ನಂದನವನ ಗ್ರಾಮ: ಕೃಷ್ಣದೇವರಾಯನ ಶಾಸನ ಪತ್ತೆ

ಬೈಂದೂರು ತಾಲೂಕಿನ ನಂದನವನ ಗ್ರಾಮದಲ್ಲಿರುವ 15ನೆ ಶತಮಾನದ ಶಾಸನವನ್ನು ಪ್ರಾಚ್ಯಸಂಚಯ ಸಂಶೋಧನ ಕೇಂದ್ರ – ಉಡುಪಿ (ಅಂಗಸಂಸ್ಥೆ: NTC-AOM) ಇದರ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ.ಕೃಷ್ಣಯ್ಯ ಮತ್ತು ಯು. ಕಮಲಬಾಯಿ ಪೌಢ ಶಾಲೆಯ ನಿವೃತ್ತ ಉಪನ್ಯಾಸಕರಾದ ಕೆ. ಶ್ರೀಧರ ಭಟ್ ಅವರ ನೇತೃತ್ವದಲ್ಲಿ ಸೈಂಟ್ ಅಲೋಶಿಯಸ್ ಕಾಲೇಜಿನ ವಸ್ತುಸಂಗ್ರಹಾಲಯದ ನಿರ್ದೇಶಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನ ಮಾಡಿರುತ್ತಾರೆ. 

ಪ್ರಸ್ತುತ ಈ ಶಾಸನವು ಸಂಜೀವ ಪ್ರಭುಗಳ ಜಾಗದಲ್ಲಿದ್ದು, ಕಣ ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು 5 ಅಡಿ ಎತ್ತರ ಮತ್ತು 2.5 ಅಡಿ ಅಗಲವಿದೆ. ಕನ್ನಡ ಲಿಪಿ ಮತ್ತು ಭಾಷೆಯ 38 ಸಾಲುಗಳನ್ನು ಹೊಂದಿರುವ ಈ ಶಾಸನದ ಮೇಲ್ಭಾಗದಲ್ಲಿರುವ ವಾಮನ ಮೂರ್ತಿಯ ಇಕ್ಕೆಲಗಳಲ್ಲಿ ಶಂಖ-ಚಕ್ರ, ಸೂರ್ಯ-ಚಂದ್ರರ ಉಬ್ಬು ಕೆತ್ತನೆಯಿದೆ. 

