ಮೂಡುಬೆಳ್ಳೆ ನೆಲ್ಲಿಕಟ್ಟೆ – ಡಾ.ಲೀನಾ ನಾಯಕ್ ರ ಸಂಶೋಧನಾ ಗ್ರಂಥ ಲೋಕಾರ್ಪಣೆ

ಶಿರ್ವ:- ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಧ್ಬುತ ಪ್ರತಿಭೆಗಳಿದ್ದು, ಸನ್ನಿವೇಶ ಮತ್ತು ಸಂದರ್ಭಗಳು ಅದರ ವಿಕಸನಕ್ಕೆ ಪ್ರೇರಕವಾಗುತ್ತವೆ. ಆಸಕ್ತಿ ಮತ್ತು ಕುತೂಹಲವಿದ್ದಾಗ ಆನ್ವೇಷಣೆಗೆ ನಾಂದಿಯಾಗುತ್ತದೆ. ಸಂಶೋಧನಾ ಗ್ರಂಥಗಳು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಹೇಳಿದರು.

ಸೋಮವಾರ ಮೂಡುಬೆಳ್ಳೆ ಸಮೀಪದ ನೆಲ್ಲಿಕಟ್ಟೆ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಕಾಲೇಜಿನ ಪ್ರಥಮ ಪಿಯುಸಿ ತರಗತಿ ಆರಂಭೋತ್ಸವ ಕಾರ್ಯಕ್ರಮವನ್ನು ಜ್ಯೋತಿಬೆಳಗಿಸಿ ಉದ್ಘಾಟಿಸಿ, ಕನ್ನಡ ಉಪನ್ಯಾಸಕಿ ಡಾ.ಲೀನಾ ನಾಯ್ಕ್ರವರ ” ಹಾಲಕ್ಕಿಯರ ಬದುಕು ಹಾಗೂ ಸಾಹಿತ್ಯದ ಸ್ಥಿತ್ಯಂತರಗಳು” ಸಂಶೋಧನಾ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ, ಬುಡಕಟ್ಟು ಜನಾಂಗವಾದ ಹಾಲಕ್ಕಿಯರ ಜೀವನಗಾಥೆಯನ್ನು ಎಲ್ಲಾ ಆಯಾಮಗಳಲ್ಲಿ ಸಂಶೋಧಿಸಿ ಅವರ ನಡೆನುಡಿ, ಆಚಾರವಿಚಾರ,ಜಾನಪದ,ಸಾಂಸ್ಕೃತಿಕ ಪರಂಪರೆ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಪರಿವರ್ತನೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಮುಂದಿನ ಸಂಶೋಧಕರಿಗೆ ಇದೊಂದು ಆಕರಗ್ರಂಥವಾಗಲಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಯು.ಎಲ್.ಭಟ್ ಪ್ರಾಸ್ತಾವಿಕ ಮಾತುಗಳಲ್ಲಿ ಹತ್ತು ವರ್ಷಗಳಲ್ಲಿ ಕಾಲೇಜಿನ ಸಾಧನೆಗಳ ಬಗ್ಗೆ ಮಾಹಿತಿ ನೀಡಿ ಸ್ವಾಗತಿಸಿದರು. ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಹರಿದಾಸ್ ಎಸ್.ಎನ್ ಶುಭ ಹಾರೈಸಿದರು. ಲೇಖಕಿ ಡಾ.ಲೀನಾ ನಾಯ್ಕ್ ಗ್ರಂಥ ಪರಿಚಯ ಮಾಡಿದರು. ಉಪನ್ಯಾಸಕಿ ಕಮಲಾಕ್ಷಿ ಮಾತನಾಡಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಶೈಕ್ಷಣಿಕ ಮಾಹಿತಿ ಹಾಗೂ ಹದಿಹರೆಯದ ತಲ್ಲಣಗಳ ಬಗ್ಗೆ ಮಾಹಿತಿ ನೀಡಿದರು.

ಕೋವಿಡ್ ಸಂತ್ರಸ್ಥ ಕುಟುಂಬದ ವಿದ್ಯಾರ್ಥಿನಿಗೆ ಕಲಿಕೆಗೆ ಪೂರಕವಾಗಿ ಧನಸಹಯ ನೀಡಲಾಯಿತು. ಉಪನ್ಯಾಸಕಿ ಪ್ರಮೀಳಾ ನಿರೂಪಿಸಿ, ಉಪನ್ಯಾಸಕಿ ಸ್ಮಿತಾ ವಂದಿಸಿದರು. ನಿವೃತ್ತ ಉಪನ್ಯಾಸಕ ಸುಬ್ರಹ್ಮಣ್ಯ ಭಟ್, ಶ್ರೀನಿವಾಸ ಭಟ್, ಸೂರ್ಯನಾರಾಯಣ ಭಟ್, ಆಡಳಿತ ಮಂಡಳಿಯ ಪ್ರಭಾಕರ್ ಕೆ.ಎಸ್, ಲೇಖಕಿಯ ಪತಿ ರಾಜೇಶ್ ನಾಯ್ಕ್, ಉಪನ್ಯಾಸಕವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply