ಪರಿಹಾರ ನೀಡಲು ಹೆದ್ದಾರಿ ಇಲಾಖೆಯಲ್ಲಿ ಹಣವಿಲ್ಲವೇ?

ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 169ರ ಸಾಣೂರಿನಿಂದ ಮಂಗಳೂರಿನ ಕುಲಶೇಖರ ತನಕ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ ಕುಂಟುತ್ತ ಸಾಗುತ್ತಿದೆ ಇದಕ್ಕೆ ಕಾರಣಗಳು ಒಂದೆರಡಲ್ಲ.

ಪ್ರಾರಂಭದಿಂದಲೇ ಪರಿಹಾರ ನೀಡಲು ಜಿಗುಟುತನ ತೋರಿಸಿದ ಹೆದ್ದಾರಿ ಇಲಾಖೆಯು ಈಗ ಮಾನ್ಯ ಹೈಕೋರ್ಟ್ ಪರಿಷ್ಕೃತ ದರವನ್ನು ಭೂ ಮಾಲೀಕರಿಗೆ ನೀಡುವಂತೆ ತಿಳಿಸಿದ್ದರೂ ಸಹ ಪರಿಹಾರ ನೀಡಲು, ಒಂದಲ್ಲ ಒಂದು ರೀತಿಯ ಕುಂಟು ನೆಪ ತೋರಿಸುತ್ತಿದೆ.

ಪರಿಹಾರ ನೀಡಲು ಪರಿಷ್ಕೃತ ಪಟ್ಟಿಯನ್ನು ಅನುಮೋದನೆಗಾಗಿ ದೆಹಲಿಗೆ ಕಳಿಸಲಾಗಿದೆ ಎಂದು ಸ್ಥಳೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

2020 ರಲ್ಲಿ ತಯಾರಿಸಿದ ಅಂದಾಜು ಪಟ್ಟಿ ಕೇವಲ ರೂ.485/- ಕೋಟಿಯದ್ದಾಗಿತ್ತು ಈಗ ಕೋರ್ಟು ನಿರ್ದೇಶನದಂತೆ ಪರಿಹಾರ ನೀಡುವುದಾದರೆ ತಮಗೆ ಸುಮಾರು ರೂ.1216/- ಕೋಟಿ ಬೇಕಾಗುತ್ತದೆ ಎಂದು ಪರಿಷ್ಕೃತ ಪಟ್ಟಿ ತಯಾರಿಸಲಾಗಿದೆ.

ಸಾಣೂರು ಪಡುಮಾರ್ನಾಡು ಮತ್ತು ಪುತ್ತಿಗೆ ಗ್ರಾಮಗಳ ಪರಿಹಾರವನ್ನು ನೀಡುವಂತೆ ಉಚ್ಚ ನ್ಯಾಯಾಲಯ ತೀರ್ಪು ನೀಡಿ ಸುಮಾರು ಮೂರು ತಿಂಗಳು ಈಗಾಗಲೇ ಕಳೆದು ಹೋಗಿದೆ. ಇಲಾಖೆಯಲ್ಲಿ ವಿಚಾರಿಸಿದರೆ ಕೇಂದ್ರದಿಂದ ಹಣ ಬಂದಿರುವುದಿಲ್ಲ ಎಂದು ತಿಳಿಸುತ್ತಿದ್ದಾರೆ.

ಇನ್ನುಳಿದಂತೆ ತೆಂಕ ಮಿಜಾರು, ತೆಂಕ ಎಡಪದವು, ಬಡಗ ಎಡಪದವು, ತೆಂಕ ಉಳಿಪಾಡಿ, ತಿರುವೈಲು ಮತ್ತು ಕುಡುಪು ಗ್ರಾಮಗಳ ಭೂ ಮಾಲೀಕರಿಗೆ ಕೂಡ ಪರಿಹಾರವನ್ನು ಪರಿಷ್ಕರಿಸಿ ಕೊಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಯವರು ತೀರ್ಪನ್ನು ನೀಡಿ ಈಗಾಗಲೇ ಒಂದು ತಿಂಗಳು ಕಳೆದಿದೆ.

ಪರಿಹಾರ ನೀಡಲು ನಮ್ಮಲ್ಲಿ ಯಾವುದೇ ಹಣದ ಕೊರತೆ ಇಲ್ಲ ಎಂದು ಹೇಳುತ್ತಿರುವ ಅಧಿಕಾರಿಗಳಾಗಲಿ ರಾಜಕಾರಣಿಗಳಾಗಲಿ ಈಗ ಯಾಕೆ ಮಾತಾಡುತ್ತಿಲ್ಲ ಎನ್ನುವುದು ಯಕ್ಷ ಪ್ರಶ್ನೆ.

ಹೆದ್ದಾರಿ ಅಭಿವೃದ್ಧಿಯ ಕೆಲಸವು ಸ್ವಲ್ಪ ವೇಗದಲ್ಲಿ ಸಾಣೂರು, ಬೆಳುವಾಯಿ ಪಡುಮಾರ್ನಾಡು ಅಲ್ಲದೆ ತೆಂಕ ಉಳಿಪಾಡಿ ಮತ್ತು ಬಡಗ ಉಳಿಪಾಡಿ ಗ್ರಾಮಗಳಲ್ಲಿ ಮಾತ್ರ ನಡೆಯುತ್ತಿದೆ.

ಮಾನ್ಯ ಸಂಸದರು ಇತ್ತೀಚೆಗೆ ಹೆದ್ದಾರಿ ಅಭಿವೃದ್ಧಿಯ ಕೆಲಸದ ವೀಕ್ಷಣೆ ಮಾಡಿ ಈಗಾಗಲೇ 22 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿದೆ ಎನ್ನುವ ತಪ್ಪು ಮಾಹಿತಿಯನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ನೀಡಿರುತ್ತಾರೆ ಹಾಗೂ 2024ರ ಡಿಸೆಂಬರ್ ನಲ್ಲಿ ಈ ರಸ್ತೆಯ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕೂಡ ತಿಳಿಸಿರುತ್ತಾರೆ. ಇವರ ಪ್ರಕಾರ ಇನ್ನುಳಿದ ಕೇವಲ 23 ಕಿ.ಮೀ ರಸ್ತೆಗೆ ಮತ್ತೆ ಒಂದೂವರೆ ವರ್ಷದ ಸಮಯ ಬೇಕೇ ಎನ್ನುವುದು ಜನಸಾಮಾನ್ಯರ ಪ್ರಶ್ನೆ.

ಖಚಿತ ಮಾಹಿತಿಯಂತೆ ಸುಮಾರು 11 ಕಿ.ಮೀ ನಷ್ಟು ಮಾತ್ರ ಕೆಲಸ ಪೂರ್ಣಗೊಳ್ಳುವ ಹಂತದಲ್ಲಿದೆಯಷ್ಟೆ.

ಪರಿಹಾರ ನೀಡದೆ ಇರುವುರಿಂದಾಗಿ ಭೂ ಮಾಲೀಕರು ತಮ್ಮ ಜಾಗವನ್ನು ಹೆದ್ದಾರಿ ಇಲಾಖೆಗೆ ಬಿಟ್ಟು ಕೊಡುತ್ತಿಲ್ಲ. ಕಳೆದ ಅಕ್ಟೋಬರ್ ತಿಂಗಳಲ್ಲಿ ಕಾಮಗಾರಿಯ ಒಪ್ಪಂದ ಪತ್ರಕ್ಕೆ ಸಹಿ ಹಾಕಿರುವ ದಿಲೀಪ್ ಬಿಲ್ಡ್ಕಾನ್ ಕಂಪನಿಯವರಿಗೆ ರಸ್ತೆಯ ಕೆಲಸಗಳನ್ನು ಮಾಡಲು ಜಾಗ ಸಿಗದೆ ಪರದಾಡುತ್ತಿದ್ದಾರೆ. ಇನ್ನು ಮೂರು ನಾಲ್ಕು ತಿಂಗಳು ಮಳೆ ಇರುವುದರಿಂದ ಹೆದ್ದಾರಿಯ ಎಲ್ಲಾ ಕೆಲಸಗಳು ಸ್ಥಗಿತಗೊಳ್ಳುವ ಸಂಭವಿದೆ. ಅರ್ಧಂಬರ್ಧ ಕೆಲಸ ಆಗಿರುವ ಜಾಗಗಳಲ್ಲಿ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗಲಿದೆ.

 
 
 
 
 
 
 
 
 
 
 

Leave a Reply