ಪ್ರತೀ ಮಗುವಿನ ಜನನದೊಂದಿಗೆ ತಾಯಿ ಮತ್ತೆ ಜನಿಸುತ್ತಾಳೆ~ಡಾ। ರಾಜಲಕ್ಷ್ಮೀ, ಸಂತೆಕಟ್ಟೆ  

ತಾಯ್ತನ ಪ್ರತಿಯೊಬ್ಬ ಮಹಿಳೆಯ ಜೀವನದ ಅತ್ಯಮೂಲ್ಯ ಸಮಯ ದೇವರು, ತಾನು ಎಲ್ಲಾ ಕಡೆಗಳಲ್ಲಿ ಎಲ್ಲಾ ಸಮಯ ಸಂದರ್ಭಗಳಲ್ಲಿ ಇರಲಾಗುವುದಿಲ್ಲವೆಂದು ತಾಯಂದಿರನ್ನು ಸೃಷ್ಟಿಸಿದ ಎಂಬುದು ಪ್ರಚಲಿತ ಮಾತು
ಪ್ರತೀ ಮಗುವಿನ ಜನನದೊಂದಿಗೆ ತಾಯಿ ಮತ್ತೆ ಜನಿಸುತ್ತಾಳೆ.

ಮಗುವಿನ ನಗುವಿನಲ್ಲಿ ತಾಯ್ತನದ ನೋವನ್ನು ಮರೆಯುತ್ತಾಳೆ ಇಂತಹ ತಾಯಂದಿರಿಗೆ ಗರ್ಭಾವಸ್ಥೆಯ ಅವಧಿಯಲ್ಲಿ, ಪ್ರಸವದ ವೇಳೆಯಲ್ಲಿ , ಪ್ರಸವಾನಂತರ ದೊರೆಯಬೇಕಾದ/ಲಭ್ಯವಿರುವ ಸುರಕ್ಷಿತ ಆರೈಕೆ ಬಗ್ಗೆ ಜಾಗೃತಿ ಮೂಡಿಸಲು ಪ್ರತೀ ವರ್ಷ ಎಪ್ರಿಲ್ ತಿಂಗಳ 11ರಂದು ರಾಷ್ಟ್ರೀಯ ತಾಯ್ತನ ಸುರಕ್ಷತಾ ದಿನವಾಗಿ (Safe Motherhood day) ಆಚರಿಸಲಾಗುತ್ತದೆ.

2003ರಲ್ಲಿ White Ribbon’s Alliance India (WRAI) ಎಂಬ ಸಂಸ್ಥೆಯ ಕೋರಿಕೆಯ ಮೇರೆಗೆ ಭಾರತ ಸರಕಾರ ಈ ದಿನವನ್ನು ರಾಷ್ಟ್ರೀಯ ತಾಯ್ತನ ಸುರಕ್ಷತಾ ದಿನವಾಗಿ ಘೋಷಿಸಿದೆ. ಇದು ರಾಷ್ಟ್ರ ಪಿತ ಮಹಾತ್ಮ ಗಾಂಧಿಯವರ ಪತ್ನಿಯಾದ ಕಸ್ತೂರ್ಭಾ ಗಾಂಧಿಯವರ ಜನ್ಮದಿನವಾಗಿರುವುದು ಈ ದಿನದ ಮತ್ತೊಂದು ವಿಶೇಷತೆ

ಯಾವುದೇ ರಾಷ್ಟ್ರದ ತಾಯಂದಿರ ಮರಣ ಪ್ರಮಾಣ (MMR) ಹಾಗೇ ಶಿಶುಮರಣದ ಪ್ರಮಾಣ(IMR) ಆ ರಾಷ್ಟ್ರದ ಆರೋಗ್ಯದ ಬಗೆಗೆ ಸುಳಿವು ನೀಡುತ್ತದೆ. ಭಾರತದ MMR 2016-2018 ರ ಅಂಕಿ ಅಂಶಗಳ ಪ್ರಕಾರ 113/100000 ಜನನಗಳು . ತಾಯಂದಿರ ಮರಣದ ಪ್ರಮುಖ ಕಾರಣಗಳಾದ ರಕ್ತಹೀನತೆ, ಅತೀ ರಕ್ತಸ್ರಾವ, ನಂಜು/ಸೋಂಕು, ಅತೀ ರಕ್ತದೊತ್ತಡ ಮುಂತಾದವುಗಳ ಕುರಿತು ಅರಿವು ಮೂಡಿಸಿ ಮಹಿಳೆಯರು ಕ್ಲಪ್ತ ಸಮಯದಲ್ಲಿ ವೈದ್ಯಕೀಯ ಸಲಹೆಯನ್ನು ಪಡೆಯುವಂತೆ ಪ್ರೇರಣೆ ನೀಡುವುದು ಈ ದಿನದ ಉದ್ದೇಶ

ಸುರಕ್ಷಿತ ತಾಯ್ತನದ ತಳಪಾಯ ಆರೋಗ್ಯಭರಿತ ಹದಿಹರೆಯ ಸಣ್ಣ ವಯಸ್ಸಿನಲ್ಲೇ ಪೌಷ್ಟಿಕಾಂಶ ಭರಿತ ಆಹಾರದ ಸೇವನೆ, ದೇಹಕ್ಕೆ ಅಗತ್ಯವಾದಷ್ಟು ನೀರು, ನಿಯಮಿತ ವ್ಯಾಯಾಮದ ಅಭ್ಯಾಸ ರೂಢಿಸಿಕೊಂಡಲ್ಲಿ ಮುಂದಿನ ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರವಿರಿಸಬಹುದು.

ಗರ್ಭಿಣಿಯಾದಾಗ ತಜ್ಞ ವೈದ್ಯರಿಂದ ಪರೀಕ್ಷಿಸಿಕೊಂಡು, ಅಗತ್ಯವಿರುವ ರಕ್ತಪರೀಕ್ಷೆ ಹಾಗು ಸ್ಕ್ಯಾನಿಂಗ್ ಮುಂತಾದ ವಿಧಾನಗಳನ್ನು ಬಳಸಿಕೊಂಡು ಅಪಾಯದ ಗರ್ಭಾವಸ್ಥೆಯನ್ನು (High risk Pregnancy) ಮೊದಲೇ ಪತ್ತೆಹಚ್ಚಿಕೊಳ್ಳಬಹುದು ಅಂತಹ ಅಪಾಯದ ಮುನ್ಸೂಚನೆ ದೊರೆತ ಗರ್ಭಿಣಿಯರು ಎಲ್ಲಾ ಸೌಲಭ್ಯಗಳಿರುವ ಆಸ್ಪತ್ರೆಯಲ್ಲಿ ಹೆರಿಗೆಗೆ ನೋಂದಾಯಿಸಿ, ಅಗತ್ಯವಾದ ಚಿಕಿತ್ಸೆಯನ್ನು ಸರಿಯಾದ ಸಮಯದಲ್ಲಿ ಪಡೆಯಬಹುದು.

ಬಾಣಂತನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಲು ಮುಖ್ಯ. ಹೆರಿಗೆಯ ನಂತರವೂ ಪೋಷಕಾಂಶ ಭರಿತ ಆಹಾರ, ನೀರು ಸೇವನೆ, ನಿಯಮಿತ ವ್ಯಾಯಾಮ, 6 ತಿಂಗಳುಗಳ ವರೆಗೆ ಸ್ತನಪಾನ, ಕುಟುಂಬ ನಿಯಂತ್ರಣ ವಿಧಾನಗಳ ಸರಿಯಾದ ಬಳಕೆಯಿಂದ ತಾಯ್ತನವನ್ನು ಸುರಕ್ಷಿತಗೊಳಿಸಬಹುದು.

ಸುರಕ್ಷಿತ ಗರ್ಭಪಾತ ವಿಧಾನಗಳ ಬಗೆಗೆ ಮಾಹಿತಿ ಮತ್ತು ಸೌಲಭ್ಯಗಳನ್ನು ನೀಡಿದಾಗ ಅಸುರಕ್ಷಿತ / ನಂಜಿನ ಗರ್ಭಪಾತ ಹಾಗು ರಕ್ತಹೀನತೆಗಳನ್ನು ತಪ್ಪಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಜೊತೆಗೆ ಎಲ್ಲಾ ಮಹಿಳೆಯರಿಗೆ HIV/AIDS ಮತ್ತಿತರ ಲೈಂಗಿಕ ಕಾಯಿಲೆಗಳ ಮಾಹಿತಿ ನೀಡಿ ಅವುಗಳ ಚಿಕಿತ್ಸೆ ಬಗ್ಗೆಯೂ ಅರಿವು ಮೂಡಿಸಿದಲ್ಲಿ ತಾಯಂದಿರ ಆರೋಗ್ಯ ಉತ್ತಮವಾಗಿರುತ್ತದೆ.

ತಾಯಿಯಾಗುವುದೆಂದರೆ ತನಗೇ ತಿಳಿದಿರದ ತನ್ನ ಸಾಮರ್ಥ್ಯಗಳನ್ನು ಅರಿತು, ತನ್ನ ಭಯವನ್ನು ಮೆಟ್ಟಿ ನಿಂತು ಮುನ್ನಡೆಯುವ ಸುಂದರ ಅನುಭವ. ಹೆಣ್ಣಿನ ಬಾಳಿನ ಅಂತಹ ಸುಮಧುರ ಕ್ಷಣಗಳು ಆರೋಗ್ಯದ ಮಾಹಿತಿ ಗಳನ್ನು ಸದುಪಯೋಗ ಪಡಿಸಿಕೊಂಡು ಸುರಕ್ಷಿತವಾಗಿರಲಿ ಎಂಬುದು ತಾಯ್ತನ ಸುರಕ್ಷತಾ ದಿನದ ಶುಭ ಆಶಯಗಳು. 

 

 
 
 
 
 
 
 
 
 
 
 

Leave a Reply