ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರ/ ಮುಂದಿರುವ ಸವಾಲುಗಳು.~ಹೆಚ್. ಆಶೀಷ್ ಶೆಟ್ಟಿ

ಹೌದು ಪ್ರಸ್ತುತ ರಾಜ್ಯದಲ್ಲಿ ಚರ್ಚೆ ಆಗುತ್ತಿರುವಂತಹ ಪ್ರಮುಖ ವಿಷಯಗಳಲ್ಲಿ ಇದೂ ಒಂದು. ಮನುಷ್ಯನ ಜೀವನದಲ್ಲಿ ಎರಡು ಅತ್ಯಂತ ಮಹತ್ವದ ಪಾತ್ರವಹಿಸುವುದು ಮೊದಲನೆಯದು ಆತನ ಆರೋಗ್ಯ, ಎರಡನೆಯದು ಆವನ ಮುಂದಿನ ಭವಿಷ್ಯವನ್ನು ನಿರ್ದರಿಸುವ ಶಿಕ್ಷಣ.

ಈ ಆರೋಗ್ಯ ಮತ್ತು ಶಿಕ್ಷಣ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಪ್ರಾಮುಖ್ಯವಾದುದು. ಪ್ರಸ್ತುತ ನಮ್ಮ ರಾಜ್ಯದಲ್ಲಿ ಚರ್ಚೆ ಅಥವಾ ಒಂದು ರೀತಿಯಲ್ಲಿ ಸರಕಾರ, ಸಾಮಾನ್ಯ ವರ್ಗದ, ಮಧ್ಯಮ ವರ್ಗದ ಜನರಿಗೆ ಸವಾಲು ಆಗುತ್ತಿರುವಂತಹ ವಿಷಯಗಳಲ್ಲಿ ಇವೆರಡು ಪ್ರಮುಖ ವಾದುದು.

ಕೋವಿಡ್-19 ಸಾಂಕ್ರಾಮಿಕ ರೋಗ ಅಪ್ಪಳಿಸಿದ ಬಳಿಕ ದೇಶದ ಅಥವಾ ರಾಜ್ಯದ ಆರ್ಥಿಕತೆಗೆ ಕೊಡಲಿ ಏಟು ಬಿದ್ದಿರುವುದು ನಿಜಾಂಶ. ಎಲ್ಲಾ ವರ್ಗದ ಜನರಿಗೂ ಇದರಿಂದ ತೊಂದರೆ ಆಗಿದೆ. ಸರಕಾರವು ಜನರ ಆರೋಗ್ಯದ ಹಿತದ್ರಷ್ಟಿಯಿಂದ ರಾಜ್ಯದಲ್ಲಿ ಲಾಕ್ ಡೌನ್ ಅನ್ನು ಘೋಷಣೆ ಮಾಡಿರುತ್ತದೆ.

ಕೋವಿಡ್-19 ನ್ನು ತಡೆಗಟ್ಟಲು ಲಾಕ್ ಡೌನ್ ಅನಿವಾರ್ಯ ಮತ್ತು ಮಹತ್ವದ್ದು ನಿಜ. ಇದರಿಂದ ಎಲ್ಲಾ ಕ್ಷೇತ್ರಗಳ ಚಟುವಟಿಕೆಗಳು ನಿಂತು ಹೋಯಿತು. ಅನೇಕ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡರು, ಹೊಸದಾಗಿ ಉದ್ಯಮವನ್ನು ಪ್ರಾರಂಭ ಮಾಡಿದವರು ತಮ್ಮ ಉದ್ಯಮವನ್ನು ಕಳೆದುಕೊಂಡು, ನಷ್ಟವನ್ನು ಅನುಭವಿಸಿ ಬೇರೆ ಉದ್ಯೋಗವನ್ನು ಮಾಡುವಂತಹ ಮತ್ತು ಮಾಡುತ್ತಿರುವಂತಹ ಸ್ಥಿತಿ ನಿರ್ಮಾಣವಾಗಿದೆ.

