ಆಕಾಶ್ ಬೈಜೂಸ್ ವತಿಯಿಂದ “ಜಂಕ್ ದಿ ಪ್ಲಾಸ್ಟಿಕ್’” ಅಭಿಯಾನಕ್ಕೆ ಚಾಲನೆ

ಉಡುಪಿ, ಅಕ್ಟೋಬರ್ 20, 2023: ಸಮಾಜಕ್ಕೆ ಕೊಡುಗೆ ನೀಡುವ ತನ್ನ ಬದ್ಧತೆಯನ್ನು ಮುಂದುವರಿಸಿರುವ ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳ ರಾಷ್ಟ್ರೀಯ ಸಂಸ್ಥೆಯಾಗಿರುವ ಆಕಾಶ್ ಬೈಜೂಸ್ ಉಡುಪಿಯ ಮಲ್ಪೆ ಬೀಚ್ ನಲ್ಲಿ ತನ್ನ “ಜಂಕ್ ದಿ ಪ್ಲಾಸ್ಟಿಕ್’ ಅಭಿಯಾನಕ್ಕೆ ಚಾಲನೆ ನೀಡಿದೆ.

ಇದರ ಪ್ರಮುಖ ಉದ್ದೇಶ ನಗರದ ಖ್ಯಾತ ಬೀಚ್ ಆಗಿರುವ ಮಲ್ಪೆಯ ಕಡಲ ಕಿನಾರೆಯಲ್ಲಿ ಪ್ರವಾಸಿಗರು, ವೀಕ್ಷಕರು ಎಲ್ಲೆಂದರಲ್ಲಿ ಎಸೆದು ಹೋಗಿ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆಗೆದುಹಾಕುವುದಾಗಿದೆ. ಇಲ್ಲಿಗೆ ಪ್ರತಿದಿನ ಆಗಮಿಸುವ ನೂರಾರು ಪ್ರವಾಸಿಗರು ತಾವು ಬಳಸಿದ ಪ್ಲಾಸ್ಟಿಕ್ ಅನ್ನು ಬಿಸಾಡುತ್ತಿರುವುದು ಹೆಚ್ಚಾಗಿದ್ದು, ಇದರಿಂದ ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದೆ.

ಈ ಹಿನ್ನೆಲೆಯಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡುವುದರ ಜೊತೆಗೆ ಪ್ರವಾಸಿಗರಿಗೆ ಪರಿಸರ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಪ್ರಮುಖ ಧೈಯವಾಗಿದೆ. ಅಲ್ಲದೇ, ತ್ಯಾಜ್ಯ ಪ್ಲಾಸ್ಟಿಕ್ ಅನ್ನು ಉಪಯುಕ್ತವಾಗಿ ಮರುಬಳಕೆ ಮಾಡುವ ಮೂಲಕ ಪರಿಸರಕ್ಕೆ ಆಗುವ ಹಾನಿಯ ಪ್ರಮಾಣವನ್ನು ಹೇಗೆ ತಗ್ಗಿಸಬಹುದೆಂಬುದರ ಬಗ್ಗೆಯೂ ಮನವರಿಕೆ ಮಾಡಿಕೊಡಲಾಗುತ್ತದೆ.

ಸಾರ್ವಜನಿಕರು ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ನಡೆದುಕೊಳ್ಳುವುದನ್ನು ಬದಲಾಯಿಸಿಕೊಳ್ಳುವಂತೆ ಅರಿವು ಮೂಡಿಸುವುದು ಈ ಉಪಕ್ರಮದ ಪ್ರಮುಖ ಗುರಿಯಾಗಿದೆ. ಅಲ್ಲದೇ, ಸಾಮೂಹಿಕವಾಗಿ ಪಾಲ್ಗೊಳ್ಳುವ ಮೂಲಕ ಕಡಲತೀರಗಳನ್ನು ಸ್ವಚ್ಛವಾಗಿಡುವ ಮಹತ್ವವನ್ನು ಗುರುತಿಸುವ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ಪ್ರೇರಣೆ ನೀಡುವ ಉದ್ದೇಶವನ್ನು ಈ ಉಪಕ್ರಮ ಹೊಂದಿದೆ.

