Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ಅಂಗಡಿಮಾರು ಕೃಷ್ಣ ಭಟ್ಟರಿಗೆ 101 ವರ್ಷದ ಸಂಭ್ರಮ . 

ಹಿರಿಯ ವೈದಿಕ ಹಾಗೂ ತುಳು ಭಾಷಾ ವಿದ್ವಾಂಸರೂ ಹಾಗೂ ಶ್ರೀ ಪೇಜಾವರ ಮಠಾಧೀಶರಾದ ಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಪೂರ್ವಾಶ್ರಮದ ತೀರ್ಥರೂಪರೂ ಆಗಿರುವ ಶ್ರೀ ಅಂಗಡಿಮಾರು ಕೃಷ್ಣ ಭಟ್ಟರಿಗೆ ಇಂದು ಸೋಮವಾರ 21/12/2020, ಮಾರ್ಗಶಿರ ಶುದ್ಧ ಸಪ್ತಮೀ ಸಾರ್ಥಕ ಜೀವನದ ನೂರ ಒಂದನೆಯ ಜನ್ಮವರ್ಧಂತೀ ಸಂಭ್ರಮ .

ಆ ನಿಮಿತ್ತ ಹಳೆಯಂಗಡಿ ಸಮೀಪದ ಪಕ್ಷಿಕರೆಯ ಅವರ ಗೃಹದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀಗಳವರು ಪಾಲ್ಗೊಂಡು ತಮ್ಮ ಪಟ್ಟದ ಶ್ರೀ ರಾಮವಿಠಲ ದೇವರ ಪೂಜೆ ನೆರವೇರಿಸಿದರು. ಅಲ್ಲದೇ ಈ ಪ್ರಯುಕ್ತ ತ್ರಿಮಧುರಾಕ್ತ ಸಹಸ್ರಕದಳೀ ಶ್ರೀ ವಿಷ್ಣುಸಹಸ್ರನಾಮ ಹೋಮ, ಚಕ್ರಾಬ್ಜ ಮಂಡಲ ಪೂಜೆಯೂ ನಡೆದವು .

ಅಂಗಡಿಮಾರು ಕೃಷ್ಣ ಭಟ್ಟರು ಅತ್ಯಂತ ಸಾತ್ವಿಕ ಸ್ವಭಾವದ ಸರಳ ಸಜ್ಜನಿಕೆಯ ವ್ಯಕ್ತಿ. ಮಿತಭಾಷಿ . ಇಂದಿಗೂ ಸ್ವಲ್ಪ ಶ್ರವಣದೋಷ ಬಿಟ್ಟರೆ ಯಾರ ಸಹಾಯವೂ ಇಲ್ಲದೇ ಸ್ವತಂತ್ರವಾಗಿ ನಡೆದಾಡಿಕೊಂಡು ತಿರುಗವಷ್ಟು ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ. ತುಳುಭಾಷೆಯ ಸೌರ ಪಂಚಾಂಗವನ್ನು ಅನೇಕ ವರ್ಷಗಳಿಂದ ಮುದ್ರಿಸುತ್ತಿದ್ದಾರೆ. ತುಳು ಭಾಷೆಯ ಸರಳ ಬೋಧನೆಗೆ ಅನುಕೂಲವಾಗುವಂತೆ ಪಠ್ಯಪುಸ್ತಕವನ್ನೂ ಅವರು ಪ್ರಕಟಿಸಿದ್ದಾರೆ. ಅಷ್ಟರ ಮಟ್ಟಿಗೆ ತುಳು ಭಾಷೆಯಲ್ಲಿ ಪ್ರಭುತ್ವವನ್ನು ಹೊಂದಿದ್ದಾರೆ.

ಅವರ ಧಾರ್ಮಿಕ ಸಾಧನೆಗಳಿಗೆ ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ಪಲಿಮಾರು ಮಠದ ವತಿಯಿಂದ ನೀಡಲಾಗುವ ಶ್ರೀ ರಾಜರಾಜೇಶ್ವರ ಪ್ರಶಸ್ತಿ, ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ಹಾಗೂ ಅನೇಕ ಸಂಘ ಸಂಸ್ಥೆಗಳ ಗೌರವ – ಪುರಸ್ಕಾರಗಳು ಸಂದಿವೆ.

ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶ್ರೀಯುತ ಭಟ್ಟರ ಸೊಸೆಯಂದಿರು ಅಳಿಯಂದಿರು ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳು ಮರಿ ಮೊಮ್ಮಕ್ಕಳೂ ಸೇರಿದಂತೆ ತುಂಬು ಸಂಸಾರ ಸಂತಸದಿಂದ ಪಾಲ್ಗೊಂಡು ಮನೆಯ ಹಿರಿಯಜ್ಜನ ಜನ್ಮವರ್ಧಂತಿಯಲ್ಲಿ ಪಾಲ್ಗೊಂಡು ಸಂಭ್ರಮಸಿದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!