ಆನೆ ದಾಳಿಗೆ ಬಲಿಯಾದ ಇಬ್ಬರ ಕುಟುಂಬಕ್ಕೆ ತಲಾ 15 ಲಕ್ಷ ಪರಿಹಾರ

ಕಾಡಾನೆ ದಾಳಿಯಿಂದ ಮೃತಪಟ್ಟ ಕಡಬದ ಯುವತಿ ಹಾಗೂ ಸ್ಥಳೀಯ ನಿವಾಸಿಯೊಬ್ಬರ ಕುಟುಂಬಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ತಲಾ 15 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿ, ಯುವತಿ ಸಹಿತ ಇಬ್ಬರನ್ನ ಕೊಂದು ಹಾಕಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ನಡೆದಿದೆ.

ಪೇರಡ್ಕ ಹಾಲು ಸೊಸೈಟಿಗೆ ಕೆಲಸಕ್ಕೆಂದು ನಡೆದುಕೊಂಡು ತೆರಳುತ್ತಿದ್ದ ಯುವತಿ ರಂಜಿತಾ (21) ಹಾಗೂ ಆಕೆಯ ರಕ್ಷಣೆಗೆ ಧಾವಿಸಿದ್ದ ರಮೇಶ್ ರೈ ಇಬ್ಬರ ಮೇಲೂ ಕಾಡಾನೆ ದಾಳಿ ನಡೆಸಿತ್ತು. ರಮೇಶ್ ರೈ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಂಭೀರ ಸ್ಥಿತಿಯಲ್ಲಿದ್ದ ಯುವತಿ ನೆಲ್ಯಾಡಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಳು. ಇದರಿಂದ ಸ್ಥಳೀಯರು ಇಬ್ಬರ ಶವಗಳನ್ನು ರಸ್ತೆಯಲ್ಲಿಟ್ಟು ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಸ್ಥಳೀಯರು, ಅರಣ್ಯಾಧಿಕಾರಿಗಳು ಮತ್ತು ಕಡಬ ಪೊಲೀಸರನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಸ್ಥಳಕ್ಕೆ ತೆರಳಿ, ಪ್ರತಿಭಟನಾಕಾರರನ್ನ ಸಮಾಧಾನಪಡಿಸಿದರು. ಮೃತರ ಕುಟುಂಬಗಳಿಗೆ ತಲಾ 15 ಲಕ್ಷ ಪರಿಹಾರ ನೀಡಲಾಗುವುದು. ಜೊತೆಗೆ ಯುವತಿಯ ಸಹೋದರಿಗೆ ಕೆಲಸ ಕೊಡಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು. ನಂತರ ದುಬಾರೆಯಿಂದ ಪಳಗಿದ ಆನೆಗಳನ್ನು ಕರೆಸಿ, ಇಬ್ಬರ ಸಾವಿಗೆ ಕಾರಣವಾದ ಆನೆಗಳನ್ನು ಸೆರೆಹಿಡಿಯಲಾಗುವುದು ಎಂದು ಅಭಯ ನೀಡಿದರು.

 
 
 
 
 
 
 
 
 
 
 

Leave a Reply