ಉಡುಪಿ ಬಾಲಭವನದಲ್ಲಿ ಮಕ್ಕಳ ಕಲರವ

ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು (ರಿ), ಜಿಲ್ಲಾ ಬಾಲಭವನ ಸಮಿತಿ ಉಡುಪಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿಯ ಸಹಯೋಗದೊಂದಿಗೆ 28 ಎಪ್ರಿಲ್ 22 ರಿಂದ 07 ಮೇ 22 ರವರೆಗೆ, 10 ದಿನಗಳ ಕಾಲ ಬೇಸಿಗೆ ಶಿಬಿರವನ್ನು ಉಚಿತವಾಗಿ ನಡೆಸಲಾಯಿತು. ಐದರಿಂದ ಹದಿನೈದು ವರ್ಷಗಳ ಪ್ರಾಯದ, ಎಪ್ಪತ್ತಕ್ಕೂ ಹೆಚ್ಚು ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿದ್ದರು. ವಿಶೇಷ ಚೇತನ ಮಕ್ಕಳು ಕೂಡ ಈ ಶಿಬಿರದಲ್ಲಿ ಇದ್ದರು.

ಬೆಳಗ್ಗೆ ಹತ್ತರಿಂದ ಸಂಜೆ ನಾಲ್ಕ ರವರೆಗೆ ನಡೆಯುತ್ತಿದ್ದ ಶಿಬಿರದಲ್ಲಿ ಮಕ್ಕಳಿಗೆ ಉಚಿತ ಊಟ ತಿಂಡಿಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಮಕ್ಕಳಿಗೆ ಸದಭಿರುಚಿಯ ವಿವಿಧ ಕಲೆಗಳನ್ನು ನುರಿತ ಶಿಕ್ಷಕರಿಂದ ಅಚ್ಚುಕಟ್ಟಾಗಿ ಕಲಿಸಿ ಕೊಡಲಾಗಿತ್ತು.

ದರ್ಪಣ ಸ್ಕೂಲ್ ಅಫ್ ಪರ್ಫಾಮಿಂಗ್ ಅರ್ಟ್ಸ್ (ರಮ್ಯ ಮತ್ತು ರಕ್ಷ ಟೀಚರ್ಸ್) ತಂಡದವರಿಂದ ನೃತ್ಯಕಲೆ, ಶ್ರೀಮತಿ ಹೇಮಲತಾ ಅವರಿಂದ ಸಂಗೀತ, ಶ್ರೀ ಮಂಜುನಾಥ್ ಬೈಲೂರು ಅವರಿಂದ ಚಿತ್ರ ಮತ್ತು ವರ್ಲಿ ಕಲೆ, ಶ್ರೀ ಸಂತೋಷ ಅವರಿಂದ ಸಾರ್ವಜನಿಕ ಭಾಷಣ ಕಲೆ, ಶ್ರೀಮತಿ ನಮಿತಾ ಅವರಿಂದ ವಿವಿಧ ಕರಕುಶಲ ಕಲೆಗಳನ್ನು ಕಲಿಸಿ ಕೊಡಲಾಯಿತು. ಈ ಎಲ್ಲಾ ಕಲೆಗಳನ್ನು ಕೇವಲ ಹತ್ತು ದಿನಗಳಲ್ಲಿ ಮಕ್ಕಳಿಗೆ ಕಲಿಸಿಕೊಟ್ಟ ಗುರುಗಳ ಚಾಕಚಕ್ಯತೆ ತುಂಬಾ ಪ್ರಶಂಸನೀಯ.

7 ಮೇ 2022 ರಂದು ಬೆಳಿಗ್ಗೆ ಮಕ್ಕಳಿಗೆ ಸಾಲುಮರದ ತಿಮ್ಮಕ್ಕನ ಪಾರ್ಕಿಗೆ ಪ್ರವಾಸ ಕೈಗೊಂಡು, ಅಪರಾಹ್ನ ಮೂರು ಗಂಟೆಯ ನಂತರ ಸಮಾರೋಪ ಸಭೆಯನ್ನು ಆಯೋಜಿಸಲಾಗಿತ್ತು . ಸಭಾ ಅತಿಥಿಗಳು ಹಾಗೂ ಪೋಷಕರು, ಮಕ್ಕಳ ಪ್ರಯತ್ನಗಳನ್ನು ನೋಡಿ ಬೆರಗಾಗಿ ಎಲ್ಲಾ ಮಕ್ಕಳ ಶ್ರೇಯೋಭಿವೃದ್ಧಿಯನ್ನು ಬಯಸಿದರು.

ಮಕ್ಕಳೇ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿ, ಕೆಲವು ಮಕ್ಕಳು ಬೇಸಿಗೆ ಶಿಬಿರದ ಅನುಭವಗಳನ್ನು ಹಂಚಿಕೊಂಡರು. ಶಿಬಿರದಲ್ಲಿ ಕಲಿತ ಸಂಗೀತ, ನೃತ್ಯಗಳನ್ನು ಮಕ್ಕಳು ಪ್ರದರ್ಶಿಸಿದರು.

ಬೇಸಿಗೆ ಶಿಬಿರದ ಎಲ್ಲಾ ಮುತುವರ್ಜಿಯನ್ನು ವಹಿಸಿದ ಇಲಾಖೆಯ ಶ್ರೀಮತಿ ರಮ್ಯ ಶಾಮ್ ಅವರಿಗೆ ಮಕ್ಕಳು ಮತ್ತು ಪೋಷಕರೆಲ್ಲಾ ಚಿರಋಣಿ. ಇಲಾಖೆಯಿಂದ ಇಂತಹ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ಆಯೋಜಿಸುವಂತಾಗಲಿ. ಮಕ್ಕಳು, ಪೋಷಕರು ಅದರ ಸದುಪಯೋಗ ಪಡೆಯುವಂತಾಗಲಿ.

 
 
 
 
 
 
 
 
 
 
 

Leave a Reply