ಈ ಅಭಿಯಾನದಲ್ಲಿ ಉಡುಪಿಯ ಆಕಾಶ್ ಬೈಜೂಸ್ ನ ಬೋಧಕ ಸಿಬ್ಬಂದಿ ಮತ್ತು ಶಾಖೆಯ ಸಿಬ್ಬಂದಿ ಹಾಗೂ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ಲಾಸ್ಟಿಕ್ ಬಳಕೆಯು ನಮ್ಮ ಸಮುದ್ರದಲ್ಲಿರುವ ಹಲಚರಗಳನ್ನು ಹೇಗೆ ನಾಶ ಪಡಿಸುತ್ತದೆ ಮತ್ತು ಇಂತಹ ಹಾನಿಯನ್ನುಂಟು ಮಾಡುವ ಪ್ರಕ್ರಿಯೆಯನ್ನು ಕೈಬಿಡುವುದರ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ನಮ್ಮ ಸಮುದ್ರ ಕಿನಾರಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಇಟ್ಟಿರುವ ಒಂದು ಪುಟ್ಟ ಹೆಜ್ಜೆ ಇದಾಗಿದೆ.

ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್ ನ ಪ್ರಾದೇಶಿಕ ನಿರ್ದೇಶಕ ಧೀರಜ್ ಕುಮಾರ್ ಮಿಶ್ರಾ ಅವರು ಮಾತನಾಡಿ, ಅಶಾಶ್ ಬೈಜೂನ್ ನಲ್ಲಿ ನಮ್ಮ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅಕಾಂಕ್ಷೆಗಳನ್ನು ಸಾಧಿಸಲು ನೆರವಾಗುವ ಜೊತೆಜೊತೆಯಲ್ಲೇ ನಾಳಿನ ಮಾದರಿ ಪ್ರಜೆಗಳಾಗಿ ರೂಪಿಸಲು ಸಹಾಯ ಮಾಡುವ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ ಎಂದು ಭಾವಿಸುತ್ತೇವೆ.

ಈ ದಿಸೆಯಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಪ್ರಕೃತಿಯ ಬಗ್ಗೆ ಪ್ರೀತಿಯನ್ನು ಬೆಳೆಸಲು ನೆರವಾಗುವ ವಿಚಾರದಲ್ಲಿ ಉಡುಪಿಯನ್ನು ಸ್ವಚ್ಛಗೊಳಿಸಲು ಹಾಗೂ ನಮ್ಮ ಅದ್ಭುತ ನಗರ ನಿರ್ವಹಣೆಗೆ ಕೊಡುಗೆಯನ್ನು ನೀಡುವ ಭಾಗವಾಗಿರಲು ನಾವು ಸಂತೋಷ ಪಡುತ್ತೇವೆ” ಎಂದರು.

ಮುಂಬರುವ ದಿನಗಳಲ್ಲಿ ದೇಶದ ಇತರ ಕರಾವಳಿ ನಗರಗಳಿಗೂ ಈ ಅಭಿಯಾನವನ್ನು ವಿಸ್ತರಣೆ ಮಾಡಲು ಆಕಾಶ್ ಬೈಜೂಸ್ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಣ್ಣೂರು, ಕೋಝಿಕೋಡ್, ಚೆನ್ನೈ, ವಿಶಾಖಪಟ್ಟಣ, ಮುಂಬೈ, ಮತ್ತು ಪಣಜಿಯ ಕಡಲ ಕಿನಾರೆಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ಈ ಸಂದರ್ಭದಲ್ಲಿ  ಉಡುಪಿ ನಗರಸಭೆಯ ಕಮಿಷನರ್ ರಾಯಪ್ಪ,  ಸೀನಿಯರ್ ಅಸಿಸ್ಟೆಂಟ್ ಡೈರೆಕ್ಟರ್ ಅನಿಲ್ ಕುಮಾರ್,  ಅಸಿಸ್ಟೆಂಟ್ ಡೈರೆಕ್ಟರ್ ಶ್ಯಾಮ್ ಪ್ರಸಾದ್  ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply