“ಹಡಿಲು ಭೂಮಿ ಕೃಷಿ” ರಾಷ್ಟ್ರಕ್ಕೆ ಮಾದರಿ- ಗೋಪಾಲ ಶೆಟ್ಟಿ

ಕೃಷಿ ಕ್ಷೇತ್ರದ ಆಸಕ್ತಿ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಮತ್ತೆ ಯುವ ಸಮುದಾಯಕ್ಕೆ ಕೃಷಿ ಕ್ಷೇತ್ರದ ಆಸಕ್ತಿಯನ್ನು ಇಮ್ಮಡಿಗೊಳಿಸಿದ ಶಾಸಕ ರಘುಪತಿ ಭಟ್ ನೇತೃತ್ವದ ಕೇದಾರೋತ್ಥಾನ ಟ್ರಸ್ಟ್ ಉಡುಪಿಯಲ್ಲಿ ಕೈಗೊಂಡ ಹಡಿಲು ಭೂಮಿ ಕೃಷಿ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ಗೋಪಾಲ ಶೆಟ್ಟಿ ಪ್ರಶಂಸಿದರು.

ಕೇದಾರೋತ್ಥಾನ ಟ್ರಸ್ಟ್ ಮತ್ತು ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ “ಹಡಿಲು ಭೂಮಿ ಕೃಷಿ ಅಂದೋಲನ”ದಡಿ ಕೃಷಿ ಮಾಡಿ ಬೆಳೆದಿರುವ ಭತ್ತದಿಂದ ಉತ್ಪಾದಿಸಿದ ಸಂಪೂರ್ಣ ಸಾವಯುವ ಕುಚ್ಚಲಕ್ಕಿ “ಉಡುಪಿ ಕೇದಾರ ಕಜೆ” ಯನ್ನು ದಿನಾಂಕ 07-08-2022 ರಂದು ಮುಂಬೈ, ಕುರ್ಲಾ ಬಂಟರ ಭವನದ ರಾಧಾಬಾಯಿ ತಿಮ್ಮಪ್ಪ ಬಂಡಾರಿ ಆಡಿಟೋರಿಯಂನಲ್ಲಿ ನಡೆದ ಮುಂಬೈ ಮಾರುಕಟ್ಟೆಗೆ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತ ಕೃಷಿ ಪ್ರಧಾನವಾದ ದೇಶ. ಇಲ್ಲಿ ಉತ್ಪಾದನೆಯಾಗುವ ಆಹಾರ ಹಲವಾರು ದೇಶಗಳಿಗೆ ಪೂರೈಕೆಯಾಗುತ್ತಿದೆ. ನರೇಂದ್ರ ಮೋದಿ ಜೀ ಅವರು ಪ್ರಧಾನಿ ಆದ ಬಳಿಕ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅವರ ಆಶಯದಂತೆ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಉಡುಪಿಯಲ್ಲಿ ಕೃಷಿ ಕ್ರಾಂತಿಯಾಗಿದೆ. ಅದರಿಂದ ಉತ್ಪಾದಿಸಿದ ಸಂಪೂರ್ಣ ಸಾವಯುವ ಕುಚ್ಚಲಕ್ಕಿ “ಉಡುಪಿ ಕೇದಾರ ಕಜೆ” ಯನ್ನು ಎಲ್ಲರು ಖರೀದಿಸುವ ಮೂಲಕ ಪ್ರೋತ್ಸಾಹಿಸಿಹಬೇಕು ಎಂದು ಹೇಳಿದ ಅವರು ಉಡುಪಿಯಲ್ಲಿ ಹಡಿಲು ಭೂಮಿ ಕೃಷಿ ಮಾಡಲು ಭೂಮಿ ನೀಡಿದ ಭೂ ಮಾಲಕರಿಗೆ ವಂದನೆಗಳನ್ನು ಸಲ್ಲಿಸಿದರು.

ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯರಾದ ರಾಜನ್ ಸಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜನಪ್ರತಿನಿಧಿಗಳಿಗೆ ವಿಭಿನ್ನವಾದ ಚಿಂತನೆಗಳಿದ್ದಾಗ ಸಮಗ್ರ ಅಭಿವೃದ್ಧಿ ಸಾಧ್ಯ. ಕೃಷಿ ನಮ್ಮ ಜೀವನ. ಆಧುನೀಕರಣದಿಂದ ಕೃಷಿ ನೇಪಥ್ಯ ಸರಿಯುತ್ತಿರುವಾಗ ಶಾಸಕ ರಘುಪತಿ ಭಟ್ ಅವರು ರಚನಾತ್ಮಕವಾಗಿ ಯೋಜನೆ ರೂಪಿಸಿ ಕಾರ್ಯಗತಗೊಳಿಸಿ 1500 ಎಕರೆ ಫಲವತ್ತಾದ ಕೃಷಿ ಭೂಮಿಗಳು ನಿರುಪಯುಕ್ತವಾಗುತ್ತಿರುವುದನ್ನು ತಪ್ಪಿಸಿದ್ದಾರೆ. ರಾಸಾಯನಿಕ ರಹಿತ ಸಾವಯವ ಕೃಷಿ ಮಾಡಿ ವಿಷಮುಕ್ತ ಆಹಾರ ಉತ್ಪಾದನೆಯ ಸಂದೇಶ ಸಾರಿ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಕೇದಾರೋತ್ಥಾನ ಟ್ರಸ್ಟ್ ಅಧ್ಯಕ್ಷರು, ಶಾಸಕರಾದ ಕೆ. ರಘುಪತಿ ಭಟ್ ಮಾತನಾಡಿ, ಉಡುಪಿಯಲ್ಲಿ ಹಮ್ಮಿಕೊಂಡ ಹಡಿಲು ಭೂಮಿ ಕೃಷಿ ನಿರಂತರವಾಗಿ ನಡೆಯುತ್ತದೆ. ಈ ಭಾರಿ ಹೆಚ್ಚಿನ ಕಡೆ ಭೂಮಾಲಕರೇ ಕೃಷಿ ಮಾಡುತ್ತಿದ್ದು, ಅವರಿಗೆ ಕೇದಾರೋತ್ಥಾನ ಟ್ರಸ್ಟ್ ಮೂಲಕ ಸಹಕಾರ ನೀಡಲಾಗುತ್ತಿದೆ. ಯುವಕರು ಕೃಷಿ ಕ್ಷೇತ್ರದತ್ತ ಆಸಕ್ತಿ ತೋರಿಸಿ ಈ ಬಾರಿ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಉಡುಪಿಯ ಬ್ರಾಂಡ್ “ಉಡುಪಿ ಕೇದಾರ ಕಜೆ” ಕುಚ್ಚಲಕ್ಕಿ ವಿಷಮುಕ್ತ ಸಂಪೂರ್ಣ ಸಾವಯುವ ಉತ್ಪಾದನೆಯಾಗಿದ್ದು, ಎಲ್ಲರೂ ಖರೀದಿಸುವ ಮೂಲಕ ಈ ಕೃಷಿ ಅಭಿಯಾನಕ್ಕೆ ಪ್ರೋತ್ಸಾಹಿಸುವಂತೆ ವಿನಂತಿ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಮುಂಬೈ, ಬಿಜೆಪಿ ಉಪಾಧ್ಯಕ್ಷರಾದ ಎರ್ಮಾಳು ಹರೀಶ್ ಶೆಟ್ಟಿ, ಮುಂಬೈ, ಕುರ್ಲಾ ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ ಕೆ. ಶೆಟ್ಟಿ, ಮುಲುಂಡ್ ಬಂಟರ ಸಂಘದ ಅಧ್ಯಕ್ಷರಾದ ಶಾಂತಾರಾಮ ಬಿ ಶೆಟ್ಟಿ, ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷರಾದ ಹರೀಶ್ ಜಿ. ಅಮೀನ್, ಆಹಾರ್ ನ ಶಿವಾನಂದ ಡಿ ಶೆಟ್ಟಿ, ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ಜಯ ಕೃಷ್ಣ ಶೆಟ್ಟಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮುಂಬೈ ಕರ್ನಾಟಕ ಮಲ್ಲ ದೈನಿಕದ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ. ಸುನಿತಾ ಎಂ ಶೆಟ್ಟಿ, ಬಿವಂಡಿ ನಗರ ಸೇವಕರಾದ ಸಂತೋಷ್ ಶೆಟ್ಟಿ, ಮಾಜಿ ನಗರ ಸೇವಕ ಶಿವಾನಂದ ಶೆಟ್ಟಿ, ಅಖಿಲ ಭಾರತ ತುಳುಕೂಟ ಅಧ್ಯಕ್ಷರಾದ ಧರ್ಮಪಾಲ ದೇವಾಡಿಗ, ಬಂಟರ ಸಂಘದ ಮದ್ಯ ಮುಂಬೈ ಪ್ರಾದೇಶಿಕ ಸಮಿತಿಗಳ ಸಮನ್ವಯ ಕಾರ್ಯಾಧ್ಯಕ್ಷರಾದ ಉಮಾಕೃಪ್ಣ ಶೆಟ್ಟಿ, ಬಂಟರ ಸಂಘದ ಜೊತೆ ಕೋಶಾಧಿಕಾರಿಗಳಾದ ಮುಂಡಪ್ಪ ಎಸ್, ಬಂಟ್ಸ್ ಚೇಂಬರ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಕುತ್ಪಾಡಿ ಚಂದ್ರ ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಪದ್ಮನಾಭ ಎಸ್, ಸುಧಾಕರ್ ಎಸ್. ಹೆಗ್ಡೆ, ರವಿ ಶೆಟ್ಟಿ, ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ಕರ್ನಾಟಕ ರಾಜ್ಯ ಬಿಜೆಪಿ ಬಿಜೆಪಿ ಎಸ್. ಟಿ ಮೋರ್ಚಾದ ಕಾರ್ಯದರ್ಶಿಗಳಾದ ಉಮೇಶ್ ನಾಯ್ಕ್, ಕೇದಾರೋತ್ಥಾನ ಟ್ರಸ್ಟ್ ನ ಕೋಶಾಧಿಕಾರಿಗಳಾದ ರಾಘವೇಂದ್ರ ಕಿಣಿ, ಟ್ರಸ್ಟಿಗಳಾದ ಬಿರ್ತಿ ರಾಜೇಶ್ ಶೆಟ್ಟಿ, ಕಪ್ಪೆಟ್ಟು ಪ್ರವೀಣ್ ಶೆಟ್ಟಿ, ಹರೀಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply