ಬ್ಯೂಟಿ ಪಾರ್ಲರ್ ಹೋಗಿದ್ದಕ್ಕೆ ವಧುವಿನ ಮುಖ ವಿರೂಪ! ಮದುವೆಯೇ ರದ್ದು!!

ಹೆಣ್ಮಕ್ಕಳಿಗಂತೂ ಯಾವಾಗಲೂ ತಮ್ಮ ತ್ವಚೆಯದ್ದೇ ಚಿಂತೆ. ಹೀಗಾಗಿ ಬ್ಯೂಟಿ ಪಾರ್ಲರ್ ಗಳ ಕದ ತಟ್ಟೋದು ಸಾಮಾನ್ಯ. ಅದರಲ್ಲೂ ಮದುವೆ ಬಂತೆಂದರೆ ಮುಗೀತು. ಬ್ಯೂಟಿ ಪಾರ್ಲರ್ ಗಳಿಗೆ ಹೋಗದ ಹೆಣ್ಮಕ್ಕಳೇ ಬಹುಶಃ ಇರಲಿಕ್ಕಿಲ್ಲ. ಮದುವೆ ದಿನ ತಾನು ಸುಂದರವಾಗಿ ಕಾಣಬೇಕೆಂದು ಬ್ಯೂಟಿ ಪಾರ್ಲರ್ ನತ್ತ ಮುಖ ಮಾಡುತ್ತಾರೆ. ಆದರೆ, ಇಲ್ಲೊಂದೆಡೆ ವಧು ತಾನು ಬ್ಯೂಟಿ ಪಾರ್ಲರ್ ಹೋಗಿದ್ದಕ್ಕೆ ಮುಖ ವಿರೂಪವಾಗಿ ಮದುವೆಯೇ ನಿಂತು ಹೋಗಿರುವ ಘಟನೆ ನಡೆದಿದೆ.

ಹಾಸನದ ಅರಸೀಕೆರೆಯಲ್ಲಿ ಘಟನೆ ನಡೆದಿದೆ. ವಧು ಸುಂದರವಾಗಿ ಕಾಣಲು ಪಾರ್ಲರ್ ಹೋಗಿದ್ದಳು. ಇದುವೇ ಆಕೆಗೆ ಮುಳುವಾಗಿ ಪರಿಣಮಿಸಿದೆ. ಮೇಕಪ್ ಗೆ ಮುನ್ನ ಸ್ಟೀಮ್ ತೆಗೆದುಕೊಂಡಿದ್ದು, ಇದರಿಂದ ವಧುವಿನ ಮುಖ ಊದಿಕೊಂಡಿದೆ. ಅಲ್ಲದೆ ಮುಖ ವಿಕಾರವಾಗಿ ಸುಟ್ಟಂತೆ ಕಪ್ಪಾಗಿದೆ. ಯುವತಿಯ ಮುಖ ನೋಡಿದ ವರ, ವಧುವನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಹೀಗಾಗಿ ಮದುವೆಯೇ ರದ್ದಾಗಿದೆ.

ಯುವತಿಯ ಮುಖ ವಿರೂಪಗೊಂಡಿದ್ದಕ್ಕೆ ವರ ಹಾಗೂ ಆತನ ಕುಟುಂಬಸ್ಥರು ಮದುವೆಯನ್ನು ರದ್ದುಗೊಳಿಸಿದ್ದಾರೆ. ಇದರಿಂದ ವಧುವಿನ ಕುಟುಂಬ ಅಕ್ಷರಶಃ ಕಂಗಾಲಾಗಿದೆ. ತನ್ನ ಮುಖ ಸುಟ್ಟಂತೆ ಆಗಿದ್ದನ್ನು ಕಂಡು ಯುವತಿ ಕೂಡ ಶಾಕ್ ಆಗಿದ್ದಾಳೆ.

ನಗರದ ಬ್ಯೂಟಿಪಾರ್ಲರ್ ಮಾಲೀಕರಾದ ಗಂಗಾ ಎಂಬುವವರ ವಿರುದ್ಧ ವಧುವಿನ ಕುಟುಂಬಸ್ಥರು ಪೊಲೀಸ್ ದೂರು ನೀಡಿದ್ದಾರೆ. ಗಂಗಾ ಎಂಬವರ ಬ್ಯೂಟಿ ಪಾರ್ಲರ್ ಗೆ ಹೋಗಿಯೇ ಈ ರೀತಿ ಆಗಲು ಕಾರಣ ಎಂದು ವಧುವಿನ ಕುಟುಂಬ ಆರೋಪಿಸಿದೆ. ಹೀಗಾಗಿ ದೂರು ದಾಖಲಿಸಿಕೊಂಡ ಪೊಲೀಸರು ಗಂಗಾ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ, ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 
 
 
 
 
 
 
 
 
 
 

Leave a Reply