸಿದ್ಧಪಡಿಸಿದ ಮೇಲೆಯೇ ಹೊರಡಬೇಕು.

ಚಾರಣದ ಕೆಲವು ಸ್ಥಳಗಳಿಗೆ ದಾರಿ ಇರುತ್ತದೆ. ದಾರಿ ಇಲ್ಲದ ಪ್ರದೇಶಕ್ಕೆ ಪರ್ಯಾಯ ಹಾದಿ ಕುರಿತಂತೆ ನಕ್ಷೆ ಮತ್ತು ದಿಕ್ಸೂಚಿಗಳ ಸಹಾಯದಿಂದ ಗುರಿ ಮುಟ್ಟಬೇಕು. ಅತ್ಯಂತ ನಿರ್ಜನ ಪ್ರದೇಶ, ಸಂಚಾರವೇ ಕಷ್ಟಕರ ಎಂಬ ಕಡೆಗಳಲ್ಲಿ ಮಾರ್ಗದರ್ಶಿಗಳ ಸಹಾಯ ಪಡೆದೇ ತೆರಳಬೇಕು. ಇದರಿಂದ ಚಾರಣಿಗರ ಸುರಕ್ಷತೆ ಕಾಪಾಡಿಕೊಳ್ಳಲು ಸಾಧ್ಯವಿದೆ. ಫೋಟೋ, ವಿಡಿಯೋ ಮಾಡುವ ಭರದಲ್ಲಿ ಒಂದು ತಪ್ಪು ಹೆಜ್ಜೆ ನಿಮ್ಮ ಗುರಿಯನ್ನೇ ಬದಲಾಯಿಸಬಹುದು. ಹೆಚ್ಚುವರಿ ಜಾಗರೂಕತೆ ಅತ್ಯವಶ್ಯಕ.

ಚಾರಣಿಗರು ಅಥ್ಲೀಟ್ ಗಳು:

ಚಾರಣವೆಂದರೆ ಒಂದು ರೀತಿಯ ತಪಸ್ಸು,ಸಂಪೂರ್ಣ ಏಕಾಗ್ರತೆ, ಮನಸ್ಸಿನ ಹಿಡಿತ,ಎಚ್ಚರಿಕೆ ಮತ್ತು ಆಯಾಸ ದೇಹ ದಂಡನೆ ಲೆಕ್ಕಿಸದೆ ಗುರಿ ತಲುಪುವ ಹುಮ್ಮಸ್ಸು.ದಾರಿಯಲ್ಲಿ ಬಿದ್ದು ಎದ್ದು, ಜಾರಿಕೊಂಡು,ಮಳೆಗಾಲದಲ್ಲಿ ಇಂಬುಳ (ಲೀಚ್)ಗಳಿಂದ ಕಚ್ಚಿಸಿ,ಕಲ್ಲು ಮುಳ್ಳಿನ ದಾರಿಯಲ್ಲಿ ಮುನ್ನಡೆಯುವುದು ತಮ್ಮ ಹಾಗೂ ತಮ್ಮ ತಂಡದವರನ್ನು ಗಮನಿಸಿತ್ತಾ ಜೊತೆ ಜೊತೆಗೆ ನಡೆದು ಗುರಿ ತಲುಪಿ ಚಾರಣ ಪೂರ್ಣಗೊಳಿಸುವುದು ಸುಲಭದ ಮಾತಲ್ಲ.

ಚಾರಣಿಗ ಆ ಕಾರಣಕ್ಕೆ ಒಂದು ರೀತಿಯ ಅಥ್ಲೀಟ್ ತರಹ ತಯಾರಿ ನಡೆಸಬೇಕು. ಹೊರಡುವ ಮುನ್ನ ಮತ್ತು ಚಾರಣ ಮಾಡುವಾಗ ಅದಕ್ಕೆ ತಕ್ಕಂತೆ ಆಹಾರ ಪದ್ಧತಿ ಪಾಲಿಸಲೇಬೇಕು.ಉತ್ತರ ಭಾರತದ ಉತ್ತರಾಖಂಡ್,ಹಿಮಾಚಲ್, ಕಾಶ್ಮೀರದ ಚಾರಣಕ್ಕೆ ಬೇಕಾದ ಪರವಾಗಿ, ಡಯಟ್ ಪ್ಲಾನ್, ಸುರಕ್ಷತಾ ಉಪಕರಣಗಳು ಇತ್ಯಾದಿ ದಕ್ಷಿಣ ಭಾರತದ ಚಾರಣಕ್ಕೆಬೇಕಾಗಿಲ್ಲ. ಆದರೂ ಕೆಲವೊಂದು ನಿಯಮಗಳನ್ನು ಪಾಲಿಸುವುದು ಚಾರಣ ಮತ್ತು ಸುರಕ್ಷತೆ ದೃಷ್ಟಿಯಿಂದ ಉತ್ತಮ.

ಚಾರಣದಿಂದ ಉತ್ತಮ ಏಕಾಗ್ರತೆ ಜೊತೆಗೆ ದೇಹಕ್ಕೆ ಚೈತನ್ಯ ದೊರೆಯುತ್ತದೆ. ಶುದ್ಧಗಾಳಿ ಸೇವೆ, ನಡಿಗೆ, ಬೆಟ್ಟ ಹತ್ತಿ-ಇಳಿಯುವಿಕೆ ಹೀಗೆ ಹತ್ತಾರು ಬಗೆಯ ಲಾಭಗಳು ದೇಹಕ್ಕೆ ಉಂಟಾಗಿ ಅದರಿಂದ ಸ್ವಸ್ಥ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಚಾರಣದಿಂದ ಸುತ್ತಲಿನ ಜಗತ್ತಿನ ಬಗ್ಗೆ ತಿಳಿವಳಿಕೆ ದೊರೆಯುತ್ತದೆ. ಹೊಸ ಹೊಸ ಸ್ಥಳದ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಈ ಆರೋಗ್ಯಕರ ಚಟುವಟಿಕೆ, ಹೆಚ್ಚಿನ ಶ್ರಮದ ಕ್ರೀಡೆಯಾದ ಪರ್ವತಾರೋಹಣಕ್ಕೂ ಸಹಕಾರಿ. ಖ್ಯಾತ ಪರ್ವತಾರೋಹಿಗಳು ಚಾರಣದಿಂದಲೇ ಈ ಹವ್ಯಾಸವನ್ನು ಆರಂಭಿಸಿರುವುದು ಅದಕ್ಕೂಂದು ಉದಾಹರಣೆ.

ಕೊಡಗು, ಕುದುರೆಮುಖ, ಕೊಡಚಾದ್ರಿ, ಕುಮಾರಪರ್ವತ ಸಹಿತ ಕರ್ನಾಟಕದ ಹಲವು ಪ್ರದೇಶಗಳು ಚಾರಣಿಗರ ನೆಚ್ಚಿನ ತಾಣಗಳು. ಬೆಟ್ಟ- ಗುಡ್ಡದ ಜತೆಗೆ ಜಲಪಾತಗಳ ಚಾರಣ ಮಾಡಲು ಅವಕಾಶ ಇದೆ. ಕೊಡಗಿನ ಹಲವು ಜಲಪಾತಗಳು, ಮುಳ್ಳಯ್ಯನ ಗಿರಿ, ಕಲ್ಲತ್ತಗಿರಿ, ಗಾಳಿಕೆರೆ, ಬ್ರಹ್ಮಗಿರಿ, ಅಬ್ಬೆ ಜಲಪಾತ, ಗೋವರ್ಧನಗಿರಿ ,ಅನೇಕ ಹೆಸರಿರದ ನೂರಾರು ಸ್ಥಳಗಳಿವೆ.

ಅನುಮತಿ ಪಡೆಯಿರಿ,ಸೇಫ್ಟಿ ಫಸ್ಟ್ :

ಚಾರಣವು ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯ ಅಥವಾ ರಕ್ಷಿತ ಅರಣ್ಯಗಳ ಮೂಲಕ ಹಾದು ಹೋಗುವಂತಿದ್ದರೆ ಅದಕ್ಕೆ ಸಂಬಂಧಿಸಿ ಅರಣ್ಯ ಇಲಾಖೆಯಿಂದ ಸೂಕ್ತ ಅನುಮತಿ ಪಡೆಯಬೇಕು. ಖಾಸಗಿ ಪ್ರದೇಶವಾಗಿದ್ದರೂ ಗಮನಕ್ಕೆ ತಂದು ಪ್ರಯಾಣ ಮುಂದುವರಿಸಬೇಕು. ಅಪಾಯಗಳ ಮಾಹಿತಿ ಅರಿತು, ಸ್ಥಳೀಯರ ಸಂಪರ್ಕ ಪಡೆದೇ ಚಾರಣಕ್ಕೆ ಹೊರಡುವುದು ಸೂಕ್ತ.ಆರೋಗ್ಯ ಸಮಸ್ಯೆ ಇದ್ದವರು ತಮ್ಮ ವೈದ್ಯರ ಅನುಮತಿ ಪಡೆದು ಚಾರಣ ಮಾಡಬೇಕು. ತಂಡದಲ್ಲಿ ಪ್ರಥಮ ಚಿಕಿತ್ಸೆ ಕಿಟ್,ಬೇಕಾಗುವ ಕುಡಿಯುವ ನೀರು, ಹಣ್ಣುಗಳು, ಮುಳ್ಳು ಸೌತೆ, ಲಿಂಬೆರಸ, ಗ್ಲೂಕೋಸ್ ನೀರು ತುಂಬಾ ಸಹಕಾರಿ.

ಕಾಡು, ಪ್ರಕೃತಿಯನ್ನು ಗೌರವಿಸಿ :

ನಾನು ಸ್ಟ್ರಾಂಗ್ ಆಂಡ್ ಯಂಗ್ ಎಲ್ಲಾ ಚಾರಣ ನನಗೆ ಸುಲಭ,ಕಾಡಿನಲ್ಲಿ ನನಗೆ ತೋಚಿದ್ದು ಮಾಡುತ್ತೇನೆ. ಕಸ,ಪ್ಲಾಸ್ಟಿಕ್, ಧೂಮಪಾನ, ಮದ್ಯಪಾನ ಮಾಡಿದರೆ ಏನು ಸಮಸ್ಯೆ ಅಂತ ಹೇಳುವ ವ್ಯಕ್ತಿಗಳನ್ನು ತಂಡದಲ್ಲಿ ಸೇರಿಸದಿರಿ.ಅವರಿಂದ ಇಡೀ ತಂಡಕ್ಕೆ ಅನುಮತಿ ಸಿಗಲಾರದು ಅಥವಾ ಅತ್ಯಂತ ಶಿಸ್ತಿನ ಕಾನೂನು ಕ್ರಮಗಳನ್ನು ತಂಡದ ಮೇಲೆ ಹಾಕುವ ಸಾಧ್ಯತೆ ಇದೆ. ಈಗ ಮೊದಲಿನಂತೆ ಇಲ್ಲ, ಅಸಡ್ಡೆ, ಕಾಟಾಚಾರ, ಬೇಜವಾಬ್ದಾರಿ ಮಾಡಲು ಅವಕಾಶವಿಲ್ಲ.ಬಹುತೇಕ ಕಡೆ ಇಲಾಖೆ ಪರಿಶೀಲನೆ ಮಾಡುತ್ತದೆ. ಗುರುತಿನ ಚೀಟಿ,ಸುರಕ್ಷತಾ ಮುಚ್ಚಳಿಕೆಯನ್ನು ಬರೆಯಲೇಬೇಕು. ಕಾಡಿನಲ್ಲಿ ಜೋರಾಗಿ ಕಿರುಚುವುದು,ಹಾಡುಗಳನ್ನು ಹಾಕಿ ಸ್ಪೀಕರ್ ಇತ್ಯಾದಿ ಬಳಸದಿರಿ.ಕೆಲವೊಂದು ಕಡೆ ವಿಷದ ಹಾವುಗಳು,ಆನೆ,ಚಿರತೆ ಇತ್ಯಾದಿ ವನ್ಯಜೀವಿಗಳು ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಶಾಂತಿಯಿಂದ, ಮೌನವಾಗಿ, ನಿಧಾನವಾಗಿ ಪ್ರಕೃತಿಯನ್ನು ಗೌರವಿಸುತ್ತಾ ಆನಂದಿಸುತ್ತಾ ನಿಮ್ಮ ಚಾರಣವನ್ನು ಯಶಸ್ವಿಗೊಳಿಸಿ.ಈ ರೀತಿ ಉತ್ತಮ ಶಿಸ್ತಿನ ಟ್ರೆಕ್ಕಿಂಗ್ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ರಾಮಬಾಣ.

 
 
 
 
 
 
 
 
 
 
 

Leave a Reply