ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚುವರಿ ಹುದ್ದೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ~ಕೆ ರಾಘವೇಂದ್ರ ಕಿಣಿ

ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೆಲಸದ ಒತ್ತಡ ಹೆಚ್ಚಾಗಿದ್ದು ದೈನಂದಿನ ಕೆಲಸ ಕಾರ್ಯಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಅವಶ್ಯವಾಗಿ ಬೇಕಾಗಿರುವ ಮಂಜೂರಾದ 8 ಹುದ್ದೆಯೊಂದಿಗೆ 5 ಹೆಚ್ಚುವರಿ ಯಾಗಿ ಸೃಜಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ ರಾಘವೇಂದ್ರ ಕಿಣಿ ತಿಳಿಸಿದರು.

ಇಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅಧ್ಯಕ್ಷ ಕೆ ರಾಘವೇಂದ್ರ ಕಿಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಉದ್ಯಾವರದ ಸಂಪಿಗೆ ನಗರದಲ್ಲಿರುವ ಕೆರೆ, ಮೂಡು ಬೆಟ್ಟು ವಾರ್ಡಿನ ನಾಗನಕಟ್ಟೆ ಬಳಿ ಇರುವ ಸಾರ್ವಜನಿಕ ಕೆರೆ, ಮತ್ತು ಅಂಬಲಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕಪ್ಪೆಟ್ಟು ಪಾದೆ ಬಳಿ ಉದ್ಯಾನವನ, ಉಡುಪಿ ದೊಡ್ಡಣ್ಣಗುಡ್ಡೆ ಹುಡ್ಕೋ ಕಾಲೋನಿ ಬಳಿ ಹೊಸ ಉದ್ಯಾನವನಗಳು ರಚನೆ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಅದೇ ರೀತಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಸಿಸಿ ಕ್ಯಾಮರಾ ಅಳವಡಿಸಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿ ಆಗಮಿಸುವ ಸಾರ್ವಜನಿಕರಿಗೆ ಆಸನ ವ್ಯವಸ್ಥೆ ಮತ್ತು ಪೀಠೋಪಕರಣದ ವ್ಯವಸ್ಥೆ ಮಾಡುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು. ಪ್ರಸ್ತುತ ಚಾಲ್ತಿಯಲ್ಲಿರುವ ಮಹಾಯೋಜನೆಯನ್ನು ಮಹಾಯೋಜನೆ ಪರಿಷ್ಕರ ಣೆಗೆ ಆಗುವರೆಗೂ ಊರ್ಜಿತದಲ್ಲಿಡುವ ಬಗ್ಗೆ ಸರ್ಕಾರದ ಅನುಮತಿಗೆ ಕೋರಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರಸ್ತುತವಾಗಿ ಅಭಿವೃದ್ಧಿ ಶುಲ್ಕವನ್ನು ಕಟ್ಟಡಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ತೆಗೆದು ಕೊಳ್ಳಲಾಗುತ್ತಿತ್ತು. ಸರ್ಕಾರದಿಂದ ಹೊಸ ಶುಲ್ಕ ಪಾವತಿ ಮಾರ್ಗಸೂಚಿಯು ಬಂದಿದ್ದು ಅಭಿವೃದ್ಧಿ ಶುಲ್ಕವನ್ನು ಕೈ ಬಿಡುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.

ಈ ಸಭೆಯಲ್ಲಿ ಕುಂದಾಪುರ ಸಹಾಯಕ ಆಯುಕ್ತರಾದ ಮತ್ತು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್ ಕೆ .ರಾಜು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ದಿನಕರ್ ಪೂಜಾರಿ ಕುಂಜಿಬೆಟ್ಟು, ಕಿಶೋರ್ ಕರಂಬಳ್ಳಿ, ಸುಮ ನಾಯ್ಕ್, ನಾಮನಿರ್ದೇಶಿತ ಸದಸ್ಯರಾದ ಪ್ರಭಾಕರ ಪೂಜಾರಿ, ನಗರ ಯೋಜನಾ ಸದಸ್ಯ ರಾದ ಗುರುಪ್ರಸಾದ್, ಶ್ರೀಮತಿ ನಯೀಮಾ ಬಾನು, ಉಡುಪಿ ನಗರ ಸಭೆಯ ಸಹಾಯಕ ಅಭಿಯಂತರರಾದ ಮೋಹನ್ ರಾಜು , ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಜಗದೀಶ್ ಭಟ್, ಮೆಸ್ಕಾಂ ಇಲಾಖೆಯ ಗಣರಾಜ್ ಭಟ್ ಮತ್ತು ಇನ್ನಿತರ ಅಧಿಕಾರಿವರ್ಗ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply