ಜಿಲ್ಲೆಯಲ್ಲಿ ಉದ್ಯೋಗಿನಿ, ಕಿರುಸಾಲ ಮುಂತಾದ ಉಪಯೋಜನೆಗಳನ್ನು ಪ್ರತಿಶತ ನೂರರಷ್ಟು ಅನುಷ್ಠಾನಗೊಳಿಸಬೇಕು -ಶಶಿಕಲಾ ವಿ ಟೆಂಗಳೆ

ಉಡುಪಿ : ಸರಕಾರ ಮಹಿಳೆಯರ ಕಲ್ಯಾಣಾಭಿವೃದ್ಧಿಗೆ ಅನೇಕ ಯೋಜನೆಗಳನ್ನು ಹಾಗೂ  ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ ಟೆಂಗಳೆ ಹೇಳಿದರು.

ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಮಾಜದಲ್ಲಿನ ದುರ್ಬಲ ವರ್ಗದ ಮಹಿಳೆಯರ ಅನುಕೂಲಕ್ಕೆ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಂಡು ಸ್ವ-ಉದ್ಯೋಗ, ವಾಣಿಜ್ಯ, ಹೈನುಗಾರಿಕೆ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ಕೈಗೊಳ್ಳುವುದರೊಂದಿಗೆ ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ಸ್ವಾವಲಂಭಿಗಳಾಗಬೇಕು ಎಂದರು.

ಜಿಲ್ಲೆಯಲ್ಲಿ ಉದ್ಯೋಗಿನಿ, ಸಮೃದ್ಧಿ, ಕಿರುಸಾಲ, ಧನಶ್ರೀ, ಚೇತನ, ಲಿಂಗತ್ವ ಅಲ್ಪಸಂಖ್ಯಾತ, ಮಹಿಳೆಯರಿಗೆ ಕೌಶಲ್ಯ ತರಬೇತಿ, ಮಹಿಳಾ ಸ್ವ-ಉದ್ಯೋಗ ಮಾರ್ಗದರ್ಶನ ಕೇಂದ್ರ ಯೋಜನೆ, ಪರಿಶಿಷ್ಟ ಜಾತಿ/ಪಂಗಡ ಉಪಯೋಜನೆಗಳನ್ನು ಪ್ರತಿಶತ ನೂರರಷ್ಟು ಅನುಷ್ಠಾನಗೊಳಿಸಬೇಕು ಎಂದರು.

ಕೇಂದ್ರ ಹಣಕಾಸು ಸಚಿವಾಲಯ ಪ್ರಧಾನ ಮಂತ್ರಿ ಮಹಿಳಾ ಸಶಕ್ತೀಕರಣ ಯೋಜನೆಯಡಿ ಕೌಶಲ್ಯಾಭಿವೃದ್ಧಿ ಉದ್ಯೋಗ,ಆರೋಗ್ಯ ಮತ್ತು ಪೌಷ್ಠಿಕತೆಗಳ ಮೂಲಕ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸಲು ಒಂದೇ ಕಡೆ ಎಲ್ಲಾ ಸಹಾಯ ಸೇವೆಗಳನ್ನು ನೀಡುವ ಸಲುವಾಗಿ ಮಹಿಳಾ ಶಕ್ತಿ ಕೇಂದ್ರ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದರು. ಲಿಂಗತ್ವ ಅಲ್ಪಸಂಖ್ಯಾತರಿಗೆ ಸ್ವ-ಉದ್ಯೋಗ, ಹೈನುಗಾರಿಕೆ ಕೈಗೊಳ್ಳಲು ಹಾಗೂ ಅವರಿಗೆ ನಿವೇಶನ ಒದಗಿಸುವ ಕುರಿತಂತೆ ಇಂದು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ಸರಕಾರದ ಜಮೀನು ನೀಡಲು ಮನವಿ ಮಾಡಲಾಗಿದೆ ಎಂದರು.

ಸ್ವ-ಉದ್ಯೋಗ ಕೈಗೊಳ್ಳಲು ವಾಣಿಜ್ಯ ಬ್ಯಾಂಕುಗಳ ಮೂಲಕ ಸಬ್ಸಿಡಿ ಲೋನ್ ಪಡೆದವರು ಅದನ್ನು ಸದ್ಭಳಕೆ ಮಾಡಿಕೊಳ್ಳುವುದರ ಜೊತೆಗೆ ಅದನ್ನು ನಿಗದಿತ ಕಾಲಾವಧಿ ಒಳಗೆ ಮರುಪಾವತಿ ಮಾಡಲು ಮುಂದಾದಲ್ಲಿ ವಾಣಿಜ್ಯ ಬ್ಯಾಂಕುಗಳು ಹೆಚ್ಚಿನ ನೆರವನ್ನು ನೀಡಲು ಸಾಧ್ಯ ಎಂದರು.ಹೆಚ್.ಐ.ವಿ ಸೋಂಕಿತರ ಮಕ್ಕಳಿಗೆ ಗೌರವಯುತವಾದ ಬದುಕು ರೂಪಿಸಲು ಹೊಸ ಯೋಜನೆಗಳನ್ನು ಜಾರಿಗೆ ತರಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದ್ದು, ಅದನ್ನು ಶೀಘ್ರದಲ್ಲಿಯೇ ಜಾರಿಗೆ ತರಲಾಗುವುದು ಎಂದರು.ಈ ವೇಳೆ ನಿಗಮದಿಂದ ಸಾಲ ಪಡೆದು ಸ್ವ-ಉದ್ಯೋಗವನ್ನು ಸೃಷ್ಟಿಸಿಕೊಂಡು ಯಶಸ್ವಿಯಾದ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕಿರಣ್ ಫಡ್ನೇಕರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್ ಶೇಷಪ್ಪ, ಲೀಡ್‌ಬ್ಯಾಂಕ್ ಮ್ಯಾನೇಜರ್ ಸಿ ರುದ್ರೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶಿಲ್ಪಾ ಸುವರ್ಣ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply