ತುಳುನಾಡಿನ ಸಂಸ್ಕೃತಿ ಅಧ್ಯಯನ: ಆನ್‌ಲೈನ್‌ ಕೋರ್ಸ್‌ ಉದ್ಘಾಟನೆ 

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ನ ಸೆಂಟರ್‌ ಫಾರ್‌ ಇಂಟರ್‌ಕಲ್ಚರಲ್‌ ಸ್ಟಡೀಸ್‌ ಆ್ಯಂಡ್‌ ಡಯಲಾಗ್‌ [ಸಿಎಸ್‌ಐಡಿ] ಘಟಕವು ಡಿಸರ್ನಿಂಗ್‌ ಇಂಡಿಯ : ಲಿವಿಂಗ್‌ ಕಲ್ಚರ್ಸ್‌ ಆಫ್‌ ತುಳುನಾಡು ಎಂಬ ಶೀರ್ಷಿಕೆಯಲ್ಲಿ ಆನ್‌ಲೈನ್‌ ಕೋರ್ಸ್‌ ಆರಂಭಿಸುತ್ತಿದ್ದು ಇದರ ಉದ್ಘಾಟನೆ ಆಗಸ್ಟ್‌ 18 ಗುರುವಾರ ಸಂಜೆ 4:30 ಗಂಟೆಗೆ ಮಣಿಪಾಲದ ಮಾಹೆ ಮುಖ್ಯ ಕಚೇರಿಯ ಅಂಗಣದಲ್ಲಿ ನಡೆಯಲಿದೆ. ಮಣಿಪಾಲ್‌ ಶಿಕ್ಷಣ ಮತ್ತು ವೈದ್ಯಕೀಯ ಬಳಗದ ಸಂಸ್ಥೆಗಳ (ಎಂಇಎಂಜಿ) ಅಧ್ಯಕ್ಷರಾದ ಡಾ. ರಂಜನ್‌ ಪೈಯವರು ಮಾಹೆಯ ಸಹಕುಲಾಧಿಪತಿ ಡಾ. ಎಚ್‌. ಎಸ್‌. ಬಲ್ಲಾಳ್‌, ಕುಲಪತಿಗಳಾದ ಲೆ, ಜ. [ಡಾ.] ಎಂ. ಡಿ. ವೆಂಕಟೇಶ್‌, ಕುಲಸಚಿವರಾದ ಡಾ. ನಾರಾಯಣ ಸಭಾಹಿತ್‌ ಅವರ ಉಪಸ್ಥಿತಿಯಲ್ಲಿ ಈ ಆನ್‌ಲೈನ್‌ ಕೋರ್ಸ್‌ನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಉಡುಪಿ ಜನಪದ ಬದುಕಿನ ಸಂಭ್ರಮವನ್ನು ಪ್ರತಿನಿಧಿಸುವ ಕಲೆಯಾಗಿರುವ ‘ಹುಲಿವೇಷ ಕುಣಿತ’ವನ್ನು ಸುಪ್ರಸಿದ್ಧ ಅಶೋಕ್‌ ಕಾಡುಬೆಟ್ಟು ಬಳಗದವರು ಪ್ರಸ್ತುತಿಪಡಿಸಲಿದ್ದಾರೆ.  

ಸ್ಥಳೀಯ ಸಂಸ್ಕೃತಿಯ ಅಧ್ಯಯನ: ಆನ್‌ಲೈನ್‌ ಕೋರ್ಸ್‌

ಸ್ಥಳೀಯ ಸಂಸ್ಕೃತಿಯ ಮೂಲಕ ಸಮಗ್ರ ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು ಈ ಅಭ್ಯಾಸಕ್ರಮದ ಆಶಯವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಮಣಿಪಾಲವು ತುಳು ಪರಿಸರದಲ್ಲಿ ಇರುವ ನಗರವಾಗಿದೆ. ಮಣಿಪಾಲದ ಸುತ್ತಮುತ್ತಲಿನ ಜನಪದವನ್ನು ಅರ್ಥಮಾಡಿಕೊಳ್ಳುವ ಮೂಲಕ ಇಡೀ ಭಾರತೀಯ ಸಂಸ್ಕೃತಿಯನ್ನು ಅರಿತುಕೊಳ್ಳುವ ಪ್ರಯತ್ನವಾಗಿ ಈ ಆನ್‌ಲೈನ್‌ ಕೋರ್ಸ್‌ ಮಹತ್ವ ಪಡೆಯುತ್ತದೆ, ಭಾರತೀಯತೆ ಎಂಬುದು ಸಂಸ್ಕೃತಿಯ ಸ್ಥೂಲ ರೂಪವಾದರೆ, ತುಳುಸಂಸ್ಕೃತಿಯನ್ನು ಒಳಗೊಂಡಿರುವ ಮಣಿಪಾಲದ ಪರಿಸರವು ಸಂಸ್ಕೃತಿಯ ಸೂಕ್ಷ್ಮ ರೂಪವಾಗಿದೆ, ಸಮಕಾಲೀನ ಸಂದರ್ಭದಲ್ಲಿ ತುಳು ಜನಪದರ ಜೀವನದ ಅವಿಭಾಜ್ಯ ಭಾಗಗಳಂತಿರುವ ಯಕ್ಷಗಾನ, ಭೂತಾರಾಧನೆ, ನಾಗಾರಾಧನೆ ಮತ್ತು ಕಂಬಳ ಪ್ರಕಾರಗಳನ್ನು ಈ ಆನ್‌ಲೈನ್‌ ಕೋರ್ಸ್‌ನ ಮೊದಲ ಹಂತದಲ್ಲಿ ಅಧ್ಯಯನಕ್ಕೆ ಪರಿಗಣಿಸಲಾಗಿದೆ.  

ಕಲೆಗಳ ಆರಾಧನಾತ್ಮಕ ಮತ್ತು ಮನೋರಂಜನಾತ್ಮಕ ಆಶಯಗಳ ನಡುವಿನ ಸಂಬಂಧಗಳನ್ನು ಶೈಕ್ಷಣಿಕ ನೆಲೆಯಲ್ಲಿ ವಿಶ್ಲೇಷಿಸುವ ಈ ಆನ್‌ಲೈನ್‌ ಕೋರ್ಸ್‌ನಲ್ಲಿ ಆಕರ್ಷಕವಾದ ವೀಡಿಯೋ ಸಾಕ್ಷ್ಯಚಿತ್ರಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ಹಿರಿಯ ಕಲಾವಿದರ ಅನುಭವಗಳ ದಾಖಲೆಗಳಿವೆ, ವಿಷಯತಜ್ಞರ ಉಪನ್ಯಾಸಗಳ ಸಂಗ್ರಹವಿದೆ.
 
ಪ್ರತಿವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಹುಲಿವೇಷ ಕುಣಿತದ ಪ್ರದರ್ಶನ ಏರ್ಪಡುತ್ತದೆ. ಹುಲಿವೇಷ ಕುಣಿತ ಎಂಬುದು ಉಡುಪಿ-ಮಣಿಪಾಲ ಅವಳಿನಗರಗಳಲ್ಲಿ ಜೀವನೋತ್ಸಾಹವನ್ನು ಉದ್ದೀಪಿಸುವ ಕಲೆಯಾಗಿದೆ. ಹಾಗಾಗಿಯೇ, ಉಡುಪಿಗೆ ಸನಿಹ ಇರುವ ವಿಶ್ವಖ್ಯಾತಿಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಈ ಮಣಿಪಾಲದಲ್ಲಿ ಹುಲಿವೇಷ ಕುಣಿತವನ್ನು ಆಯೋಜಿಸಲಾಗುತ್ತಿದೆ.

ಡಿಸರ್ನಿಂಗ್‌ ಇಂಡಿಯ : ಲಿವಿಂಗ್‌ ಕಲ್ಚರ್ಸ್‌ ಆಫ್‌ ತುಳುನಾಡು ಆನ್‌ಲೈನ್‌ ಕೋರ್ಸ್‌ನಲ್ಲಿ ಭಾಗವಹಿಸಲು ಇಚ್ಛಿಸುವವರು ಈ ಕೆಳಗಿನ ವಿಳಾಸದ ಮೂಲಕ ಸಂಪರ್ಕಿಸಬಹುದು.  
 

Dr Praveen Shetty
Coordinator
Centre for Intercultural Studies and Dialogue
Manipal Academy of Higher Education (MAHE)
Manipal 576104
Phone: +91 9481578358

 
 
 
 
 
 
 
 
 
 
 

Leave a Reply