ಈ ಮಾತನ್ನು ಇಲ್ಲಿ ಪ್ರಸ್ತಾಪಿಸಲು ಕಾರಣ ಇಷ್ಟೆ… ಇಂದು ನಮ್ಮ ರಾಜ್ಯದಲ್ಲಿ ಚರ್ಚೆ ಆಗುತ್ತಿರುವ ವಿಷಯವು ಖಾಸಗಿ ಶಿಕ್ಷಣ ಸಂಸ್ಥೆ ಮತ್ತು ಸರಕಾರದ ನಿರ್ಣಯದ ಬಗೆಗೆ, ಹೌದು.. ಇಂದು ಖಾಸಗಿ ಶಿಕ್ಷಣ ಸಂಸ್ಥೆ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸವನ್ನು ಮಾಡುತ್ತಿರುವಂತಹ ಉಪನ್ಯಾಸಕರು ಅಥವಾ ಶಿಕ್ಷಕರ ಸ್ಥಿತಿ.

ಇಂದು ಅನೇಕ ಸಂಘಟನೆಗಳು ಹೇಳುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಅಲ್ಲಿನ ಆಡಳಿತ ಮಂಡಳಿಯು ಶುಲ್ಕವನ್ನು ಪಾವತಿಸಲು ಒತ್ತಡವನ್ನು ಪೋಷಕರಿಗೆ ಹಾಕದಂತೆ ಸರಕಾರವು ಆದೇಶವನ್ನು ನೀಡಬೇಕೆಂದು ಮಾದ್ಯಮದ ಮೂಲಕ ವರದಿ ಆಗುತ್ತಾ ಇದೆ.

ಹಾಗೂ ಆನ್ ಲೈನ್ ತರಗತಿಗೆ ಹಾಜರಾಗಬೇಕಾದರೆ ಶುಲ್ಕವನ್ನು ಪಾವತಿಸಲು ಶಿಕ್ಷಣ ಸಂಸ್ಥೆಗಳು ಒತ್ತಡವನ್ನು ಹಾಕುತ್ತಿದ್ದಾರೆ ಎಂಬುದು ಕೂಡ ವರದಿ ಅಗುತ್ತಿರುವ ವಿಚಾರ. ಪ್ರಸ್ತುತ ಈ ವಿಚಾರ ನಮ್ಮ ರಾಜ್ಯದಲ್ಲಿ ಸುದ್ದಿಯಲ್ಲಿದೆ.

ಸರಿ ಹಾಗಾದರೆ ವಿದ್ಯಾರ್ಥಿಗಳ ಮತ್ತು ಅವರ ಪೋಷಕರ ಹಿತವನ್ನು ಕಾಪಾಡುವ ಉದ್ದೇಶದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕವನ್ನು ಪಾವತಿಸಲು ಒತ್ತಡವನ್ನು ಹಾಕುವುದು ಮತ್ತು ಆನ್ ಲೈನ್ ತರಗತಿಗೆ ದಾಖಲಾಗಲು ಶುಲ್ಕವನ್ನು ಪಾವತಿಸದ ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡದೇ ಇರುವುದು ಖಂಡಿತವಾಗಿಯೂ ತಪ್ಪು.

ಈ ಮಾತನ್ನು ಒಪ್ಪಿಕ್ಕೊಳ್ಳುವ. ಇದನ್ನು ನಾವು ಧನಾತ್ಮಕವಾಗಿಯು ಚಿಂತಿಸುವ. ಆದರೆ ನಾವು ಪ್ರಸ್ತುತ ಖಾಸಗಿ ಶಿಕ್ಷಣ ಸಂಸ್ಥೆಗಳಿಗಿರುವ ತೊಂದರೆಗಳು ಯಾವುವು..? ಯಾಕೆ ಶುಲ್ಕವನ್ನು ಪಾವತಿಸಲು ಒತ್ತಡವನ್ನು ಹಾಕುತ್ತಾರೆ..? ಅಲ್ಲಿ ಕರ್ತವ್ಯವನ್ನು ನಿರ್ವಹಿಸುವ ಉದ್ಯೋಗಿಗಳ ಬಗೆಗೆ ಯೋಚಿಸುವುದು ಉತ್ತಮವಲ್ಲವೇ..?

ಹಾಗೂ ವಾಸ್ತವ ಸ್ಥಿತಿಯನ್ನು ಯೋಚನೆ ಮಾಡಿಕೊಂಡು ವಿದ್ಯಾರ್ಥಿಗಳ ಅಥವಾ ಪೋಷಕರ ಪರವಾಗಿ ನಿಲ್ಲುವ ಸಂಘ ಸಂಸ್ಥೆಗಳು ಮತ್ತು ಸರಕಾರವು ದಿಟ್ಟ ಹೆಜ್ಜೆಯನ್ನು ಇಡುವುದು ಸೂಕ್ತ ಎಂಬ ಭಾವನೆ ನಮ್ಮದು..

ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯೆ ಅಥವಾ ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಮೂಲಕ ಹಣವನ್ನು ಪಡೆಯುತ್ತಿದ್ದಾರೆ. ಶಿಕ್ಷಣ ಎಂಬುವುದು ಸಂಪೂರ್ಣವಾಗಿ ವಾಣಿಜ್ಯೀಕರಣಗೊಂಡಿದೆ. ಇದರಿಂದಾಗಿ ಸಂಸ್ಥೆಯ ಮುಖ್ಯಸ್ಥರು ಹಣ ಆಸ್ತಿ-ಪಾಸ್ತಿಯನ್ನು ಮಾಡಿಕ್ಕೊಳ್ಳುತ್ತಿದ್ದಾರೆ.

ಹೀಗೆಲ್ಲಾ ಮಾತುಗಳು ಜನ ಸಾಮಾನ್ಯರಲ್ಲಿ ಸಹಜವಾಗಿ ಬರುತ್ತದೆ. ಆದರೆ ವಾಸ್ತವಿಕ ಪರಿಸ್ಥಿತಿ ಹಾಗಿರುವುದಿಲ್ಲಾ. ಇದನ್ನು ಜನರು ಅಥವಾ ಪೋಷಕರು ಅರ್ಥ ಮಾಡಿಕ್ಕೊಳ್ಳಬೇಕು.

ಒಂದು ಪ್ರಾರಂಭದ ಖಾಸಗಿ ಶಿಕ್ಷಣ ಸಂಸ್ಥೆ ಅಲ್ಪ ಮಟ್ಟಿಗೆ ಅಂದರೆ ಉಸಿರನ್ನು ಸಲಿಸಾಗಿ ಬಿಡಬೇಕು ಎಂದರೆ ಕನಿಷ್ಟ ಹತ್ತರಿಂದ ಹನ್ನೆರಡು ವರ್ಷಗಳು ಬೇಕಾಗುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ರೀತಿಯಾದಂತಹ ಅನುದಾನ ಸರಕಾರದಿಂದ ಬರುವುದಿಲ್ಲಾ.

ಒಂದು ವಿದ್ಯಾರ್ಥಿಗೆ ಬರುವ ಸಾಮಾನ್ಯ ಖರ್ಚುಗಳಾದ ಸರಕಾರ/ ವಿಶ್ವವಿದ್ಯಾನಿಲಯದ ನೊಂದಾವಣಿ ಶುಲ್ಕ, ಪರೀಕ್ಷಾ ಶುಲ್ಕ, ಶಾಲಾ ಸಮವಸ್ತ್ರ, ಕ್ರೀಡೆ-ಸಾಂಸ್ಕ್ರತಿಕ ಚಟುವಟಿಕೆಗಳಿಗೆ ಬೇಕಾಗುವಂತಹ ಶುಲ್ಕ, ಭೋಧನಾ ಶುಲ್ಕ, ಅಭಿವ್ರದ್ದಿ ಶುಲ್ಕ, ಹೀಗೆ ಈ ರೀತಿಯಾದಂತಹ ಎಲ್ಲಾ ಶುಲ್ಕವನ್ನು ವಿದ್ಯಾರ್ಥಿಯು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪಾವತಿಸುತ್ತಾರೆ ಮತ್ತು ಪಾವತಿಸಲೇಬೇಕು.

ಇದೆಲ್ಲಾ ತಿಳಿದು ಪೋಷಕರು ಅಂತಹ ಸಂಸ್ಥೆಗಳಿಗೆ ದಾಖಲಿಸುತ್ತಾರೆಯೋ ಹೊರತು ತಿಳಿಯದೇ, ಮಾಹಿತಿಯಿಲ್ಲದೇ ಯಾರೂ ದಾಖಲಿಸಲು ಸಾದ್ಯವಿಲ್ಲಾ ಅಲ್ಲವೇ…?

ಹೌದು.. ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕವನ್ನು ಪಾತಿಸಲು ಹೇಳುತ್ತಿರುವುದು ಅಥವಾ ಒತ್ತಡವನ್ನು ಹಾಕುತ್ತಿರುವ ವಿಚಾರವಾಗಿ ಬರುವ. ಕೋವಿಡ್-19 ರಾಷ್ಟ್ರ ವ್ಯಾಪಿ ಆವರಿಸಿದೆ. ನಮ್ಮ ರಾಜ್ಯದಲ್ಲಿಯೂ ಲಾಕ್ ಡೌನ್ ಆಯಿತು.

ನಮ್ಮ ಉದ್ಯೋಗ, ಉದ್ಯಮ ಎಲ್ಲಾನೂ ಹೋಯಿತು ಹೀಗೆಲ್ಲಾ ಸಮಸ್ಯೆ ಇದೆ. ನಮ್ಮ ಮಕ್ಕಳಿಗೂ ಓದಿಸಬೇಕು ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕವನ್ನು ಪಾವತಿ ಮಾಡುವಂತೆ ಒತ್ತಡವನ್ನು ಹಾಕುತ್ತಿದ್ದಾರೆ. ಶುಲ್ಕವನ್ನು ಪಾವತಿಸಲು ಸಾಧ್ಯವಿಲ್ಲಾ ಎಂದು ಎಲ್ಲಾ ಪೋಷಕರು ಪ್ರತಿಭಟನೆ ಅಥವಾ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ ಆದರೆ ತಪ್ಪಿಲ್ಲಾ..

ಆದರೆ ಅದೇ ಖಾಸಗಿ ಶಿಕ್ಷಣ ಸಂಸ್ಥೆಯನ್ನು ನಡೆಸುವವರ ಸ್ಥಿತಿಯನ್ನು ನಾವು ಯೋಚನೆ ಮಾಡಿದರೆ ಹಲವು ಅಂಶವನ್ನು ತೆಗೆದುಕ್ಕೊಳ್ಳಬಹುದು. ಪ್ರಸ್ತುತ ಕೋವಿಡ್-೧೯ ರ ಕಾರಣದಿಂದ ಅದೆಷ್ಟೋ ಮಂದಿ ಖಾಸಗಿ ಶಾಲ ಶಿಕ್ಷಕರು/ ಉಪನ್ಯಾಸಕರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಕೆಲವು ಶಿಕ್ಷಕರು ಬೇರೆ ಬೇರೆ ರೀತಿಯದಂತಹ ಕೆಲಸವನ್ನು ತಮ್ಮ ಜೀವನವನ್ನು ನಡೆಸುವ ಸಲುವಾಗಿ ಮಾಡುತ್ತಿದ್ದಾರೆ.

ಶಿಕ್ಷಕರಿಗೆ ವೇತನವನ್ನು ನೀಡಲು ಸಂಸ್ಥೆಯ ಆಡಳಿತ ಮಂಡಳಿಯ ಬಳಿ ಹಣವಿಲ್ಲಾ. ಮಕ್ಕಳ ಶಾಲಾ ಶುಲ್ಕವನ್ನು ಹೆಚ್ಚಳ ಮಾಡಿ ಕನಿಷ್ಟ ಭೋದಕ ಮತ್ತು ಭೋಧಕೇತರ ಸಿಬ್ಬಂದಿಗಳ ವೇತನವನ್ನು ನೀಡಬಹುದು ಎಂದರೆ ಅದೂ ಸಾಧ್ಯವಿಲ್ಲಾ. ಈಗ ಮಕ್ಕಳ ಬಳಿ ಶಾಲಾ ಬಾಕಿ ಶುಲ್ಕ ಮತ್ತು ಮುಂದಿನ ತರಗತಿಯ ಶುಲ್ಕವನ್ನು ಕೇಳಿದರೆ ಕೋವಿಡ್ ನಿಂದಾಗಿ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲಾ ಹಣವಿಲ್ಲಾ ಹೆಳುತ್ತಾರೆ.

