ಸಿ.ಇ.ಟಿ. ಆಕಾಂಕ್ಷಿ ಗಳೇ.. ಜಾರಿ ಬೀಳುವ ಮುನ್ನ ಜಾಗೃತರಾಗಿ-ವೇಣುಗೋಪಾಲ ರಾವ್ ಎ. ಎಸ್.  

ಜಾಗತಿಕವಾಗಿ ವ್ಯಾಪಿಸಿರುವ ಕೊರೊನಾ ರೋಗವು ಸಾಮಾಜಿಕವಾಗಿ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಲವಾರು ಸ್ಥಿತ್ಯಂತರಗಳನ್ನು ತಂದೊಡ್ಡಿದೆ. ಸೂಕ್ತವಾದ ಲಸಿಕೆ ಸಿಗದೆ ಇನ್ನೂ ಕೂಡಾ ಜನರು ಸಹಜ ಜೀವನಕ್ಕೆ ಬರಲು ಪರದಾಡುತ್ತಿದ್ದಾರೆ. ಕಳೆದ ಮಾರ್ಚ್ ತಿಂಗಳಿ​ನಿಂದ ಶೈಕ್ಷಣಿಕ ಚಟುವಟಿಕೆಗಳು ಒಂದು ರೀತಿಯ ಸ್ತಬ್ಢತೆಯನ್ನು ಅನುಭವಿಸುತ್ತಿವೆ. ಬಹಳಷ್ಟು ವಿರೋಧದ ನಡುವೆಯೂ ಸಹ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಶಿಕ್ಷಣ ಆಕಾಂಕ್ಷಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿ.ಇ.ಟಿ. ಪರೀಕ್ಷೆಯನ್ನು ನಡೆಸಿ ಅದರ ಫಲಿತಾಂಶವನ್ನು ಕೂಡಾ ಪ್ರಕಟಿಸಿದೆ.

ವಾಡಿಕೆಯಂತೆ ಸಿ.ಇ.ಟಿ. ಪ್ರಕ್ರಿಯೆಗಳು ಮುಗಿದಿದ್ದರೆ ಇಷ್ಟು ಹೊತ್ತಿಗೆ ಸಿ.ಇ.ಟಿ. ಪ್ರವೇಶ ನಡೆದು, ವೃತ್ತಿಶಿಕ್ಷಣ ತರಗತಿಗಳು ಪ್ರಾರಂಭವಾಗಬೇಕಿತ್ತು. ಕೊರೊನಾ ಪ್ರಭಾವದಿಂದ ಈ ಎಲ್ಲಾ ಪ್ರಕ್ರಿಯೆಗಳು ನಿರೀಕ್ಷೆಗಿಂತಲೂ ನಿಧಾನವಾಗಿ ಸಾಗುತ್ತಿದ್ದು ವಿದ್ಯಾರ್ಥಿಗಳ ಸಹನೆಯನ್ನು ಪರೀಕ್ಷೆ ಮಾಡುವಂತಿದೆ. ಉನ್ನತ ಶಿಕ್ಷಣದ ಕನಸನ್ನು ಹೊತ್ತ ಸಾವಿರಾರು ವಿದ್ಯಾರ್ಥಿಗಳು ಸಿ.ಇ.ಟಿ. ಪ್ರಕ್ರಿಯೆಗಳಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಾ ಇರುವುದನ್ನು ನೋಡುವಾಗ ಮನಸ್ಸಿಗೆ ಖೇದವಾಗುತ್ತದೆ.

ಪರೀಕ್ಷಾ ಪ್ರಾಧಿಕಾರದಿಂದ ಸಿ.ಇ.ಟಿ. ಮೂಲಕ ಸೀಟು ಹಂಚಿಕೆ ಪ್ರಕ್ರಿಯೆಗಳ ಪ್ರಮುಖ ಘಟ್ಟವಾದ ದಾಖಲಾತಿಗಳ ಪರಿಶೀಲನೆಯು ಈ ವರ್ಷ ಕೊರೋನಾ ಕಾರಣದಿಂದ ಆನ್‌ಲೈನ್ ಮೂಲಕ ನಡೆಸಲಾಯಿತು. ಸಾಕಷ್ಟು ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ದಾಖಲಾತಿಗಳನ್ನು ಅಪ್‌ಲೋಡ್ ಮಾಡಲು ಬೇಕಾದ ಸೌಕರ್ಯಗಳು ಇರುವುದಿಲ್ಲ ಎಂಬುದನ್ನು ಮನಗಂಡ ಉಡುಪಿಯ ಶ್ರೀ ಮಧ್ವ ವಾದಿರಾಜ​ ​ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ದಾಖಲಾತಿಗಳನ್ನು ಅಪ್‌ಲೋಡ್ ಮಾಡುವ ಸೌಲಭ್ಯಗಳನ್ನು ಸೂಕ್ತ ತಾಂತ್ರಿಕ ಮಾರ್ಗದರ್ಶನದೊಂದಿಗೆ ಉಚಿತವಾಗಿ ಒದಗಿಸಲಾಗಿತ್ತು.

