ಯೋಗ ವಿಕಲ್ಪ ರಹಿತ ಸಂಕಲ್ಪವಾಗಿರಲಿ -ಯೋಗಾಚಾರ್ಯ ಶ್ರೀ ಭವರಲಾಲ್ ಆರ್ಯ ಜೀ…..

ಉಡುಪಿ: ಪತಂಜಲಿ ಯೋಗ ಸಮಿತಿ ಉಡುಪಿಯ ಆಶ್ರಯದಲ್ಲಿ ದಿನಾಂಕ 15-05-2023 ರಿಂದ 08-06-23ರ ವರೆಗೆ ಉಡುಪಿಯ ವಿದ್ಯೋದಯ ಪಿಯು ಕಾಲೇಜಿನ ಸಭಾಂಗಣದಲ್ಲಿ ನಡೆದ 25 ದಿನಗಳ ಸಹ ಯೋಗಶಿಕ್ಷಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಶನಿವಾರ ದಿನಾಂಕ 10-06-2023ರಂದು ಜರುಗಿತು.

ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪತಂಜಲಿ ಯೋಗಪೀಠ, ಹರಿದ್ವಾರದ ಕರ್ನಾಟಕ ರಾಜ್ಯ ಪ್ರಭಾರಿ ಯೋಗಾಚಾರ್ಯ ಶ್ರೀ ಭವರಲಾಲ್ ಆರ್ಯ ಜೀ ಅವರು ಮಾತನಾಡುತ್ತಾ, “ನುರಿತ ಯೋಗಶಿಕ್ಷಕರಿಂದ ಅತ್ಯುತ್ತಮ ಗುಣಮಟ್ಟದ ಯೋಗವಿದ್ಯಾ ತರಬೇತಿಯನ್ನು ನೀವು ಪಡೆದಿದ್ದೀರಿ. ಈ ವಿದ್ಯೆಯು ಸಿದ್ದಿಯಾಗಬೇಕಾದರೆ ಪ್ರತಿದಿನವೂ ತಪ್ಪದೆ ಯೋಗಾಭ್ಯಾಸ ಮಾಡುವ ದೃಢ ಸಂಕಲ್ಪ ಅವಶ್ಯ. ಹತ್ತಾರು ರೂಪದಲ್ಲಿ ವಿಕಲ್ಪಗಳು ಎದುರಾಗಿ, ಅಭ್ಯಾಸವನ್ನು ಮುಂದೂಡುವಂತೆ ಆಮಿಷಗಳನ್ನೊಡ್ಡುತ್ತವೆ. ಅವಕ್ಕೆ ಧೃತಿಗೆಡದೆ, ದಿನಂಪ್ರತಿ ಮುಂಜಾನೆ ಯೋಗಾಭ್ಯಾಸ ಮಾಡುವ ಪರಿಪಾಠ ಇಟ್ಟುಕೊಳ್ಳಬೇಕು. ಇದರಿಂದ ನಿಮಗೆ ಯೋಗಸಿದ್ಧಿಯಾಗಿ, ಉತ್ತಮ ಗುಣಮಟ್ಟದ ಜೀವನ ನಡೆಸಬಹುದು” ಎಂದು ಹೇಳಿದರು. “ಪ್ರಧಾನಿ ಮೋದಿಯವರ ಸತತ ಪ್ರಯತ್ನದ ಫಲವಾಗಿ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುತ್ತೇವೆ. ಕೇಂದ್ರ ಸರಕಾರವು ಯೋಗವನ್ನು ಒಂದು ಕ್ರೀಡಾಪ್ರಕಾರವಾಗಿ ಪರಿಗಣಿಸಿದೆ. ಆದ್ದರಿಂದ ನುರಿತ ಯೋಗಶಿಕ್ಷಕರಿಗೆ ವಿಪುಲ ಅವಕಾಶಗಳಿವೆ. ಅದರ ಸತ್ಪ್ರಯೋಜನ ಪಡೆದುಕೊಳ್ಳಿ. ಕೊರೋನ ಮಹಾಮಾರಿಯಿಂದಾಗಿ ಕಳೆದ ಮೂರು ವರ್ಷಗಳಿಂದ ಆನ್ಲೈನ್ ಯೋಗ ತರಬೇತಿಯನ್ನು ನಾವು ನಡೆಸಿದ್ದು,ನಂತರ ಈ ಭಾಗದಲ್ಲಿ ಉಡುಪಿ ಜಿಲ್ಲಾ ಯೋಗ ಸಮಿತಿಯೇ ಪ್ರಥಮ ವಾಗಿ ಆಫ್-ಲೈನ್ ಶಿಬಿರವನ್ನು ಯಶಸ್ವಿಯಾಗಿ ನಡೆಸಿದೆ, ಇದು ಅತ್ಯಂತ ಶ್ಲಾಘನೀಯ. ರಾಷ್ಟ್ರದಾದ್ಯಂತ ಯೋಗಶಿಕ್ಷಣದ ಮೂಲಕ ಪ್ರಜೆಗಳಿಗೆ ಆರೋಗ್ಯಭಾಗ್ಯ ಲಭಿಸಲಿ,” ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿದ್ಯೋದಯ ಟ್ರಸ್ಟಿನ ಜತೆ ಕಾರ್ಯದರ್ಶಿ ಶ್ರೀಮತಿ ರೂಪಾ ನಾಗರಾಜ್ ಬಲ್ಲಾಳ್ ಅವರು ದೀಪ ಬೆಳಗಿಸಿ, ಮಾತನಾಡುತ್ತಾ, “ಅಸ್ತಮಾದಿಂದ ಹಲವು ವರ್ಷಗಳ ಕಾಲ ಬಳಲಿದ ತನಗೆ ದಾರಿತೋರಿದುದು ಯೋಗಾಭ್ಯಾಸ. ಅದರಲ್ಲಿ ಮೂಡಿದ ಅಭಿರುಚಿಯಿಂದಾಗಿ ಪದವಿ ಪೂರೈಸಿದ 18 ವರ್ಷಗಳ ಬಳಿಕ ತಾನು ಯೋಗದಲ್ಲಿ ಸ್ನಾತಕೋತ್ತರ ಪದವಿ (ಎಂಎಸ್ಸಿ) ಪಡೆಯುವಲ್ಲಿ ಯಶಸ್ವಿಯಾದೆ. ನಾನು ಸಕ್ರಿಯವಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾದುದು ಸತತ ಯೋಗಾಭ್ಯಾಸದಿಂದ. ಅಂತೆಯೇ ನಿಮಗೂ ಯೋಗ ಚೇತೋಹಾರಿಯಾಗಲಿ” ಎಂದು ನುಡಿದರು.

