ಪೈಲೇರಿಯಾ ಮುಕ್ತ ಉಡುಪಿ ಜಿಲ್ಲೆಯಾಗಿ ಸದ್ಯದಲ್ಲೇ ಘೋಷಣೆ~ಡಾ.ಕೆ.ಪ್ರೇಮಾನಂದ್

ಕುಂದಾಪುರ : ಉಡುಪಿ ಜಿಲ್ಲೆಯಲ್ಲಿ ಈ ವರ್ಷವೂ ಮಲೇರಿಯಾ, ಡೆಂಗ್ಯೂ ಪ್ರಕರಣಗಳು ಇಳಿಕೆ ಯಾಗಿದ್ದು, ಜಿಲ್ಲೆಯಲ್ಲಿ ಹೊಸ ಪ್ರಕರಣ ಪತ್ತೆಯಾಗದೆ ಇರುವುದರಿಂದ ಜಿಲ್ಲೆ ಪೈಲೇರಿಯಾ ಮುಕ್ತ ಜಿಲ್ಲೆಯಾಗಿ ಘೊಷಣೆ ಮಾಡುವುದೊಂದೇ ಬಾಕಿ ಇದೆ ಎಂದು ಎಂದು ಉಡುಪಿ ಜಿಲ್ಲಾ ಕೋವಿಡ್ 19 ವಿಶೇಷಾಧಿಕಾರಿ ಡಾ.ಕೆ.ಪ್ರೇಮಾನಂದ್ ಹೇಳಿದರು.

ಇಲ್ಲಿನ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ನಿಯಂತ್ರಣ ಕಾರ್ಯಕ್ರಮ ಹಾಗೂ ಕುಂದಾಪುರ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯ ಸಂಯುಕ್ರ ಆಶ್ರಯದಲ್ಲಿ ನಡೆದ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಅವರು ವಿವರ ನೀಡಿದರು.

 

ಜೂನ್ ತಿಂಗಳಲ್ಲಿ ಡೆಂಗ್ಯೂ, ಜುಲೈನಲ್ಲಿ ಮಲೇರಿಯಾ ಪ್ರಕರಣಗಳು ಹೆಚ್ಚಾಗಿರುತ್ತವೆ. 2018 ರಲ್ಲಿ 79, 2019 ರಲ್ಲಿ 35, 2020 ರಲ್ಲಿ 25 ಹಾಗೂ 2021 ರಲ್ಲಿ 11 ಮಲೇರಿಯಾ ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದಿದೆ. 2018 ರಲ್ಲಿ 91, 2019 ರಲ್ಲಿ 79, 2020 ರಲ್ಲಿ 92, 2021 ರಲ್ಲಿ ಉಡುಪಿಯಲ್ಲಿ 49, ಕುಂದಾಪುರದಲ್ಲಿ 6, ಕಾರ್ಕಳದಲ್ಲಿ 48 ಡೆಂಗ್ಯೂ ಪ್ರಕರಣಗಳಿವೆ. 1995 ರ ಬಳಿಕ ಜಿಲ್ಲೆಯಲ್ಲಿ ಪೊಲಿಯೋ ಪ್ರಕರಣಗಳಿಲ್ಲ.

ಆನೆಕಾಲು ( ಫೈಲೇರಿಯಾ) ರೋಗ ಪತ್ತೆ ಹಚ್ಚುವ ನಿಟ್ಟಿನಲ್ಲಿ 2019 ರಿಂದ 2021ಮೇ ತನಕ 723 ಜನರ ರಕ್ತದ ಮಾದರಿ ಸಂಗ್ರಹಸಿದ್ದು, ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ. ಉಡುಪಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಆನೆಕಾಲು ರೋಗ ಮುಕ್ತ ಜಿಲ್ಲೆಯಾಗಿ ಪ್ರಮಾಣ ಪತ್ರ ದೊರೆಯಲಿದೆ ಎಂದರು.

 

ಕಾಯಿಲೆಗಳು ಪ್ರಾಧೇಶಿಕವಾಗಿ ಭಿನ್ನವಾಗಿರುತ್ತದೆ. ಸಮುದ್ರ ಬದಿಯಲ್ಲಿ, ಜನ ಸಾಂದ್ರತೆ ಜಾಸ್ತಿ ಇರುವಲ್ಲಿ ಸೊಳ್ಳೆಗಳು ಜಾಸ್ತಿ ಇರುವುದರಿಂದ ರೋಗಗಳ ಹರಡುವ ಪ್ರಮಾಣವೂ ಜಾಸ್ತಿಯಾಗಿ ರುತ್ತದೆ. ಹಗಲು ಹಾಗೂ ಸಂಜೆ ವೇಳೆ ಕಚ್ಚುವ ಸೊಳ್ಳೆಗಳಿಂದ ಪ್ರತ್ಯೇಕ ರೋಗಗಳು ಬರುತ್ತವೆ. ಸೊಳ್ಳೆಗಳು ಉತ್ಪತಿಯಾಗದಂತೆ ಎಚ್ಚರಿಕೆ ವಹಿಸಬೇಕು. ಮಳೆಗಾಲದಲ್ಲಿ ನೀರು ನಿಂತು ಸೊಳ್ಳೆ ಗಳಿಗೆ ಆಶ್ರಯವಾಗದಂತೆ ನೋಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್ವರಿ ಅವರು, ಕೋವಿಡ್-19 ರ ಪರೀಕ್ಷೆಗೆ ಮನೆ ಮನೆಗೆ ತೆರಳಿದ ಸಮಯದಲ್ಲಿ ಮಲೇರಿಯಾ ಇತರ ಸಾಂಕ್ರಾಮಿಕ ರೋಗಳ ಬಗ್ಗೆಯೂ ಪರೀಕ್ಷೆ ಮಾಡಲಾಗುತ್ತದೆ.

ಕೊರೊನಾ ಜೊತೆ ಇತರೆ ರೋಗಗಳ ಬಗ್ಗೆಯೂ ಹೆಚ್ಚಿನ ಎಚ್ಚರಿಕೆ ವಹಿಸಲಾಗುತ್ತದೆ ಎಂದರು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಉದ್ಘಾಟಿಸಿದರು. ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ ಹಾಗೂ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಭಾಗ್ಯ ಲಕ್ಷ್ಮೀ ಉಪಸ್ಥಿತರಿದ್ದರು.  

 
 
 
 
 
 
 
 
 
 
 

Leave a Reply