ಒಂದು ತಿಂಗಳಿಗೂ ಮಿಕ್ಕಿ ನಡೆದ ಈ ಪ್ರಕ್ರಿಯೆಯಲ್ಲಿ ನೂರಾರು ವಿದ್ಯಾರ್ಥಿಗಳು ತಮ್ಮ ಮೂಲ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಪ್ರವೇಶ ಪ್ರಕ್ರಿಯೆಯ ಮುಂದಿನ ಹಂತಕ್ಕೆ ಅರ್ಹತೆ ಪಡೆದಿರುತ್ತಾರೆ ಎನ್ನುವುದು ನಮಗೆ ಸಂತೃಪ್ತಿ ತಂದಿರುವ ವಿಷಯವಾಗಿದೆ. ಈ ಸಂಪೂರ್ಣ ಪ್ರಕ್ರಿಯೆಯ ಉಸ್ತುವಾರಿ ವಹಿಸಿಕೊಂಡ ನನಗೆ ಆಗಿರುವ ಕೆಲವು ಅನುಭವಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತೇನೆ.

ಘಟನೆ 1: ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಅನಕ್ಷರಸ್ಥ ಪೋಷಕರೊಬ್ಬರು ತಮ್ಮ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎನ್ನುವ ಉದ್ದೇಶದಿಂದ ಸಿ.ಇ.ಟಿ. ಪರೀಕ್ಷೆ ಬರೆಸಿರುತ್ತಾರೆ. ಸಿ.ಇ.ಟಿ. ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆ ವಿದ್ಯಾರ್ಥಿನಿಯ ಬಳಿ ಈಮೈಲ್ ವಿಳಾಸ ಕೂಡಾ ಇರುವುದಿಲ್ಲ. ಯಾವುದೋ ಸೈಬರ್ ಸೆಂಟರ್‌ನಲ್ಲಿ, ಅಲ್ಲಿನ ನಿರ್ವಾಹಕರ ಮೂಲಕ ಆ ವಿದ್ಯಾರ್ಥಿನಿಯು ಈಮೈಲ್ ವಿಳಾಸವನ್ನು ಸೃಷ್ಟಿಸಿ, ಪರೀಕ್ಷಾ ಪ್ರಾಧಿಕಾರದ ಪೋರ್ಟಲ್‌ನಲ್ಲಿ ತನ್ನ ಸಿ.ಇ.ಟಿ. ಅರ್ಜಿ ಸಲ್ಲಿಸುವಿಕೆಯನ್ನು ಪೂರ್ಣಗೊಳಿಸುತ್ತಾಳೆ.

ದಾಖಲಾತಿ ಪರಿಶೀಲನೆಯ ಸಂದರ್ಭದಲ್ಲಿ ಆ ವಿದ್ಯಾರ್ಥಿನಿಗೆ ತನ್ನ ಈಮೈಲ್ ವಿಳಾಸ, ಸಿ.ಇ.ಟಿ. ಅರ್ಜಿಯ ಸಂಖ್ಯೆ ಯಾವುದೂ ತಿಳಿದಿರುವುದಿಲ್ಲ. ಗೂಗಲ್ ನ ಸಹಾಯದಿಂದ ಆ ವಿದ್ಯಾರ್ಥಿನಿಯ ಈಮೈಲ್ ವಿಳಾಸವನ್ನು ಪತ್ತೆ ಹಚ್ಚಿ  ಹಾಗೂ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳ ಸಹಾಯದಿಂದ ಅವಳ ಲಾಗ್‌ಇನ್ ಮಾಹಿತಿಯನ್ನು ವಿದ್ಯಾರ್ಥಿನಿಯ ಸಮ್ಮುಖದಲ್ಲೇ ಪಡೆದುಕೊಂಡು ಅವಳು ಸಮರ್ಪಕವಾಗಿ ದಾಖಲೆಗಳನ್ನು ಅಪ್‌ಲೋಡ್ ಮಾಡುವಂತೆ ಸಹಕರಿಸಲಾಯಿತು.

ಘಟನೆ 2: ಹತ್ತು ವರ್ಷಗಳ ಕಾಲ ಕನ್ನಡ ಮಾಧ್ಯಮದಲ್ಲೇ ಅಧ್ಯಯನವನ್ನು ಮಾಡಿದ ವಿದ್ಯಾರ್ಥಿಯೊಬ್ಬ ಆನ್‌ಲೈನ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಪ್ಪಾಗಿ ಆಯ್ಕೆ ಮಾಡಿದ ಪ್ರಯುಕ್ತ ಆತನಿಗೆ ಕನ್ನಡ ವ್ಯಾಸಂಗ ಪ್ರಮಾಣ ಪತ್ರ ಸಲ್ಲಿಸಲು ಸಾಧ್ಯ ಆಗಲೇ ಇಲ್ಲ. ಇದರ ಪರಿಣಾಮವಾಗಿ, ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಆ ವಿದ್ಯಾರ್ಥಿಯು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಇರುವ ಮೀಸಲಾತಿ ಸೌಲಭ್ಯದಿಂದ ಹೊರಗುಳಿಯಬೇಕಾದುದು ವಿಷಾದದ ಸಂಗತಿಯಾಗಿದೆ. 

ಘಟನೆ 3: ಆರ್ಥಿಕವಾಗಿ ದುರ್ಬಲ ಕುಟುಂಬಕ್ಕೆ ಸೇರಿದ, ಪ್ರವರ್ಗ 2ಬಿ ಅಲ್ಲಿ ಅರ್ಹತೆ ಹೊಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಯೊಬ್ಬ ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಆದ ಕಣ್ತಪ್ಪಿನಿಂದ ಪ್ರವರ್ಗ 3ಬಿ ಆಯ್ಕೆ ಮಾಡಿದ್ದು, ತನ್ನ ಪ್ರವರ್ಗ 2ಬಿಗೆ ​ಸಂಬಂದಿಸಿದ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಆಗದೆ ತನ್ನ ಭವಿಷ್ಯಕ್ಕೆ ತೊಂದರೆ ಆಗಬಹುದೆಂಬ ಆತಂಕದಲ್ಲಿ ನಮ್ಮಲ್ಲಿ ಕಣ್ಣೀರು ಇಟ್ಟ ಘಟನೆ ಇಂದಿಗೂ ಕಣ್ಣ ಮುಂದೆ ಬರುತ್ತಿದೆ.

ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ, ಈ ತಪ್ಪಿನಿಂದ, ಆತನಿಗೆ ಮೀಸಲಾತಿ ಸೌಲಭ್ಯ ಮಾತ್ರ ತಪ್ಪಿ ಹೊಗಲಿದ್ದು ಸಾಮಾನ್ಯ ವಿಭಾಗದಲ್ಲಿ ಆತ ತನ್ನ ಇಚ್ಚೆಯ ಸೀಟ್ ಪಡೆಯಲು ಅರ್ಹತೆ ಹೊಂದಿರುತ್ತಾನೆ ಎಂದು ಆತನಿಗೆ ಧೈರ್ಯ ತುಂಬಿ ಕಳುಹಿಸಲಾಗಿತು.

ಘಟನೆ 4: ಗ್ರಾಮೀಣ ಭಾಗದಲ್ಲಿ ಪಿಯುಸಿ ಅಧ್ಯಯನ ನಡೆಸಿದ ದಿವ್ಯಾಂಗ ವಿದ್ಯಾರ್ಥಿನಿಯೊಬ್ಬಳು, ಸೈಬರ್ ಸೆಂಟರ್‌ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸುವಾಗ, ದಿವ್ಯಾಂಗ ವಿಭಾಗದ ಮೀಸಲಾತಿಯನ್ನು ಆಯ್ಕೆ ಮಾಡದ ಪರಿಣಾಮ, ಅದಕ್ಕೆ ​ಸಂಬಂಧಿಸಿದಂತೆ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಪರೀಕ್ಷಾ ಪ್ರಾಧಿಕಾರದ ಪೋರ್ಟಲ್‌ನಲ್ಲಿ ಅವಕಾಶವೇ ಇರಲಿಲ್ಲ.​ ಈ ವಿದ್ಯಾರ್ಥಿನಿಯ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು, ಅವಳು ಕಲಿತ ಕಾಲೇಜಿನ ಪ್ರಾಚಾರ್ಯರು ಪರೀಕ್ಷಾ ಪ್ರಾಧಿಕಾರಕ್ಕೆ, ಈ ವಿದ್ಯಾರ್ಥಿನಿಯ ಬಗ್ಗೆ ಪ್ರಸ್ತಾಪಿಸಿ ಮನವಿ ಸಲ್ಲಿಸಿದರೂ ಸಹ ಅವಳಿಗೆ ದಿವ್ಯಾಂಗ ವಿಭಾಗದ ಮೀಸಲಾತಿಗೆ ಅರ್ಹತೆ ಸಿಗಲಿಲ್ಲ. ಆ ವಿದ್ಯಾರ್ಥಿನಿಯು ಕೇವಲ ಸಾಮಾನ್ಯ ವರ್ಗದ ಸೀಟು ಹಂಚಿಕೆಗೆ ಅರ್ಹಳಾಗಿದ್ದಾಳೆ.   

ಇಂತಹ ಹಲವಾರು ಘಟನೆಗಳನ್ನು ನಾವು ನಮ್ಮ ಕಾಲೇಜಿನ ಸಹಾಯ ಕೇಂದ್ರದಲ್ಲಿ ಆನ್‌ಲೈನ್ ದಾಖಲಾತಿಗಳನ್ನು ಅಪ್‌ಲೋಡ್ ಮಾಡುವಾಗ ನೋಡಿದ್ದೇವೆ. ಪ್ರಾಯಃ ವಿದ್ಯಾರ್ಥಿಗಳಿಗೆ ಅಂತರ್ಜಾಲದ ಬಗ್ಗೆ,  ಆನ್‌ಲೈನ್ ಪ್ರಕ್ರಿಯೆಗಳ ಬಗ್ಗೆ ಸೂಕ್ತವಾಗ ಮಾಹಿತಿ ಇಲ್ಲದೇ ಅವರು ತಪ್ಪಿ ಬಿದ್ದಿರುವ ಸಾಧ್ಯತೆಗಳು ಹೆಚ್ಚು ಎನ್ನುವುದು ನಮ್ಮ ಅನಿಸಿಕೆ. ಸೂಕ್ತವಾದ ಮೂಲ ಸೌಕರ್ಯಗಳಾದ ಇಂಟರ್‌ನೆಟ್, ಪ್ರಿಂಟರ್, ​ಸ್ಕ್ಯಾನರ್ ​ಮೊದಲಾದ ಸಲಕರಣೆಗಳ ಅಲಭ್ಯತೆಯಿಂದಾಗಿ ವಿದ್ಯಾರ್ಥಿಗಳು ಸೈಬರ್ ಸೆಂಟರ್‌ಗಳನ್ನು ಆಶ್ರಯಿಸಬೇಕಾಗಿದ್ದು, ಅಲ್ಲಿ ತಿಳಿದೋ,​ ​ತಿಳಿಯದೆಯೋ ಆಗುವ ಕಣ್ತಪ್ಪಿನಿಂದ, ಅಥವಾ ಸೂಕ್ತವಾದ ಮಾಹಿತಿಯ ಕೊರತೆಯಿಂದ ವಿದ್ಯಾರ್ಥಿಗಳ ಉನ್ನತ ಅಧ್ಯಯನಕ್ಕೆ ಹೊಡೆತ ಬೀಳುತ್ತಿರುವುದು ಸತ್ಯ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸಿಇಟಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭ ಆಗುವುದರಿಂದ ವಿದ್ಯಾರ್ಥಿಗಳು ತಮ್ಮ ಅಂತಿಮ ಪರೀಕ್ಷೆಯ ಬಗ್ಗೆ ಹೆಚ್ಚು ಗಮನ ಹರಿಸಿರುವುದರಿಂದ, ಈ ಅರ್ಜಿ ಸಲ್ಲಿಸುವಲ್ಲಿ ​ತಪ್ಪುಗಳು ಆಗುವುದು ಸಹಜ. ಹಾಗಾಗಿ ಪ್ರತೀ ಪದವಿಪೂರ್ವ ಕಾಲೇಜಿನಲ್ಲಿ ಸಿಇಟಿ ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ ಮೂಲಸೌಲಭ್ಯಗಳನ್ನು ಒದಗಿಸಿ, ಪದವಿಪೂರ್ವ ವಿಭಾಗದ ಪ್ರಾಧ್ಯಾಪಕರುಗಳು ತಮ್ಮ ತಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಅರ್ಜಿ ಸಲ್ಲಿಸುವಂತೆ ಮಾಡಿದಲ್ಲಿ ಇಂತಹ ​ತಪ್ಪುಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎನ್ನುವುದು ನನ್ನ ವೈಯಕ್ತಿಕ ಅಭಿಮತ.

ನಮ್ಮ ಕಾಲೇಜಿನಲ್ಲಿ ಪ್ರತೀ ವರ್ಷ ಹೊಸ ವಿದ್ಯಾರ್ಥಿಗಳ ದಾಖಲಾತಿಯ ಸಂದರ್ಭದಲ್ಲಿ ನಾವು ನೋಡುತ್ತಿರುವ ಒಂದು ಸಾಮಾನ್ಯ ಘಟನೆ ಎಂದರೆ, ಸಿ.ಇ.ಟಿ. ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಆದ ಬಳಿಕ, ಹಲವಾರು ವಿದ್ಯಾರ್ಥಿಗಳು ಮತ್ತು ಪೋಷಕರು ನಮ್ಮ ಕಾಲೇಜಿಗೆ ಬಂದು, ಅವರಿಗೆ ನಮ್ಮ ಕಾಲೇಜಿನಲ್ಲಿ ಸಿ.ಇ.ಟಿ. ಮೂಲಕ ಸೀಟು ಸಿಗದ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಾರೆ. “ನಾವು ಆಪ್ಷನ್ ಎಂಟ್ರಿ ಸಮಯದಲ್ಲಿ ನಿಮ್ಮ ಕಾಲೇಜನ್ನೇ ಸಿ.ಇ.ಟಿ. ಪೋರ್ಟಲ್‌ನಲ್ಲಿ ಆಯ್ಕೆ ಮಾಡಿದ್ದು ಆದರೂ ನಮಗೆ ನಿಮ್ಮ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ” ಎಂದು ದುಃಖಿಸುವುದನ್ನು ನೋಡಿದ್ದೇವೆ.

ಇದರ ಬಗ್ಗೆ ಅವರ ಆಪ್ಷನ್ ಎಂಟ್ರಿಯನ್ನು ಪರಿಶೀಲಿಸಿದಾಗ, ಆಪ್ಷನ್ ಎಂಟ್ರಿಯಲ್ಲಿ ಆದ ವ್ಯತ್ಯಯದಿಂದ ಅವರಿಗೆ ಬೇಕಾದ ಕಾಲೇಜು, ಬೇಕಾದ ಕೋರ್ಸ್ನಲ್ಲಿ ಸೀಟು ಹಂಚಿಕೆ ಆಗದಿರುವುದು ನಮ್ಮ ಅರಿವಿಗೆ ಬಂತು. ಈ ಎಲ್ಲಾ ಘಟನೆಗಳನ್ನು ನಾನು ನಿಮ್ಮ ಮುಂದಿಡುವ ಉದ್ದೇಶ ಏನೆಂದರೆ, ಯಾರದ್ದೇ ತಪ್ಪು​ ಆಗಿರಲಿ , ಏನೇ ತಪ್ಪುಆಗಿರಲಿ ಅದರ ಅಂತಿಮ ಪರಿಣಾಮ ವಿದ್ಯಾರ್ಥಿಗಳ ಮೇಲೆ ಆಗುವುದಂತೂ ನಿಶ್ಚಿತ. ಆದುದರಿಂದ ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಹೆತ್ತವರು ಅಥವಾ ಪೋಷಕರು ಇದರ ಬಗ್ಗೆ ಸೂಕ್ತ ಗಮನ ಹರಿಸುವುದು ಅನಿವಾರ್ಯವಾಗಿದೆ.

ಈ ವರ್ಷದ ಸಿ.ಇ.ಟಿ. ಪ್ರಕ್ರಿಯೆಗಳ ದಾಖಲಾತಿ ಪರಿಶೀಲನೆ ಮುಗಿದಿದ್ದು ಇನ್ನು ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಕಾಲೇಜು ಮತ್ತು ಕೋರ್ಸ್ ಅನ್ನು ಅಯ್ಕೆ ಮಾಡುವ ಸಲುವಾಗಿ ಆಪ್ಷನ್ ಎಂಟ್ರಿ ಮಾಡುವ ಲಿಂಕ್ ಅನ್ನು ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಅದರ ಒಳಗಾಗಿ ವಿದ್ಯಾರ್ಥಿಗಳು ತಮ್ಮ ಸಿ.ಇ.ಟಿ. ರ‍್ಯಾಂಕ್‌ಗೆ ಅನುಗುಣವಾಗಿ ಸಾಕಷ್ಟು ಕಾಲೇಜುಗಳ ಪಟ್ಟಿ ಹಾಗೂ ತಮ್ಮ ಇಚ್ಚೆಯ ಕೋರ್ಸ್ಗಳ ಪಟ್ಟಿಯನ್ನು ತಯಾರು ಮಾಡಿಕೊಳ್ಳುವುದು ಉತ್ತಮ.

ಕಳೆದ ವರ್ಷ ಯಾವ ಕಾಲೇಜಿನಲ್ಲಿ ಯಾವ ಕೋರ್ಸ್ಗೆ ಕಟ್‌ಆಫ್ ರ‍್ಯಾಂಕ್ ಎಷ್ಟು ಇತ್ತು ಅನ್ನುವುದನ್ನು ಈ ಮುಂದಿನ ಅಂತರ್ಜಾಲ ಪುಟದಲ್ಲಿ (http://cetonline.karnataka.gov.in/cutoff2019/)​ ​ಪರೀಕ್ಷಾ ಪ್ರಾಧಿಕಾರದವರು ಪ್ರಕಟಿಸಿದ್ದಾರೆ. ಇದರಲ್ಲಿ ಆಸಕ್ತ ವಿದ್ಯಾರ್ಥಿಗಳು ತಮ್ಮ ಇಚ್ಚೆಯ ಕಾಲೇಜನ್ನು ಮತ್ತು ಕೋರ್ಸ್ಅನ್ನು ಆಯ್ಕೆ ಮಾಡಿ, ಯಾವ ವಿಭಾಗದಲ್ಲಿ ಎಷ್ಟು ಕಟ್‌​ ​ಆಫ್ ರ‍್ಯಾಂಕ್ ಇತ್ತು ಅನ್ನುವುದನ್ನು ತಿಳಿದುಕೊಳ್ಳಬಹುದು.

ಈ ಮಾಹಿತಿಯ ಮೂಲಕ ಈ ವರ್ಷ ಆ ಕಾಲೇಜಿನಲ್ಲಿ ತಮ್ಮ ರ‍್ಯಾಂಕ್‌ಗೆ ಸೀಟು ಸಿಗಬಹುದೋ ಇಲ್ಲವೋ ಎಂದು ಅಂದಾಜು ಮಾಡಬಹುದು. ಒಂದು ಉದಾಹರಣೆ ಕೊಡುವುದಾದರೆ, ವಿದ್ಯಾರ್ಥಿಯೊಬ್ಬನ ಇಂಜಿನೀಯ​ರಿಂಗ್ ರ‍್ಯಾಂಕ್ ​35218 ಆಗಿದ್ದು, ಆ ವಿದ್ಯಾರ್ಥಿಗೆ ಕಂಪ್ಯೂಟರ್ ಸೈನ್ಸ್ ಇಂಜಿನಿಯ​ರಿಂಗ್ ಮಾಡಬೇಕು ಎಂಬ ಆಪೇಕ್ಷೆ ಇದೆ ಹಾಗೂ ಆ ವಿದ್ಯಾರ್ಥಿಗೆ ಕನ್ನಡ ಮಾಧ್ಯಮ ಮೀಸಲಾತಿಯ ಅರ್ಹತೆ ಇದೆ ಎಂದು ಇಟ್ಟುಕೊಳ್ಳೊಣ.

ಈ ಮೇಲೆ ತಿಳಿಸಿದ ಅಂತರ್ಜಾಲ ಕೊಂಡಿಯ ಮೂಲಕ ವಿದ್ಯಾರ್ಥಿಯು ತನ್ನ ಇಚ್ಚೆಯ ಕಾಲೇಜನ್ನು ಆಯ್ಕೆ ಮಾಡಿ, ಕೆಟಗರಿಯಲ್ಲಿ ​GMK ಅನ್ನು ಆಯ್ಕೆ ಮಾಡಿದಾಗ ಕಳೆದ ವರ್ಷ, ಆ ಕಾಲೇಜಿನಲ್ಲಿ ಆ ಕೋರ್ಸ್ಗೆ, ಆಯ್ಕೆ ಮಾಡಿದ ಮೀಸಲಾತಿಯಡಿ ಸಿಕ್ಕಿದ್ದ ಕಟ್‌​ ​ಆಫ್ ರ‍್ಯಾಂಕ್ ಎಷ್ಟು ಎನ್ನುವುದು ತಿಳಿಯುತ್ತದೆ. ಉದಾಹರಣೆಗೆ ಆ ಕಟ್‌ಆಫ್ ರ‍್ಯಾಂಕ್ ​​​16349 ಎಂದು ತೋರಿಸಿದಲ್ಲಿ ಅದರ ಅರ್ಥ, ಕಳೆದ ವರ್ಷ ​GMK ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್ಗೆ  16349 ಕಟ್‌ಆಫ್ ಆಗಿತ್ತು.

ಈ ವಿದ್ಯಾರ್ಥಿಯ ರ‍್ಯಾಂಕ್ ಕಳೆದ ವರ್ಷದ ಕಟ್‌ಆಫ್ ರ‍್ಯಾಂಕ್‌​ಗಿಂತ ಬಹಳ ಹೆಚ್ಚಾಗಿರುವ ಕಾರಣ, ಈ ವರ್ಷ ಆ ಕಾಲೇಜಿನಲ್ಲಿ ​GMK ವಿಭಾಗದಲ್ಲಿ ಸೀಟು ಸಿಗುವ ಸಂಭವ ಬಹಳ ಕಡಿಮೆ ಎಂದು ಅರ್ಥೈಸಿಕೊಳ್ಳಬಹುದು. ಇದೇ ರೀತಿ ವಿವಿಧ ಕಾಲೇಜುಗಳ, ವಿವಿಧ ಮೀಸಲಾತಿ ವಿಭಾಗದಲ್ಲಿ ತನ್ನ ಇಚ್ಚೆಯ ​ಕೋರ್ಸ್ ಗೆ ​ಸಂಬಂದಿಸಿದ ಕಟ್‌ಆಫ್ ರ‍್ಯಾಂಕ್‌ಗಳನ್ನು ಪರಿಶೀಲಿಸಿದಾಗ ತನ್ನ ರ‍್ಯಾಂಕ್‌ಗೆ ಯಾವ ಕಾಲೇಜಿನಲ್ಲಿ ಸೀಟು ಸಿಗಬಹುದು ಎನ್ನುವ ಬಗ್ಗೆ ​ಊಹೆ ಮಾಡಬಹುದು. ತನ್ಮೂಲಕ ತನ್ನ ರ‍್ಯಾಂಕ್‌ಗೆ ಅನುಗುಣವಾಗಿ ಸೀಟು ಸಿಗಬಹುದಾದ ಕಾಲೇಜುಗಳನ್ನು ಮತ್ತು ಕೋರ್ಸ್ ಅನ್ನು ಮಾತ್ರ ಆಪ್ಷನ್ ಎಂಟ್ರಿ ಕಾಲದಲ್ಲಿ ಕೊಡಬಹುದು.

ಇನ್ನೊಂದು ಗಮನದಲ್ಲಿ ಇರಿಸಬೇಕಾದ ವಿಚಾರ ಎಂದರೆ, ಆಪ್ಷನ್ ಕೊಡುವಾಗ ನಾವು ಅನುಸರಿಸುವ ಕ್ರಮಾಂಕವೂ ಸಹ ಅತಿ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಕೊಡುವ ಆಪ್ಷನ್‌ಗಳು ಅವುಗಳ ​ಪ್ರಾಶಸ್ತ್ಯವನ್ನು  ಕೂಡಾ ಪ್ರತಿನಿಧಿಸುತ್ತವೆ. ಉದಾಹರಣೆಗೆ ವಿದ್ಯಾರ್ಥಿಯೊಬ್ಬ ಕಂಪ್ಯೂಟರ್ ಸೈನ್ಸ್ ಇಂಜಿನೀಯ​ರಿಂಗ್ ಕೋರ್ಸ್ ಅನ್ನು ಆಯ್ಕೆ ಮಾಡಲು ಕಾಲೇಜು ಎ, ಬಿ ಮತ್ತು ಸಿ ಗಳನ್ನು ಆಯ್ಕೆ ಮಾಡಲು ಬಯಸಿದಲ್ಲಿ, ಪ್ರಥಮ ಆಪ್ಷನ್ ಆಗಿ ಕಾಲೇಜು ಬಿ ಅನ್ನು ಆಯ್ಕೆ ಮಾಡಿ, ಕಾಲೇಜು ಎ ಮತ್ತು ಸಿ ಗಳನ್ನು ಎರಡನೇ ಮತ್ತು ಮೂರನೇ ಆಪ್ಷನ್ ಆಗಿ ಕೊಟ್ಟಿದ್ದಲ್ಲಿ, ಇದರ ತಾತ್ಪರ್ಯ, ಆ ವಿದ್ಯಾರ್ಥಿಗೆ ಕಾಲೇಜು ಬಿ ಪ್ರಥಮ ​ಪ್ರಾಶಸ್ತ್ಯ ಆಗಿದ್ದು ಎ ಮತ್ತು ಸಿ ಗಳು ಎರಡನೇ ಮತ್ತು ಮೂರನೇ ಪ್ರಾಶಸ್ತ​ವ್ಯನ್ನು ಪಡೆದಿರುತ್ತವೆ.

ವಿದ್ಯಾರ್ಥಿಯ ರ‍್ಯಾಂಕ್‌ಗೆ ಮತ್ತು ಅರ್ಹ ಮೀಸಲಾತಿಗೆ ಅನುಗುಣವಾಗಿ ತಾನು ಬಯಸಿದ ಕೋರ್ಸ್, ಪ್ರಥಮ ​ಪ್ರಾಶಸ್ತ್ಯದ ಕಾಲೇಜು ಬಿ ಯಲ್ಲಿ ಸಿಗದಿದ್ದರೆ ಮುಂದಿನ  ಪ್ರಾಶಸ್ತ್ಯವನ್ನುವಾದ ಕಾಲೇಜು ಎ ಅಲ್ಲೂ ಸಿಗದಿದ್ದರೆ ಕಾಲೇಜು ಸಿ ಯಲ್ಲಿ ಹಂಚಿಕೆಯಾಗುತ್ತದೆ. ​​ಒಂದೊಮ್ಮೊ, ವಿದ್ಯಾರ್ಥಿ ಸಲ್ಲಿಸಿದ ಆಪ್ಷನ್‌ಗಳಲ್ಲಿ ಯಾವುದೇ ಕಾಲೇಜುಗಳಲ್ಲಿ ಅವನ ರ‍್ಯಾಂಕ್‌ಗೆ ಅನುಗುಣವಾಗಿ ಸೀಟು ಲಭ್ಯವಿಲ್ಲದಿದ್ದರೆ ಅಂತಹ ವಿದ್ಯಾರ್ಥಿಗೆ ಯಾವುದೇ ಸೀಟು ಹಂಚಿಕೆ ಆಗುವುದಿಲ್ಲ.

ಹಾಗಾಗಿ, ವಿದ್ಯಾರ್ಥಿಗಳು ಆಪ್ಷನ್ ಎಂಟ್ರಿ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಿ, ತಾನು ಬಯಸುವ ಕಾಲೇಜು​ ​/ಕೋರ್ಸ್ಗಳನ್ನು ತನ್ನ ​ಪ್ರಾಶಸ್ತ್ಯಕ್ಕೆ  ಅನುಗುಣವಾಗಿ ಪರೀಕ್ಷಾ ಪ್ರಾಧಿಕಾರದ ವೆಬ್ ಪೋರ್ಟಲ್‌ನಲ್ಲಿ ಸಲ್ಲಿಸಬೇಕಾಗುತ್ತದೆ.  ಇಷ್ಟು ಪೂರ್ವ ತಯಾರಿ ಮಾಡದೇ, ಯಾರೋ ಹೇಳಿದ ಮಾತನ್ನು ಕೇಳಿ ಅಥವಾ ಯಾರಿಗೋ ಆಪ್ಷನ್ ಎಂಟ್ರಿ ಮಾಡಲು ಕೊಟ್ಟರೆ, ಅವರು ಈ ಎಲ್ಲಾ ಮಾಹಿತಿಯನ್ನು ಅವಲೋಕನ ಮಾಡದೆ, ತಮಗೆ ಗೊತ್ತಿರುವ ಕೆಲವೇ ಕೆಲವು ಕಾಲೇಜುಗಳಲ್ಲಿ ಒಂದಷ್ಟು ಆಪ್ಷನ್‌ಗಳನ್ನು ಕೊಟ್ಟು ಅರ್ಹ ವಿದ್ಯಾರ್ಥಿಗಳಿಗೆ ಸೂಕ್ತವಾದ ಕಾಲೇಜಿನಲ್ಲಿ ಸೀಟು ಸಿಗದೇ ಹೊಗಬಹುದು.