‘ಸ್ವಸ್ತಿ ಶ್ರೀ ಗಣಾಧಿಪತಯೆ ನಮ’ ಎಂಬ ಶ್ಲೋಕದಿಂದ ಪ್ರಾರಂಭವಾಗುವ ಈ ಶಾಸನವು ಶಕವರುಷ 1442 ವರ್ತಮಾನ ಪ್ರಮಾಧಿ ಸಂವತ್ಸರದ ಶ್ರಾವಣ ಶುದ್ಧ 15 ಬುಧವಾರ ಅಂದರೆ ಕ್ರಿ. ಶ 1519 ಆಗಸ್ಟ್ 21 ಬುಧವಾರಕ್ಕೆ ಸೇರುತ್ತದೆ. ಈ ಕಾಲಮಾನವು ವಿಜಯನಗರ ತುಳುವ ದೊರೆ ಕೃಷ್ಣದೇವರಾಯನಿಗೆ ಸೇರಿದ್ದು, ಈ ಸಂದರ್ಭದಲ್ಲಿ ಬಾರಕೂರ ರಾಜ್ಯವನ್ನು ರತ್ನಪ್ಪ ಒಡೆಯನ ಕುಮಾರನಾದ ವಿಜಯಪ್ಪ ಒಡೆಯನು ಆಳ್ವಿಕೆ ನಡೆಸುತ್ತಿದ್ದ ಎಂಬುದು ಶಾಸನದಿಂದ ತಿಳಿಯುತ್ತದೆ. ಈ ಕಾಲದಲ್ಲಿ ಸಂಗರಸ ನಾಯಕನ ಮನೆಯ ದೇವ ಪೂಜೆಯ ಕರುಣಾಕರ ಹಾಗೂ ಅಂಗೀರಸ ಗೋತ್ರದ ಯವನಾಶ್ವ ಪ್ರವರದ ಈಶನ ಉಪಾಧ್ಯಾಯರ ಮಗ ಕೇಶವ ಉಪಾಧ್ಯಾಯರು ವಿಜಯಪ್ಪ ಒಡೆಯರಿಗೆ ಆಯುರಾರೋಗ್ಯ ಮತ್ತು ಐಶ್ವರ್ಯ ಅಭಿವೃದ್ಧಿಗಾಗಿ ಸೋಮೊಪರಾಗ ಪುಣ್ಯ ಕಾಲದಲ್ಲಿ ಸಹಿರಣ್ಯೋದಕ ದಾನವನ್ನು ಮಾಡಿರುವ ಹಾಗೂ ಇದಕ್ಕೆ ಘಟ್ಟಿ ವರಹ ಗದ್ಯಾಣ 24ನೂ ಕುಳವ ಕಡಿದು ಬರಸಿಕೊಟ್ಟಂತಹ ದಾನ ಶಾಸನ ಇದಾಗಿದೆ. ಶಾಸನದಲ್ಲಿ ಚತುಸೀಮೆಯ ಉಲ್ಲೇಖವಿದ್ದು ಮುಖ್ಯವಾಗಿ ಕೆಳ ಸಾಲಿಗ್ರಾಮ, ನಾಯಕನ ಕಟ್ಟೆ, ನೇರಳಕಟ್ಟೆ ಇನ್ನಿತರ ಸ್ಥಳಗಳ ಉಲ್ಲೇಖವಿದೆ. ಹಾಗೆಯೇ ಗದ್ದೆ ಹಾನೆ 60, ಮುಡಿ 42, ಶುದ್ಧ ಆದಾಯದ ವೆಚ್ಚಳಕ್ಕೆ ವರಹಾ ಗದ್ಯಾಣ 24 ನ್ನು ಶ್ರೀ ಹೆಮ್ಮಾಡ (ಪ್ರಸ್ತುತ ಹೆಮ್ಮಾಡಿ ಆಗಿರಬಹುದು) ಗೋಪಿನಾಥ ದೇವರ ಅಮ್ರುತಪಡಿ ಮತ್ತು ನಂದಾದೀಪ್ತಿಗೆ ದಾನವನ್ನು ಬಿಟ್ಟಿರುವುದು ಇದು ವರ್ಷಂಪ್ರತಿ ನಡೆಯುವ ರೀತಿ ನೋಡಿಕೊಳ್ಳಬೇಕೆಂಬ ಉಲ್ಲೇಖವಿದೆ. ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವಿದ್ದು ಈ ಶಾಸನಕ್ಕೆ ಸೋಮನಾಥ ಹೆಬ್ಬರ, ಕುರುವಾಲ ದುರ್ಗಾ ದೇವಿಯ ಒಪ್ಪವಿದ್ದು ಈ ಶಾಸನವನ್ನು ಬರೆದವ ಬಾರಕೂರ ಕರಣಿಕನಾದ ಮಲರಸರ ಎಂದು ಉಲ್ಲೇಖಿಸುತ್ತದೆ.

ಶಾಸನದ ಪ್ರಾಥಮಿಕ ಮಾಹಿತಿಯನ್ನು ಸರ್ವೋತ್ತಮ ಭಟ್ ಉಪ್ಪುಂದ ಅವರು ತಿಳಿಸಿದ್ದು, ಕ್ಷೇತ್ರಕಾರ್ಯ ಸಂದರ್ಭದಲ್ಲಿ ರವಿ ಸಂತೋಷ್ ಆಳ್ವ, ಶ್ರೀ ವೆಂಕಟರಮಣ ದೇವಾಲಯದ ಧರ್ಮದರ್ಶಿ ರಮೇಶ್ ಪೈ ಹಾಗೂ ದೇವಾಲಯದ ಆಡಳಿತ ಮಂಡಳಿಯವರು ಸಹಕಾರ ನೀಡಿರುತ್ತಾರೆ.

 
 
 
 
 
 
 
 
 
 
 

Leave a Reply