ರಸ್ತೆ ನಿಯಮ ನಿರ್ಲಕ್ಷಿಸಿದ್ದ ಮಹಿಳೆಗೆ ಬಿತ್ತು ಕೇಸು

ಕೋಣಾಜೆ ಠಾಣೆ ವ್ಯಾಪ್ತಿಯ ತೌಡುಗೋಳಿ ಕ್ರಾಸ್ ನಲ್ಲಿ ಬಸ್ ಬರುತ್ತಿದ್ದಾಗ ಮಹಿಳೆ ರಸ್ತೆ ದಾಟಿದ್ದ ಸಿಸಿಟಿವಿ ದೃಶ್ಯ ವೈರಲ್ ಆಗಿತ್ತು. ಮಹಿಳೆ ರಸ್ತೆ ದಾಟುವುದನ್ನು ನೋಡಿದ ಬಸ್ ಚಾಲಕ ಬಸ್ಸನ್ನು ಬದಿಗೆ ಸರಿಸಿ ಮಹಿಳೆಯನ್ನು ರಕ್ಷಿಸಿದ್ದು ಮೆಚ್ಚುಗೆಗೂ ಕಾರಣವಾಗಿತ್ತು. ಇದೀಗ ರಸ್ತೆ ನಿಯಮ ಪಾಲಿಸದೆ ನಿರ್ಲಕ್ಷ್ಯದಿಂದ ರಸ್ತೆ ದಾಟಿದ್ದ ಮಹಿಳೆಯ ವಿರುದ್ಧ ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಮೋಟಾರು ವಾಹನ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.

ಸಿಸಿಟಿವಿ ದೃಶ್ಯದಲ್ಲಿ ಬಸ್ ವೇಗವಾಗಿ ಬರುತ್ತಿದ್ದುದನ್ನು ಗಮನಿಸಿ ಮಂಗಳೂರು ಪೊಲೀಸರು ಚಾಲಕನ ವಿರುದ್ಧ ನಿರ್ಲಕ್ಷ್ಯದ ಚಾಲನೆಯೆಂದು ಪ್ರಕರಣ ದಾಖಲಿಸಿದ್ದರು. ಬಸ್ಸನ್ನು ಬದಿಗೆ ಸರಿಸಿ ಮಹಿಳೆಯನ್ನು ರಕ್ಷಣೆ ಮಾಡಿದ್ದ ಚಾಲಕನ ವಿರುದ್ಧ ಕೇಸು ದಾಖಲಿಸಿದ್ದಕ್ಕೆ ಆಕ್ಷೇಪವೂ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸಿಸಿಟಿವಿ ವಿಡಿಯೋ ಆಧರಿಸಿ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದು, ನಿರ್ಲಕ್ಷ್ಯದಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗುವುದೂ ಮೋಟಾರು ವಾಹನ ಕಾಯ್ದೆಗೆ ವಿರುದ್ಧ. ಪಾದಚಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.

ಮಹಿಳೆಯ ವಿರುದ್ಧ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 13 ಮತ್ತು ಪೊಲೀಸ್ ಏಕ್ಟ್ 92 ಜಿ ಪ್ರಕಾರ ಕೇಸು ದಾಖಲಿಸಿಕೊಳ್ಳಲಾಗಿದ್ದು, ದಂಡ ವಿಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ನಿರ್ಲಕ್ಷ್ಯದಿಂದ ರಸ್ತೆಯಲ್ಲಿ ನಡೆಯುವ ಮಂದಿಗೆ ಇದೇ ಮೊದಲ ಬಾರಿಗೆ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗಿದ್ದು, ಈ ರೀತಿ ಮಾಡುವ ಮಂದಿ ಇನ್ಮುಂದೆ ಎಚ್ಚರಿಕೆ ವಹಿಸಬೇಕಾಗಿದೆ.

 
 
 
 
 
 
 
 
 
 
 

Leave a Reply