ಉಡುಪಿ ಜಿಲ್ಲೆಯಲ್ಲಿ 13ದಿನದಲ್ಲಿ 1293 ಮಂದಿ ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ಕೊರೋನ ಸೋಂಕು

ಉಡುಪಿ:  ಉಡುಪಿ ಜಿಲ್ಲೆಯಲ್ಲಿ ಹೊಸ ವರ್ಷದ ಮೊದಲ ದಿನದಿಂದ ಇಂದಿನವರೆಗೆ ಒಟ್ಟು 1293 ಮಂದಿ ಮಕ್ಕಳು ಹಾಗೂ ವಿದ್ಯಾರ್ಥಿಗಳು ಕೊರೋನ ಸೋಂಕಿಗೆ ಒಳಗಾಗಿದ್ದಾರೆ. ಇವರಲ್ಲಿ 0-5ವರ್ಷದೊಳಗಿನ ಮಕ್ಕಳು ಸೇರಿದಂತೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಸೇರಿದ್ದಾರೆ.

ಜಿಲ್ಲೆಯಲ್ಲಿ ಕಳೆದ 13 ದಿನಗಳಲ್ಲಿ 0-5 ವರ್ಷದೊಳಗಿನ ಒಟ್ಟು 20 ಮಕ್ಕಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ಮಾಹಿತಿ ನೀಡಿದ್ದಾರೆ. ಉಳಿದಂತೆ 5 ರಿಂದ 10 ವರ್ಷದೊಳಗಿನ 72, 10 ರಿಂದ 15ವರ್ಷದೊಳಗಿನ 256, 15ರಿಂದ 20 ವರ್ಷದೊಳಗಿನ 473 ಹಾಗೂ 21 ರಿಂದ 25 ವರ್ಷದೊಳಗಿನ 472 ಮಂದಿ ವಿದ್ಯಾರ್ಥಿಗಳು ಸಹ ಸೇರಿದ್ದಾರೆ ಎಂದವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ನರ್ಸಿಂಗ್, ಫಾರ್ಮಸಿ ಸೇರಿದಂತೆ ವಿವಿಧ ಪದವಿ ತರಗತಿಗಳಲ್ಲಿ ಓದುತ್ತಿರುವವರು, ಪದವಿ ಪೂರ್ವ ಕಾಲೇಜು, ಹೈಸ್ಕೂಲ್, ಪ್ರಾಥಮಿಕ ಶಾಲೆಗಳಲ್ಲಿ ಕಲಿಯುತ್ತಿರುವ ಪುಟಾಣಿ ಮಕ್ಕಳೂ ಸೇರಿದ್ದಾರೆ.

11 ಕಂಟೈನ್‌ಮೆಂಟ್ ಝೋನ್: ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು 11 ಕಂಟೈನ್‌ ಮೆಂಟ್ ಝೋನ್‌ಗಳಿವೆ. ಇವುಗಳಲ್ಲಿ ಎರಡು ಕಾರ್ಕಳ ತಾಲೂಕಿ (ಬೋಳ ಮತ್ತು ಬೆಳ್ಮಣ್) ನಲ್ಲಿದ್ದರೆ, ಒಂದು ಬ್ರಹ್ಮಾವರ ತಾಲೂಕಿನಲ್ಲಿ (ಮಟಪಾಡಿ) ಹಾಗೂ ಉಳಿದ ಎಂಟು ಮಣಿಪಾಲ ಆಸುಪಾಸಿನಲ್ಲಿವೆ. ಇವುಗಳಲ್ಲಿ ಮೂರು ಮಣಿಪಾಲದ ವಸತಿ ಸಂಕೀರ್ಣಗಳು. 

 
 
 
 
 
 
 
 
 
 
 

Leave a Reply