ಮನದ ನೋವಿಗೆ ಸಾಂತ್ವನ ಸಿಕ್ಕಾಗ ಮನಸ್ಸು ಹಗುರ~ ಕರಂದಾಡಿ ಶ್ರೀಧರ್ ಶೆಟ್ಟಿಗಾರ್  

ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಶಿಯೇಷನ್ ದಕ್ಷಿಣ ಕನ್ನಡ-ಹಾಗು ಉಡುಪಿ ಜಿಲ್ಲಾಧ್ಯಕ್ಷ ಕರಂದಾಡಿ ಶ್ರೀಧರ್ ಶೆಟ್ಟಿಗಾರ್ ಕಾಳಜಿ, ಹಾಗು ನೋವಿನಿಂದ ತಮ್ಮ ಸಂಸ್ಥೆಯ ಸದಸ್ಯ ಮಿತ್ರರಿಗೆ ಹಾಗು ವಿವಿಧ ಸಂಘಟನೆ ಗಳ ಸಮಸ್ತ ಸಂಘಟಕರಿಗೆ ಮನದಾಳದ ಮಾತಿನ ಮೂಲಕ ಕೆಲವೊಂದು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ 

ಆತ್ಮೀಯರೇ… ಸರ್ವರಿಗೂ ಪ್ರೀತಿಯ ನಮಸ್ಕಾರ…

ಕೋವಿಡ್ ೧೯ ಬಗ್ಗೆ ಭಯ ಬೇಡ.. ಜಾಗೃತಿ ಬೇಕು.. 

ಇಂದು ಬಹಳ ಬೇಸರದ ಸಂಗತಿಯೊಂದು ಬರಸಿಡಿಲಿನಂತೆ ಬಂದು ನಮಗಪ್ಪಳಿಸಿದೆ. ನಮ್ಮ S.K.P.A. ಕುಟುಂಬದ ಒಬ್ಬ ಸಕ್ರಿಯ ಸದಸ್ಯನನ್ನು ನಾವು ಇಂದು ಕಳೆದುಕೊಂಡಿದ್ದೇವೆ. ಇದು ನಮ್ಮ ಇಡೀ ಛಾಯಾಗ್ರಾಹಕ ಕುಟುಂಬಕ್ಕೆ ಅರಗಿಸಿಕೊಳ್ಳಲಾಗದ ಘಟನೆ. ಕಾರ್ಕಳ ವಲಯದ ಸದಸ್ಯರಾಗಿದ್ದ ಶ್ರೀ ಪ್ರಸನ್ನ ಆರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಣ ಅವರಿಗೆ ಬಂದ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಆಗಿತ್ತು.

ತನ್ನ ಫಲಿತಾಂಶ ಪಾಸಿಟಿವ್ ಎಂದು ತಿಳಿದ ಕೂಡಲೇ ಆತ್ಮಹತ್ಯೆ ಮಾಡಿಕೊಂಡರೆಂದರೆ ಕೊರೋನಾ ಬಗ್ಗೆ  ಭಯವಿರ ಬಹುದು ಅಥವಾ ಕೊರೋನಾ ಕುರಿತು ತಿಳುವಳಿಕೆ ಇಲ್ಲದಿರಬಹುದು. ಆದ್ದರಿಂದ ನಮ್ಮ S.K.P.A. ಸದಸ್ಯರಲ್ಲಿ ಹಾಗು ವಿವಿಧ ಸಂಘಟನೆಗಳ ಮಿತ್ರರಲ್ಲಿ ನನ್ನ ವಿನಂತಿ.

ನಮ್ಮ ಮನದ ನೋವನ್ನು ಇನ್ನೊಬ್ಬರ ಬಳಿ ಹೇಳಿಕೊಂಡಾಗಲೇ ಮನಸ್ಸು ಹಗುರವಾಗುವುದು. ಏಕಾಂಗಿ ಯಾಗಿದ್ದರೆ ಮನಸ್ಸು ಭಾರವಾಗುವುದರ ಜೊತೆಗೆ ಸಮಸ್ಯೆಗೆ ಪರಿಹಾರವೂ ಸಿಗುವುದಿಲ್ಲ. ಕೊರೋನಾ ಈಗಾಗಲೇ ಸಮುದಾಯ ಪ್ರವೇಶ ಮಾಡಿಯಾಗಿದೆ. ನಾಳೆ ನಮಗೂ ಬರುವುದಿಲ್ಲ ಎಂಬ ಯಾವ ಗ್ಯಾರಂಟಿಯೂ ಇಲ್ಲ. ಯಾರಿಗೂ ಯಾವ ಸಂದರ್ಭದಲ್ಲಿಯೂ ಅಂಟಿಕೊಳ್ಳಬಹುದು. ನಮ್ಮ ವರದಿಯೂ ಪಾಸಿಟಿವ್ ಬರಬಹುದು. ಅಂತಹ ಸಂದರ್ಭದಲ್ಲಿ ದಯವಿಟ್ಟು ಮಾನಸಿಕವಾಗಿ ವಿಚಲಿತರಾಗಬೇಡಿ. ಧೈರ್ಯವನ್ನು ಕಳೆದುಕೊಳ್ಳಬೇಡಿ.ಸವಾಲು​ ಎದುರಿಸಲು ಸಿದ್ಧರಿರ ಬೇಕು, ಎದೆಗುಂದ ಬಾರದು..  ​