ಇನ್ನೋರ್ವ ಮುಖ್ಯ ಅತಿಥಿ, ಕರ್ನಾಟಕ ರಾಜ್ಯದ ಸಹ ಯೋಗಪ್ರಭಾರಿ, ಡಾ. ಜ್ಞಾನೇಶ್ವರ ನಾಯಕ್ ಅವರು ಯೋಗಶಿಕ್ಷಣ ಪಡೆದ ಯೋಗಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, “ಓರ್ವ ಶಿಲ್ಪಿ ತನ್ನ ಕೌಶಲ್ಯದಿಂದ ಶಿಲೆಯನ್ನು ಸುಂದರ ಮೂರ್ತಿಯಾಗಿಸುತ್ತಾನೆ. ಅದೇ ಮೂರ್ತಿ ಪ್ರಾಣಪ್ರತಿಷ್ಠೆಯ ಬಳಿಕ ದೇವರೆಂದು ಆರಾಧಿಸಲ್ಪಡುತ್ತದೆ. ಅಂತೆಯೇ ನೀವು ಯೋಗ ಗುರುಗಳಿಂದ ಕೆತ್ತಲ್ಪಟ್ಟಿದ್ದೀರಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮೂರ್ತಿಯಾಗಿದ್ದೀರಿ. ಮುಂದಿನ ದಿನಗಳಲ್ಲಿ ಯೋಗವಿದ್ಯೆಯನ್ನು ಪ್ರಸರಿಸುವ ಕಾರ್ಯದಲ್ಲಿ ತಮ್ಮನ್ನು ‌ತೊಡಗಿಸಿಕೊಂಡು, ಯೋಗಾಭ್ಯಾಸಿಗಳಿಂದ ಆದರಿಸಲ್ಪಡುವ ಮೂರ್ತಿಗಳಾಗಿ ಸಮಾಜಕ್ಕೆ ನಿಮ್ಮ ಕೊಡುಗೆ ನೀಡಿ,” ಎಂದರು.

ಹತ್ತು ದಂಪತಿಗಳೂ ಸೇರಿದಂತೆ ವಿವಿಧ ವಯೋಮಾನದ ಒಟ್ಟು 82 ಮಂದಿ ಯೋಗಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದು, ಯೋಗ ದಂಪತಿಗಳನ್ನು ವಿಶೇಷವಾಗಿ ಅಧ್ಯಕ್ಷರು ಹೂನೀಡಿ, ಶ್ಲಾಘಿಸಿದರು.

ಸಹ ಯೋಗಶಿಕ್ಷಕ ತರಬೇತಿ ಶಿಬಿರಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವಲ್ಲಿ ಪ್ರಶ್ನೆ ಪತ್ರಿಕೆಗಳನ್ನು ರೂಪಿಸುವಲ್ಲಿ ಸಹಕರಿಸಿದವರು ಮತ್ತು ಉತ್ತಮ ರೀತಿಯಲ್ಲಿ ಮೇಲ್ವಿಚಾರಣೆಗೈದವರನ್ನು ಗುರುತಿಸಲಾಯಿತು. ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಮೂವರಿಗೆ ಸ್ಮರಣಿಕೆಗಳನ್ನು ನೀಡಲಾಯಿತು.
ಸಹ ಯೋಗಶಿಕ್ಷಕ ಪ್ರಮಾಣ ಪತ್ರಗಳನ್ನು ಯೋಗಾರ್ಥಿಗಳಿಗೆ ಅಧ್ಯಕ್ಷ ರು ಹಾಗೂ ಮುಖ್ಯ ಅತಿಥಿಗಳು ವಿತರಿಸಿದರು.

ಯೋಗಾರ್ಥಿಗಳು ಪ್ರಾರ್ಥನೆ ಮಾಡಿದರು. ಉಡುಪಿ ಜಿಲ್ಲಾ ಯೋಗ ಪ್ರಭಾರಿ ಶ್ರೀ ರಾಘವೇಂದ್ರ ಭಟ್ ಅವರು ಎಲ್ಲರನ್ನೂ ಸ್ವಾಗತಿಸಿ, ಅತಿಥಿಗಳನ್ನು ಸಭೆಗೆ ಪರಿಚಯಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರ ನಡೆದುಬಂದ ಹಾದಿಯನ್ನು ವಿವರಿಸಿದರು..
ಭಾರತ್ ಸ್ವಾಭಿಮಾನ್ ಟ್ರಸ್ಟ್ ನ ಪ್ರಭಾರಿ ಶ್ರೀ ವೆಂಕಟೇಶ ಮೆಹಂದಳೆ, ಪತಂಜಲಿ ಮಹಿಳಾ ಸಮಿತಿಯ ಪ್ರಭಾರಿ ಶ್ರೀಮತಿ ಲೀಲಾ ಆರ್ ಅಮೀನ್, ಪತಂಜಲಿ ಕಿಸಾನ್ ಸೇವಾ ಸಮಿತಿಯ ಪ್ರಭಾರಿ ಶ್ರೀ ಅನಂತರಾಯ ಶೆಣೈ,ಯುವ ಭಾರತ್
ನ ಶ್ರೀ ಜಗದೀಶ್ ಕುಮಾರ್ ಪತಂಜಲಿ ಯೋಗಪೀಠ ಹರಿದ್ವಾರದ ಆಜೀವ ಸದಸ್ಯರಾದ ಶ್ರೀ ವಿಶ್ವನಾಥ ಭಟ್ ಹಾಗೂ ಶ್ರೀ ಸುರೇಶ್ ಭಕ್ತರು, ಕೋಶಾಧಿಕಾರಿ ಶ್ರೀಪತಿ ಭಟ್,ಸದಾಶಿವ ರಾವ್ ಕೆ, ನಾಗರಾಜ್ ಶೇಟ್,ದ. ಕ. ಜಿಲ್ಲಾ ಪ್ರಭಾರಿ ಡಾ. ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು..ಕಾರ್ಯದರ್ಶಿ ಶ್ರೀ ರಂಜಿತ್ ಕೆ ಎಸ್ ಕಾರ್ಯಕ್ರಮವನ್ನು ನಿರೂಪಿಸಿ ಶ್ರೀ ಲಕ್ಷ್ಮಣ್ ಕೆ ಅವರು ಧನ್ಯವಾದ ಸಮರ್ಪಿಸಿದರು.

 
 
 
 
 
 
 
 
 
 
 

Leave a Reply