ಅರಣ್ಯದಲ್ಲಿ ತಿರುಗಾಡುತ್ತಿದ್ದ ಕೇರಳ ಮೂಲದ ಯುವತಿಯ ರಕ್ಷಣೆ

ಉಡುಪಿ: ಮಾನಸಿಕವಾಗಿ ನೊಂದು ಕೊಲ್ಲೂರು ಅರಣ್ಯದಲ್ಲಿ ತಿರುಗಾಡುತ್ತಿದ್ದ ಕೇರಳ ಮೂಲದ ಅಪರಿಚಿತ ಯುವತಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಸ್ಥಳೀಯರು, ರಿಕ್ಷಾ ಚಾಲಕರು ಹಾಗೂ ಪೊಲೀಸರ ಸಹಾಯದಿಂದ ರಕ್ಷಿಸಿ, ಮಂಜೇಶ್ವರದ ಮಾನಸಿಕ ಅಸ್ವಸ್ಥರ ಪುನರ್‌ವಸತಿ ಕೇಂದ್ರ ಸ್ನೇಹಾಲಯಕ್ಕೆ ಮಂಗಳವಾರ ದಾಖಲಿಸಿದ್ದಾರೆ.
ಯುವತಿ ತನ್ನ ಹೆಸರು ಅರ್ಚನಾ (28). ಊರು ಕೇರಳದ ಚರ್ವತ್ಕಲ್ ಎಂಬ ಅಸ್ಪಷ್ಟ ಮಾಹಿತಿ ನೀಡಿದ್ದಾಳೆ. ಈಕೆ ಕೊಲ್ಲೂರಿನ ಸಲಗೇರಿ ಬಳಿ ಅರಣ್ಯದಲ್ಲಿ ಸುತ್ತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಹಾಗೂ ರಿಕ್ಷಾ ಚಾಲಕರು ಕೊಲ್ಲೂರು ಠಾಣೆಗೆ ಮಾಹಿತಿ ನೀಡಿದ್ದರು. ಕೊಲ್ಲೂರು ಪೊಲೀಸರು ವಿಶು ಶೆಟ್ಟಿ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. 
ಯುವತಿಯ ರಕ್ಷಣಾ ಕಾರ್ಯಾಚರಣೆಯಲ್ಲಿ ವಿಶು ಶೆಟ್ಟಿ ಅವರೊಂದಿಗೆ ಕೊಲ್ಲೂರು ಠಾಣಾ ಪಿಎಸ್‌ಐ ಜಯಶ್ರೀ ಹನ್ನೂರ, ಸುಧಾರಾಣಿ ಟಿ. ಹಾಗೂ ಸಿಬ್ಬಂದಿಗಳಾದ ನವೀನ್ ಮತ್ತು ಪೂರ್ಣಿಮಾ ನೆರವಾಗಿದ್ದಾರೆ.
ಯುವತಿಯ ಸಂಬಂಧಿಕರ ಬಗ್ಗೆ ಹೆಚ್ಚಿನ ಮಾಹಿತಿ ಸಿಗದ ಕಾರಣ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಹೀಗಾಗಿ ವಿಶು ಶೆಟ್ಟಿ ಅವರು ಯುವತಿಯ ಚಿಕಿತ್ಸೆ, ಸಾಂತ್ವನ ಹಾಗೂ ಆಶ್ರಯಕ್ಕೆ ಕೇರಳ ಮಂಜೇಶ್ವರದ ಸ್ನೇಹಾಲಯದ ಮುಖ್ಯಸ್ಥ ಜೋಸೆಫ್ ಕ್ರಾಸ್ತಾ ಅವರನ್ನು ಸಂಪರ್ಕಿಸಿದಾಗ ಅವರು ಯುವತಿಗೆ ಆಶ್ರಯ ನೀಡಲು ಒಪ್ಪಿದ್ದಾರೆ. ವಿಶು ಶೆಟ್ಟಿ ಅವರು ತನ್ನ ವಾಹನದಲ್ಲಿ ಯುವತಿಯನ್ನು ಸ್ನೇಹಾಲಯಕ್ಕೆ ಕರೆದೊಯ್ದು ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಯುವತಿಯ ಬಗ್ಗೆ ಮಾಹಿತಿ ಇರುವವರು, ವಾರೀಸುದಾರರು ಕೊಲ್ಲೂರು ಠಾಣೆ ಅಥವಾ ಮಂಜೇಶ್ವರದ ಸ್ನೇಹಾಲಯವನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ಸೂಚಿಸಿದ್ದಾರೆ.
 
 
 
 
 
 
 
 
 
 
 

Leave a Reply