ಈಗಾಗಲೇ ತಜ್ಞ ವೈದ್ಯರು, ಪರಿಣಿತರು ಕೊರೋನಾ ಕುರಿತು ಬಹಳಷ್ಟು ಮಾಹಿತಿಯನ್ನು ನಮಗೆ ನೀಡಿದ್ದಾರೆ. ಹಲವಾರು ಜಾಗ್ರತಿ ವಿಚಾರಗಳನ್ನು ನಮ್ಮೊಂದಿಗೆ ಹಂಚಿ ಕೊಂಡಿದ್ದಾರೆ. ಇದು ಮಾರಣಾಂತಿಕ ರೋಗವಲ್ಲ ಎಂಬುದನ್ನು ತಿಳಿ ಹೇಳಿದ್ದಾರೆ. ಆದ್ದರಿಂದ ನಮಗೆ ಅಥವಾ ನಮ್ಮವರಿಗೆ ಪಾಸಿಟಿವ್ ಬಂದಲ್ಲಿ ದಯವಿಟ್ಟು ಹೆದರಬೇಡಿ. ವಿಚಲಿತರಾಗಬೇಡಿ. ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಏಕೆಂದರೆ ನಮ್ಮ ಮುಂದೆ ನಮ್ಮ ಕುಟುಂಬದ ಜವಾಬ್ದಾರಿ ಇದೆ. ನಮ್ಮ ತಂದೆ ತಾಯಿ, ಮಡದಿ, ಮಕ್ಕಳು, ಸಹೋದರ ಸಹೋದರಿಯರು ಮತ್ತು ನಮ್ಮ ಪ್ರೀತಿ ಪಾತ್ರರು ಇದ್ದಾರೆ. 

ನಮ್ಮ S.K.P.A. ಸಂಘಟನೆಯಂತೂ ನಮ್ಮ ಎಲ್ಲಾ ಸದಸ್ಯರ ಜೊತೆಗಿದೆ. ಹಾಗೆಯೇ ಎಲ್ಲಾ  ಸಂಘಟನೆಗಳ ಪ್ರಮುಖರು ತಮ್ಮ ಸದಸ್ಯರಿಗೆ ಅಥವಾ ಸದಸ್ಯರುಗಳು ಕುಟುಂಬದವರಿಗೆ  ಯಾವುದೇ ಸಂದರ್ಭದಲ್ಲಿ  ತೊಂದರೆ ಗಳಾದಲ್ಲಿ ಅವರ ರಕ್ಷಣೆಗೆ ಧಾವಿಸಿ. ಸಂಘಟನೆ ಇರುವುದೇ ಸದಸ್ಯರ ಒಳಿತಿಗಾಗಿ.  ಸಾಧ್ಯವಾದಲ್ಲಿ ಕೊರೋನಾ ಜಾಗೃತಿ ಬಗ್ಗೆ ಒಂದು ತಂಡವನ್ನು ಸಿದ್ಧಪಡಿಸಿಕೊಳ್ಳೋಣ. ಈ  ಮೂಲಕ ಎಲ್ಲರಿಗೂ ಧೈರ್ಯ ತುಂಬೋಣ. ನಾವು ಬದುಕ ಬೇಕು..ನಮ್ಮವರೂ ಬದುಕ ಬೇಕು ಎಂಬ ಧ್ಯೇಯ ವಾಕ್ಯದಂತೆ ನಡೆಯೋಣ.    

ಸಮಷ್ಟಿಯಾಗಿ ಚಿಂತಿಸೋಣ.. ಇನ್ನೊಬ್ಬರ ನೋವಿಗೆ ಸ್ಪಂದಿಸೋಣ..

ಸಮಸ್ತ ಸಂಘಟಕರಲ್ಲೂ ನನ್ನ ಮನವಿ ಇಷ್ಟೇ ..ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ. ಇಂತಹ ಸಂದರ್ಭಗಳಲ್ಲಿ ಏಕಾಂಗಿಯಾಗಿ ಇರದೆ ಗೆಳೆಯರಲ್ಲಿ ಆಪ್ತರಲ್ಲಿ ತಮ್ಮ ನೋವನ್ನು ಹಂಚಿಕೊಳ್ಳಿ. ತಮ್ಮ ಸಂಘಟನೆಯ ಪ್ರಮುಖರೊಂದಿಗೆ ಸಂಪರ್ಕದಲ್ಲಿರಿ. ನಾವಿರುವುದೇ ನಿಮಗಾಗಿ ಎಂಬುದನ್ನು ನೆನಪಿಸಿಕೊಳ್ಳಿ. ದೇವರು ಸರ್ವರನ್ನು ಕೊರೋನಾ ಸಂಕಷ್ಟದಿಂದ ಪಾರು ಮಾಡಲಿ ಎಂಬ ಪ್ರಾರ್ಥನೆಯೊಂದಿಗೆ.

:ಸರ್ವೇಜನ: ಸುಖಿನೋ ಭವಂತು:-

ವಂದನೆಗಳು: ಕರಂದಾಡಿ ಶ್ರೀಧರ್ ಶೆಟ್ಟಿಗಾರ್ ಜಿಲ್ಲಾಧ್ಯಕ್ಷರು, ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಶಿಯೇಷನ್ ದಕ್ಷಿಣ ಕನ್ನಡ-ಹಾಗು ಉಡುಪಿ ಜಿಲ್ಲೆ. 

 
 
 
 
 
 
 
 
 
 
 

Leave a Reply