ಕೊರೊನಾ ನಿಯಂತ್ರಿಸಲು ದ.ಕ‌ ಜಿಲ್ಲೆಯಲ್ಲಿ ಕಠಿಣ ನಿಯಮ ಜಾರಿ

ಮಂಗಳೂರು: ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆ ದ.ಕ‌ ಜಿಲ್ಲಾಡಳಿತ ಮೇ.07ರಿಂದ ಮಂಗಳೂರು ಸೇರಿದಂತೆ ಜಿಲ್ಲೆಯಾದ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ.

ದ.ಕ ಜಿಲ್ಲೆಯ ಪ್ರತಿಯೊಂದು ಪ್ರದೇಶದಲ್ಲೂ ಕೊರೊನಾ ಪ್ರಕರಣ ಅಧಿಕವಾಗುತ್ತಿರುವುದರಿಂದ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಸದರು,ಶಾಸಕರ ಜೊತೆ ತುರ್ತು ಸಭೆ ನಡೆಸಿದ್ದಾರೆ.

 ಕೊರೋನಾ ಹರಡುವುದನ್ನು ತಡೆಗಟ್ಟಲು ಕಟ್ಟು ನಿಟ್ಟಿನ ಕ್ರಮ ಅನಿವಾರ್ಯ ಎಂಬ ಸಲಹೆಗಳು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಕೇಳಿ ಬಂದಿದ್ದು ಇದರಂತೆ ಜಿಲ್ಲಾಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ದಿನಸಿ ಖರೀದಿಗೆ ಮತ್ತು ಜನರ ಓಡಾಟದ ವಿಚಾರದಲ್ಲಿ ಈ ರೀತಿಯಾಗಿ ಕ್ರಮ ಜರುಗಿಸಲಾಗಿದೆ. ಜಿಲ್ಲೆಯಾದ್ಯಂತ ಮೇ 7 ರ ಬೆಳಗ್ಗೆ 6ರಿಂದ 9 ಗಂಟೆ ವರೆಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ಇರಲಿದೆ. 10 ಗಂಟೆ ಒಳಗೆ ವ್ಯಾಪಾರಸ್ಥರು ಹಾಗೂ ಖರೀದಿದಾರರು ಮನೆ ಸೇರಬೇಕು. 10 ಗಂಟೆಯ ಬಳಿಕ ಜನರು ರಸ್ತೆ ಮೇಲೆ, ವಾಹನಗಳಲ್ಲಿ ಓಡಾಡುವುದು ಕಂಡುಬಂದರೆ ವಾಹನ ಜಪ್ತಿ ಸೇರಿದಂತೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ.

ವೈದ್ಯಕೀಯ ಅಗತ್ಯಕ್ಕೆ ತೆರಳುವವರು ತಮ್ಮ ಮನೆಯ ಹತ್ತಿರದ ಮೆಡಿಕಲ್ ಗಷ್ಟೆ ಹೋಗಬೇಕು. ವಾಹನಗಳಲ್ಲಿ ಬೇರೆ ಕಡೆ ಹೋದ್ರೆ ವಾಹನ-ಸೀಝ್ ಮಾಡಲು ಪೊಲೀಸರಿಗೆ ಅವಕಾಶ ನೀಡಲಾಗಿದೆ. ಜನರ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲು ಪೊಲೀಸರ ಮೂಲಕ ಲಾಠಿಗೂ ಅನುಮತಿಸಲಾಗಿದೆ.

ಮೇ 15 ಬಳಿಕ ಮದುವೆ, ಗೃಹಪ್ರವೇಶ, ಹುಟ್ಟಿದ ಹಬ್ಬ ಸೇರಿದಂತೆ ಯಾವುದೇ ಕಾರ್ಯಕ್ರಮ ನಡೆಸಲು ಅವಕಾಶ ಇರುವುದಿಲ್ಲ. ಮೇ 15 ರ ಬಳಿಕ ನಿಗದಿಯಾಗಿರುವ ಎಲ್ಲ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲು ಜಿಲ್ಲಾಡಳಿತ ನಿರ್ಣಯ ಮಾಡಿದೆ. ಯಾವುದೇ ಕಾರ್ಯಕ್ರಮ ನಡೆಸಲು ಅನುಮತಿ ಪಡೆದಿದ್ದರೂ ಆಯಾ ಭಾಗದ ಅಧಿಕಾರಿಗಳು ಸಂಬಂಧಿತರ ಮನವೊಲಿಸಿ ಅದನ್ನು ಮುಂದಕ್ಕೆ ಹಾಕಿಸುವಂತೆ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

 
 
 
 
 
 
 
 
 
 
 

Leave a Reply