ಆತ್ಮಹತ್ಯೆಗೆ ಯಾರಾದರೂ ಪ್ರಚೋದಿಸಿದ್ದರೆ ಅದನ್ನು ಸಾಬೀತುಪಡಿಸುವುದು ಪೋಲಿಸರ ಹೊಣೆ

ಹೊಸದಿಲ್ಲಿ: ಆತ್ಮಹತ್ಯೆಗೆ ಯಾರದಾದರೂ ಪ್ರಚೋದನೆ ಇದೆಯೆಂಬ ವಿಷಯ ತಿಳಿದುಬಂದರೆ ಆ ಆರೋಪಿಗೆ ಮೃತ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರಚೋದಿಸುವ ಉದ್ದೇಶವಿತ್ತೆಂದು  ಮಾತಲ್ಲಿ ಹೇಳಿದರೆ ಸಾಲುವುದಿಲ್ಲ ಬದಲಾಗಿ ಇದನ್ನು ಬಲವಾದ ಸಾಕ್ಷ್ಯದೊಂದಿಗೆ ಸಾಬೀತು ಮಾಡುವುದು ಪೊಲೀಸರ ಹೊಣೆ ಎಂದು ಸರ್ವೋಚ್ಛ ನ್ಯಾಯಾಲಯವು ಪ್ರಕರಣವೊಂದರಲ್ಲಿ ತೀರ್ಪು ನೀಡಿದೆ.

ಭಾರತೀಯ ದಂಡ ಸಂಹಿತೆಯ ಕಲಂ ೧೦೭ರ ಪ್ರಕಾರ ‘ಅಬೆಟ್‌ಮೆಂಟ್’ ಅಂದರೆ, ಆರೋಪಿಯು ಮೃತ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರಚೋದಿಸಿರಬೇಕು ಅಥವಾ ಪ್ರೇರೇಪಿಸಿರಬೇಕು ಅಥವಾ ನಿರ್ದಿಷ್ಟ ಕೃತ್ಯ ಎಸಗಲು  ಉದ್ದೇಶಪೂರ್ವಕ ಸಹಾಯ ಮಾಡಿರಬೇಕು. ಐಪಿಸಿ ಕಲಂ ೩೦೬ರ ಪ್ರಕಾರ ವ್ಯಕ್ತಿ ತನ್ನ ಪ್ರಾಣವನ್ನು ಸ್ವಯಂ ನಾಶಗೊಳಿಸಲು ಆರೋಪಿ ಸಂಪೂರ್ಣ ಸಹಕಾರ ನೀಡಿರಬೇಕು ಅಥವಾ  ಅತಿಯಾಗಿ ಪ್ರಚೋದಸಿರಬೇಕು ಎಂಬುದಾಗಿದೆ.ಇದನ್ನು ಪೊಲೀಸರು ಸಾಕ್ಷ್ಯದ ಆಧಾರದ ಮೇಲೆ ಸಾಬೀತುಪಡಿಸುವುದು ಮುಖ್ಯ ಎಂದು ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಸೂರ್ಯ ಕಾಂತ್ ಮತ್ತು ಹೃಷಿಕೇಶ್‌ರಾಯ್ ಇವರನ್ನು ಒಳಗೊಂಡ ತ್ರಿಸದಸ್ಯ ನ್ಯಾಯಪೀಠ ಪ್ರತಿಪಾದಿಸಿದೆ.

ಇದರ ಪಕ್ವ ಹಂತದಲ್ಲಿ ಈತ ಮೃತ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಾನೆಂಬುದನ್ನು ದೃಢಪಡಿಸುವಂತಹ ದಾಖಲೆ ಗಳು ತೀರಾ ಅವಶ್ಯವಾಗಿದೆ. ಇದರ ಹೊರತು ಆರೋಪಿ ಆತ್ಮಹತ್ಯೆಯ ಪ್ರಚೋದಕತೆಯಿಂದ ಎಂಬುದನ್ನು ಪೊಲೀಸರೇ ತಮ್ಮಷ್ಟಕ್ಕೆ ಗ್ರಹಿಸುವಂತಿಲ್ಲ ಎಂದು ಪಂಜಾಬಿನ ಗುರುಚರಣ್ ಸಿಂಗ್ ಎಂಬವರ ಮೇಲ್ಮನವಿ ವಿಚಾರಣೆ ಸಂದರ್ಭ ನ್ಯಾಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಗುರುಚರಣ್ ಎಂಬವರ  ಪತ್ನಿ ೨೨ ವರ್ಷ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಪತಿಯ ಪ್ರಚೋದನೆಯೇ ಕಾರಣವೆಂದು ಪೊಲೀಸರು ಪ್ರಕರಣ ದಾಖಲಿಸಿದ್ದರು.
ಗುರುಚರಣ್ ಪತ್ನಿಯ ಆಸೆಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ ಕಾರಣದಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದ ರೆಂದು ಪರಿಗಣಿಸಿದ ಅಧಿನ ನ್ಯಾಯಾಲಯ ಗುರುಚರಣ್ ಅಪರಾಧಿಯನ್ನಾಗಿ ಘೋಷಿಸಿತ್ತು. ಆದರೆ ಈತ ಪತ್ನಿಗೆ ಕಿರುಕುಳ ಕೊಟ್ಟ ಆರೋಪವಾಗಲಿ ಅಥವಾ ಈ ಬಗ್ಗೆ ಯಾವುದೇ ನೇರ ಸಾಕ್ಷಿ- ಸಾಕ್ಷ್ಯಗಳು ಇರಲಿಲ್ಲ. ಆದರೂ ನಂತರ ಹೈಕೋರ್ಟ್ ಕೂಡ ಅಧಿನ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು.
ಇದರ ವಿರುದ್ಧ  ಗುರುಚರಣ್ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಯಲ್ಲಿ, ತಾನು ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದೇನೆ ಅಥವಾ ಈ ದಾರುಣ ಕೃತ್ಯವೆಸಗುವಲ್ಲಿ ಆಕೆಗೆ  ಸಹಾಯ ಮಾಡಿದ್ದೇನೆಂಬ ಆರೋಪ ಸಾಬೀತುಪಡಿಸುವ ಒಂದೇ ಒಂದು ಸಾಕ್ಷ್ಯಗಳು ಪೊಲೀಸರಲ್ಲಿಲ್ಲ. ಅಂದಮೇಲೆ ತನ್ನನ್ನು ಅಪರಾಧಿ ಎಂದು ಪರಿಗಣಿಸುವುದು ನ್ಯಾಯವೇ ಎಂದು ನ್ಯಾಯಾಲಯವನ್ನು ಪ್ರಶ್ನೆ ಮಾಡಿದ್ದ. ಇದನ್ನು ಪರಿಗಣಿಸಿದ ಸರ್ವೋಚ್ಛ ನ್ಯಾಯಾಲಯದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿ ಅಧಿನ ನ್ಯಾಯಾಲ ಯಗಳ ತೀರ್ಪನ್ನು ತಳ್ಳಿಹಾಕಿತಲ್ಲದೆ, ಎರಡು ಮಕ್ಕಳ ತಾಯಿಯಾದ ಯುವತಿ ಯಾಕಾಗಿ ಆತ್ಮಹತ್ಯೆ ಮಾಡಿಕೊಂಡಳೆಂಬುದನ್ನು ನ್ಯಾಯಾಲಯಕ್ಕೆ ಊಹಿಸಲಾಗದು ಎಂಬ ತೀರ್ಪು ನೀಡಿದೆ.
 
 
 
 
 
 
 
 
 
 
 

Leave a Reply