ಮಸೀದಿಗೆ ಭೂ ಹಸ್ತಾಂತರ ಮತ್ತು ರದ್ದತಿಯಲ್ಲಿ ನನ್ನ ಹಸ್ತಕ್ಷೇಪವಿಲ್ಲ :ಪ್ರಮೋದ್ ಮಧ್ವರಾಜ್ ಸ್ಪಷ್ಟನೆ

ಉಡುಪಿ: ಕೊಡವೂರು ಗ್ರಾಮದ ಸರಕಾರಿ ಜಾಗವನ್ನು ಶಾಸಕನಾಗಿದ್ದಾಗ ವಕ್ಫ್ ಬೋರ್ಡ್ ನ ಮುಖಾಂತರ ಕಲ್ಮತ್ ಮಸೀದಿ ಹೆಸರಿಗೆ ಪ್ರಮೋದ್ ಮಧ್ವರಾಜ್ ವರ್ಗಾಯಿಸಿದ್ದಾರೆ ಎಂಬ ಸಂದೇಶ ರವಾನೆಯಾಗುತ್ತಿದ್ದು ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ.

ಕೊಡವೂರು ಗ್ರಾಮದ ಸರಕಾರಿ ಜಾಗದ ಸರ್ವೇ ನಂ 53/6 ರಲ್ಲಿನ 67ಸೆಂಟ್ಸ್ ಜಾಗವನ್ನು ನಾನು ಶಾಸಕನಾಗಿದ್ದಾಗ ವಕ್ಫ್ ಬೋರ್ಡ್ ನ ಮುಖಾಂತರ ಕಲ್ಮತ್ ಮಸೀದಿ ನಾನು ವರ್ಗಾಯಿಸಿದ್ದೇನೆ ಎನ್ನುವ ಆಪಾದನೆಯ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಸ್ಪಷ್ಟೀಕರಣ ನೀಡುತ್ತಿದ್ದೇನೆ.

ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಕ್ಷೇತ್ರದಲ್ಲಿರುವ ಎಲ್ಲ ಇಲಾಖೆಗಳಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿರುವ ಜನಸಾಮಾನ್ಯರು ಸಮಸ್ಯೆ ಪರಿಹಾರಕ್ಕಾಗಿ ಮತ್ತು ಹೊಸ ಯೋಜನೆಗಳ ಅನುಷ್ಟಾನಕ್ಕಾಗಿ ಸಾವಿರಾರು ಅರ್ಜಿಗಳು ಬರುತ್ತವೆ. ಅಂತಹ ಅರ್ಜಿಗಳನ್ನು ಸಂಬಂದಪಟ್ಟ ಇಲಾಖೆಗಳಿಗೆ ಪರಿಶೀಲಿಸಿ ಕ್ರಮವಹಿಸುವಂತೆ ರವಾನಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ.

ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಯಾಗಿ ಜಾತಿ-ಮತ, ವರ್ಣ-ಭೇದ , ಧರ್ಮವನ್ನು ನೋಡಿ ಯಾವುದೇ ಅರ್ಜಿಗಳಲ್ಲಿ ತಾರತಮ್ಯ ಮಾಡದೇ ಜವಾಬ್ದಾರಿಯನ್ನು ಶಾಸಕನಾಗಿ ನಿರ್ವಹಿಸಲೇಬೇಕು.ಕೊಡವೂರು ಗ್ರಾಮದಲ್ಲಿ ಕಲ್ಮತ್ ಮಸೀದಿಗೆ ಜಾಗದ ಹಸ್ತಾಂತರದ ಪ್ರಕ್ರಿಯೆಗಳು 2018ರಲ್ಲಿ ನಡೆದಿರುವ ಬಗ್ಗೆ ಮಾಹಿತಿಯಿದ್ದು, ಮೇ ತಿಂಗಳಿನಲ್ಲಿ ಚುನಾವಣೆ ನಡೆದು ನಾನು ಸೋತು ಶಾಸಕ ಸ್ಥಾನದ ಅಧಿಕಾರವನ್ನು ಕಳೆದುಕೊಂಡಿದ್ದೆ ಎನ್ನುವುದು ನನ್ನ ವಿರುದ್ದ ಅಪಪ್ರಚಾರ ನಡೆಸುತ್ತಿರುವವರು ಮರೆತಿರುವಂತಿದೆ.

2018 ರ ಬಳಿಕದ ಈ ಎಲ್ಲಾ ಸರಕಾರಿ ಪ್ರಕ್ರಿಯೆಗಳು ಸರಕಾರಿ ಇಲಾಖೆಗಳ ಮೂಲಕವೇ ಆಗಿದೆ ಎನ್ನುವುದು ಗಮನಿಸಬೇಕಾಗಿದೆ.ನಾನು ನನ್ನ ಶಾಸಕತ್ವದ ಅವಧಿಯಲ್ಲಿ ಯಾವುದೇ ರೀತಿಯಲ್ಲಿ ಯಾವ ಜಾತಿ-ಧರ್ಮದ ರಾಜಕೀಯ ಮಾಡದೇ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಪಾಲಿಸಿದ್ದೇನೆ.

ಈ ಜಾಗಕ್ಕೆ ಸಂಬಂಧಪಟ್ಟಂತೆ ವೈಯುಕ್ತಿಕವಾಗಿ ನಾನು ಯಾವ ಇಲಾಖೆಯ ಅಧಿಕಾರಿಯನ್ನೂ ಸಂಪರ್ಕಿಸಿ ಚರ್ಚಿಸಿಲ್ಲ ಮತ್ತು ಯಾವ ಅಧಿಕಾರಿಗಳು ನನ್ನನ್ನು ಸಂಪರ್ಕಿಸಿಲ್ಲ ಎನ್ನುವುದನ್ನು ಎಲ್ಲರ ಗಮನಕ್ಕೆ ತರಲಿಚ್ಚಿಸುತ್ತೇನೆ.ಈ ಭೂ ಹಸ್ತಾಂತರ ಮತ್ತು ರದ್ದತಿ ಪ್ರಕ್ರಿಯೆಗಳಲ್ಲಿ ನಾನು ಯಾವುದೇ ರೀತಿಯ ಹಸ್ತಕ್ಷೇಪ ಮಾಡದೇ ಇರುವುದನ್ನು ಮತ್ತೊಮ್ಮೆ ಈ ಮುಖೇನ ತಿಳಿಸಲಿಚ್ಚಿಸುತ್ತೇನೆ ಎಂದು‌ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

 
 
 
 
 
 
 
 
 
 
 

Leave a Reply