ಆದರೆ ಶಿಕ್ಷಕ ಹುದ್ದೆಯನ್ನೇ ಆಧರಿಸಿ ಜೀವನವನ್ನು ಮಾಡುವ ಶಿಕ್ಷಕರ ಅಥವಾ ಉಪನ್ಯಾಸಕರ ಜೀವನ ಬೀದಿಗೆ ಬಿದ್ದಂತಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಭೋಧಕೇತರ ವರ್ಗದ ಕೆಲಸದವರು ಕುಟುಂಬದ ಪರಿಸ್ಥಿತಿಯು ಹೇಳತೀರದು. ಅಷ್ಟು ಕಷ್ಟದ ಸ್ಥಿತಿಯಲ್ಲಿದೆ ಅವರ ಕುಟುಂಬ.. ಇದರ ಬಗ್ಗೆ ನಾವು ಯೋಚಿಸುವುದು ಮುಖ್ಯ ಅಲ್ಲವೇ.

ಶಾಲಾ ಕಾಲೇಜು ಶುಲ್ಕವನ್ನು ಜಾಸ್ತಿ ಮಾಡಿದರೆ ವಿದ್ಯಾರ್ಥಿ ದಾಖಲಾತಿ ಪ್ರಮಾಣವು ಕಡಿಮೆ ಆಗುತ್ತದೆ. ಶಿಕ್ಷಕರು ಮತ್ತು ಅದೇ ಶಿಕ್ಷಣ ಸಂಸ್ಥೆಯನ್ನು ಅವಲಂಬಿತ ಕುಟುಂಬಗಳಿಗೆ ತೊಂದರೆ ಆಗುತ್ತದೆ. ಹಾಗಾಗಿ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ವನ್ನು ಜಾಸ್ತಿ ಮಾಡುವ ಹಾಗೆ ಇಲ್ಲ.

ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ ಅಥವಾ ಕಾಲೇಜನ್ನು ಅಭಿವ್ರದ್ದಿ ಮಾಡದೇ ಇದ್ದಲ್ಲಿ ಅಥವಾ ಮಕ್ಕಳಿಗೆ ಸೂಕ್ತ ವ್ಯವಸ್ಥೆಯನ್ನು ಶೈಕ್ಷಣಿಕವಾಗಿ ಮಾಡದೇ ಇದ್ದಲ್ಲಿ ಪೋಷಕರು ಶಾಲಾ/ಕಾಲೇಜಿಗೆ ಬಂದು ಗಲಾಟೆ ಮಾಡುವುದು ಸಹಜ. ಇದರಿಂದಾಗಿ ಆಡಳಿತ ಮಂಡಳಿಯು ಬ್ಯಾಂಕ್ ಗಳಲ್ಲಿ ಸಾಲವನ್ನು ತಗೊಂಡು ಸಂಸ್ಥೆಯ ಕಟ್ಟಡ, ಮೂಲಭೂತ ಸೌಕರ್ಯದ ಅಭಿವ್ರದ್ದಿ ಪಡಿಸ ಬೇಕಾಗುತ್ತದೆ.

ಖಾಸಗಿ ಸಂಸ್ಥೆಯು ಸಂಗ್ರಹಿಸುವ ವಿದ್ಯಾರ್ಥಿಗಳ ಶುಲ್ಕದ ಒಟ್ಟುಮೊತ್ತ ಭೋಧಕ ಮತ್ತು ಭೋಧಕೇರ ವರ್ಗದ ಸಿಬ್ಬಂದಿಗಳ ಸಂಬಳ ನೀಡಲು, ಶಾಲಾ ವಾಹನದ ಮೇಲೆ ಮಾಡಿರುವ ಬ್ಯಾಂಕ್ ಸಾಲದ ಇ.ಎಮ್.ಐ., ಶಾಲಾ ವಾಹನದ ನಿರ್ವಹಣೆ ಮಾಡಲು, ಸಂಸ್ಥೆ ಅಬಿವ್ರದ್ದಿ, ಸಂಸ್ಥೆಯ ಕಟ್ಟಡ, ಮೂಲಭೂತ ಸೌಕರ್ಯಕ್ಕೆ ಮಾಡಿದ ಸಾಲದ ಇ.ಎಮ್.ಐ. ಗೆ ಸಂಗ್ರಹದ ಶುಲ್ಕ ವು ಅಲ್ಪ ಪ್ರಮಾಣದಲ್ಲಿ ಸಾಗಗುತ್ತದೆ.

ಆದರೆ ಮತ್ತೆಯೂ ನಿರ್ವಹಣೆ ಮಾಡಲು ಕಷ್ಟವಾಗಿ ಖಾಸಗಿ ಶಿಕ್ಷಣ ಸಂಸ್ಥೆಯವರು ಸಾಲದ ಮೇಲೆ ಮತ್ತೆ ಸಾಲ ಮಾಡುತಾ ಬರುತ್ತಾರೆ ಇದು ರಾಜ್ಯದ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳ ವಾಸ್ತವ ಸ್ಥಿತಿ..

ಇರಲಿ ಬಿಡಿ, ಕಾಲೇಜು ಅಭಿವ್ರದ್ದಿ ಮಾಡಬೇಕು, ಸಂಸ್ಥೆಯಲ್ಲಿ ಮೂಲಭೂತ ಸೌಕರ್ಯವನ್ನು ಮಾಡಲು ಹಣದ ಸಮಸ್ಯೆ ಇದೆ ಎಂದು ರಾಷ್ಟ್ರೀಕ್ರತ ಬ್ಯಾಂಕ್ ಗಳಲ್ಲಿ ಸಾಲವನ್ನು ಕೆಳಲು ಹೋದರೆ ಸಹಜವಾಗಿ ಬ್ಯಾಂಕ್ ನ ಮುಖ್ಯ ಪ್ರಬಂಧಕರು ಹೇಳುವ ಮಾತು ಒಂದೇ” ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಕೊಡುವ ಸಾಲವು Non Secure Loan ಆಗಿರುತ್ತದೆ” ಎಂದು ಕಾರಣ ಸಾಲ ಮರು ಪಾವತಿ ಮಾಡದೇ ಇದ್ದಲ್ಲಿ ಅಥವ ವಿಫಲವಾದರೆ ಮುಟ್ಟುಗೋಲು ಹಾಕಲು ಕಷ್ಟ ಎಂಬ ಕಾರಣವಿರಬಹುದು.

ನಂತರ ಇಲ್ಲ ಸಲ್ಲದ ಕಾರಣ ಒಡ್ಡಿ ಸಾಲ ನೀಡಲು ಹಿಂದೇಟು ಹಾಕಿದರೆ ಬೇರೆ ಸೊಸೈಟಿಗಳ ಮೂಲಕ ಅಧಿಕ ಬಡ್ಡಿಗಳಲ್ಲಿ ಶಿಕ್ಷಣ ಸಂಸ್ಥೆಯನ್ನು ನಡೆಸುವ ಆಡಳಿತ ಮಂಡಳಿಗಳು ತುಂಬಾ ಇವೆ. ರಾಷ್ಟ್ರೀಕ್ರತ ಬ್ಯಾಂಕ್ ಗಳಲ್ಲಿ ಸಾಲವು ಸಿಗದೆ ಈ ರೀತಿಯಾಗಿ ಅಧಿಕ ಬಡ್ಡಿಯನ್ನು ಕಟ್ಟಿ ಹಾಗೂ ಇನ್ನಿತರ ಮೂಲಗಳಿಂದ ಹಣವನ್ನು ಪಡೆದು ಶಿಕ್ಷಣ ಸಂಸ್ಥೆಯನ್ನು ನಡೆಸುವ ಆಡಳಿತ ಮಂಡಳಿಗಳು ನಮ್ಮಲ್ಲಿದೆ.

ಆದುದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬ್ಯಾಂಕ್ ಗಳ ನೆರವು ಸಿಗುವುದು ಕಷ್ಟ, ಸರಕಾರ ದಿಂದಲೂ ಯಾವುದೇ ನೆರವು ಸಿಗುವುದಿಲ್ಲಾ, ಕೊರೊನಾ ಇದೆ ಹಣದ ಸಮಸ್ಯೆ ಇದೆ ಎಂದು ಪೋಷಕರ ಕೂಗೂ ಈ ರೀತಿಯಾಗಿ ಸಂಸ್ಥೆಯನ್ನೆ ನಂಬಿದ ಭೋಧಕ/ಭೋಧಕೇತರ ವರ್ಗದ ಜನರ ಜೀವನ ಬೀದಿಗೆ ಬಿದ್ದಂತಾಗಿದೆ.

ಬ್ಯಾಂಕ್ ನಿಂದ ಕಾಲೇಜು ಅಭಿವ್ರದ್ದಿಗೆಂದು ಬ್ಯಾಂಕ್ ಗಳಲ್ಲಿ ಮಾಡಿದ ಸಾಲದ ಬಡ್ಡಿಯನ್ನು ಪಾವತಿ ಸಲು ಅನೇಕ ಕರೆಗಳು, ಮನವಿಯೂ ಕೂಡ ಬ್ಯಾಂಕ್ ಗಳಿಂದ ಬರುತ್ತಿದೆ. ಇಂತಹ ಕಷ್ಟದ ಸಂಧರ್ಭದಲ್ಲಿ ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಯವರು ಸಂಸ್ಥೆ ಅಭಿವ್ರದ್ದಿಗೆ ಮಾಡಿರುವ ಸಾಲದ ಬಡ್ಡಿಯನ್ನಾದರೂ ಸ್ವಲ್ಪ ತಿಂಗಳ ಮಟ್ಟಿಗೆ ಕಡಿಮೆ ಅಥವಾ ಕಟ್ಟದ ಹಾಗೆ ಮಾಡಬಹುದು ಇತ್ತು ಅಲ್ಲವೆ.? ಇದನ್ನು ಸರಕಾರ ಮಾಡಲಿಲ್ಲಾ.

ಬ್ಯಾಂಕ್ ಸಾಲವನ್ನು ಪಾವತಿಸಬೇಕು ಮತ್ತು ಸಂಸ್ಥೆಯನ್ನು ಅವಲಂಬಿತರಾಗಿರುವ ಸಿಬ್ಬಂದಿಗಳ ವೇತನವನ್ನು ನೀಡಬೇಕು ಅಲ್ಲವೇ. ಅದಲ್ಲದ್ದೆ ಆನ್ ಲೈನ್ ತರಗತಿ ಪ್ರಾರಂಭಿಸಬೇಕಾದರೆ ಬಾಕಿ ಇರುವ ಶಿಕ್ಷಕ/ ಉಪನ್ಯಾಸಕರ ಬಾಕಿ ಇರುವ ವೇತನವನ್ನು ಪಾವತಿಸಬೇಕು ಅಲ್ಲವೇ. ಈ ಮೂಲ ಅಂಶಗಳನ್ನು ಎಲ್ಲರೂ ಅರಿತುಕ್ಕೊಳ್ಳುವುದು ಮುಖ್ಯ. ಎಲ್ಲೋ ಬೆರಳೆಣಿಕೆಯ ಖಾಸಗಿ ಶಿಕ್ಷಣ ಸಂಸ್ಥೆಗಳು ಸದ್ರಡವಾಗಿ ನಿಂತಿದೆ ಬಿಟ್ಟರೆ ಶೇ.90 ರಷ್ಟು ಶಿಕ್ಷಣ ಸಂಸ್ಥೆಗಳ ನಿಜಾಂಶ ಈ ರೀತಿ ಇದೆ.

ಸರಕಾರವು ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಒಂದು ದ್ರಢ ನಿರ್ದಾರವನ್ನು ತೆಗೆದು ಕ್ಕೊಳ್ಳಬೇಕು. ನಾನು ಕಳೆದ ಬಾರಿ ಸಂಭಂದ ಪಟ್ಟ ಇಲಾಖಾ ಸಚಿವರುಗಳಿಗೆ ದೂರವಾಣಿ ಮತ್ತು ಪತ್ರದ ಮೂಲಕ ಇದೇ ವಿಚಾರಕ್ಕೆ ಸಂಭಂಧಿಸಿದಂತೆ ಒಂದು ಮನವಿಯನ್ನು ಮಾಡಿದ್ದೆ.

ಸರಿ ತಮ್ಮ ಪ್ರಕಾರವೇ ವಿದ್ಯಾರ್ಥಿಗಳ ಪೋಷಕರ, ಹೆತ್ತವರ ಈ ಗಿನ ಆರ್ಥಿಕ ಪರಿಸ್ಥಿತಿ ಸದ್ರಡ ವಾಗಿಲ್ಲಾ. ನಿಜ. ದೇಶದಲ್ಲಿ ಪ್ರಸ್ತುತ ಯಾರದ್ದೂ ಆರ್ಥಿಕ ಪರಿಸ್ಥಿತಿ ಸರಿ ಇಲ್ಲಾ. ಹಾಗಾಗಿ ಕನಿಷ್ಟ ಪಕ್ಷ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳು ಯಾವ ರಾಷ್ಟ್ರೀಕ್ರತ ಬ್ಯಾಂಕ್ ಗಳಲ್ಲಿ ಖಾತೆಯನ್ನು ಹೊಂದಿರುತ್ತಾರೋ ಅದೇ ಬ್ಯಾಂಕ್ ನಲ್ಲಿ ಕನಿಷ್ಟ 10 ರಿಂದ 15 ಲಕ್ಷ ರೂಪಾಯಿ ವರೆಗೆ ಬಡ್ಡಿ ರಹಿತ ಸಾಲವನ್ನು 2 ವರ್ಷದ ಅವಧಿಗೆ ನೀಡಿದರೆ ಒಮ್ಮೆ ಬಾಕಿ ವೇತನವನ್ನು ಉಪನ್ಯಾಸಕರಿಗೆ ನೀಡಲು ಮತ್ತು ಬಾಕಿ ಸಂಸ್ಥೆಯ ಸಾಲವನ್ನು ತೀರಿಸಲು ಅನುಕೂಲಕರವಾಗುತ್ತದೆ.

ಆ ಸಂಧರ್ಭದಲ್ಲಿ ಪೋಷಕರೂ ಕೂಡ ನಿಧಾನವಾಗಿ ಸಮಯವನ್ನು ತೆಗೆದುಕೊಂಡು ಒಂದು ವರ್ಷದ ತರಗತಿ ಮುಗಿಯುವುದರ ಒಳಗಾಗಿ ಪಾವತಿಸಲು ಕನಿಷ್ಟ ಒಂದು ವರ್ಷ ಪೋಷಕರಿಗೆ ಸಿಕ್ಕಂತಾಗುತ್ತದೆ. ಇದರಿಂದ ಸಂಸ್ಥೆಗೆ, ಪೋಷಕರಿಗೆ ಮತ್ತು ವಿದ್ಯಾರ್ಥಿಗಳ ಶಿಕ್ಷಣಕ್ಕೂ ಅನುಕೂಲಕರವಾಗುತ್ತದೆ.

ಇಂತಹ ನಿರ್ದಾರವನ್ನು ಸರಕಾರವು ತೆಗೆದುಕೊಂಡು ಈ ಚರ್ಚೆಗೆ ಪೂರ್ಣ ವಿರಾಮವನ್ನು ಹಾಕುವುದು ಸೂಕ್ತ. ಇಲ್ಲದಿದ್ದರೆ ಇಂತಹ ಗೊಂದಲದಿಂದ ವಿದ್ಯಾರ್ಥಿಗಳ ಅಥವಾ ಮಕ್ಕಳ ಭವಿಷ್ಯವನ್ನು ನಾವು ಹಾಳುಮಾಡಿದಂತಾಗುತ್ತದೆ.

~ಹೆಚ್. ಆಶೀಷ್ ಶೆಟ್ಟಿ, ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ, ಶಿರ್ಡಿ ಸಾಯಿ ಶಿಕ್ಷಣ ಸಂಸ್ಥೆ
ಕಾರ್ಕಳ, ಉಡುಪಿ ಜಿಲ್ಲೆ. ದೂರವಾಣಿ:8277392576
Email ID- [email protected]

 
 
 
 
 
 
 
 
 
 
 

Leave a Reply