ಇದರಿಂದ ಯಾರದೋ ಅರಿವಿನ ಕೊರತೆಯಿಂದ ಆದ ಪ್ರಮಾದದ ಫಲವಾಗಿ ವಿದ್ಯಾರ್ಥಿಗಳಿಗೆ ಹಂಚಿಕೆಯಾದ ಕಾಲೇಜು ಅಥವಾ ಕೋರ್ಸ್ ಇಷ್ಟವಾಗದೇ ಹೋಗಬಹುದು ಅಥವಾ ಸೂಕ್ತ ಅರ್ಹತೆ ಇದ್ದರೂ ಆ ವಿದ್ಯಾರ್ಥಿಗೆ ಅದಕ್ಕೆ ಅನುಗುಣವಾದ ಕಾಲೇಜು ಸಿಗದೇ ಹೋಗಬಹುದು. ಇದರಿಂದ ಆಗಬಹುದಾದ ದೂರಗಾಮೀ ಪರಿಣಾಮಗಳು ವಿದ್ಯಾರ್ಥಿಗಳಲ್ಲಿ ಭ್ರಮನಿರಸನ, ಕಲಿಕೆಯಲ್ಲಿ ಅನಾಸಕ್ತಿ ಮೊದಲಾದ ಸಮಸ್ಯೆಗಳಿಗೆ ಕಾರಣವಾಗುವುದನ್ನು ನಾವು ನೋಡಿದ್ದೇವೆ. ಸೀಟು ಹಂಚಿಕೆ ನಮಗೆ ಬೇಕಾದ ರೀತಿ ಆಗದೇ ಇದ್ದಾಗ, ​ತಪ್ಪು ಅವರಿಂದ ಆಯಿತು​,​ ಇವರಿಂದ ಆಯಿತು ಎಂದು ಇನ್ನೊಬ್ಬರ ಕಡೆಗೆ ಬೆರಳು ತೋರಿಸುವುದರಿಂದ ಆಗಿರುವ ತಪ್ಪನ್ನು ಸರಿ ಮಾಡಲು ಸಾಧ್ಯವಿಲ್ಲ.

ಸಿ.ಇ.ಟಿ. ಪ್ರಕ್ರಿಯೆಯಲ್ಲಿ ಸೀಟು ಹಂಚಿಕೆ ಆದ ಬಳಿಕ ವಿದ್ಯಾರ್ಥಿಗಳಿಗೆ ಇರುವುದು ಎರಡೇ ಆಯ್ಕೆ. ಒಂದು ಹಂಚಿಕೆ ಆದ ಕಾಲೇಜಿಗೆ ಹೋಗಿ ಪ್ರವೇಶ ಪ್ರಕ್ರಿಯೆಯನ್ನು ಪೂರೈಸುವುದು ಅಥವಾ ಸೀಟು ಇಷ್ಟ ಇಲ್ಲವಾದರೆ ಸಿ.ಇ.ಟಿ. ಪ್ರಕ್ರಿಯೆಯಿಂದ ಹೊರಬರುವುದು. ತನ್ನ ಇಷ್ಟದ ಕಾಲೇಜು/​ ​ಕೋರ್ಸ್ ಗೆ ಪ್ರವೇಶ ಸಿಗದೇ ಇದ್ದಲ್ಲಿ ಇವೆರಡೂ ಆಯ್ಕೆಗಳೂ ಕೂಡಾ ವಿದ್ಯಾರ್ಥಿಗಳಿಗೆ ನೋವನ್ನು ತರುವುದು ನಿಶ್ಚಿತ. 

Prevention is better than cure ಎಂಬ ನಾಣ್ಣುಡಿಯಂತೆ, ಒಂದು ಸಣ್ಣ ಅಜಾಗ್ರತೆಯ ನಡೆಯಿಂದ ಆಗಬಹುದಾದ ಪರಿಣಾಮದ ಬಗ್ಗೆ ಸ್ಪಷ್ಟ ಅರಿವು ಹೊಂದಿ ನಮ್ಮ ಮನೆಯ ಮಕ್ಕಳು, ಅಥವಾ ನಮ್ಮ ಪರಿಚಯಸ್ಥರ ಮನೆಯ ಮಕ್ಕಳಿಗೆ ಸಿ.ಇ.ಟಿ. ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಇದ್ದರೆ ಅವರಿಗೆ ಈ ಬಗ್ಗೆ ಸೂಕ್ತ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರೂ ತಪ್ಪಾಗಲಾರದು.

ಇನ್ನೇನು ಕೆಲವೇ ದಿನಗಳಲ್ಲಿ ಆಪ್ಷನ್ ಎಂಟ್ರಿ ಪ್ರಕ್ರಿಯೆಗೆ ಲಿಂಕ್ ಅನ್ನು ಪರೀಕ್ಷಾ ಪ್ರಾಧಿಕಾರವು ಬಿಡುಗಡೆ ಮಾಡುವ ನಿರೀಕ್ಷೆ ಇದ್ದು​ ​(ವಿದ್ಯಾರ್ಥಿಗಳು ಪ್ರತೀ ದಿನ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ ಅನ್ನು ನೋಡುವುದು ಅಪೇಕ್ಷಣೀಯ), ವಿದ್ಯಾರ್ಥಿಗಳು/ ಪೋಷಕರು ಈ ಮೇಲಿನ ಎಲ್ಲಾ ವಿಚಾರಗಳನ್ನು ಗಮನದಲ್ಲಿ ಇರಿಸಿಕೊಂಡು ಅವರವರ ರ‍್ಯಾಂಕ್‌ಗೆ ಅನುಗುಣವಾಗಿ ಅವರವರ ಆಯ್ಕೆಯ ಕಾಲೇಜು/​ ​ಕೋರ್ಸ್ ಅನ್ನು ಪಡೆಯುವಂತಾಗಲಿ. ತನ್ಮೂಲಕ ಆ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಹಾಗೂ ಸಿಇಟಿ ಪರೀಕ್ಷೆಗಳಲ್ಲಿ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅಂಕಗಳನ್ನು ಪಡೆಯಲು ಪಟ್ಟ ಪರಿಶ್ರಮ ವ್ಯರ್ಥವಾಗದೇ ಇರಲಿ ಎಂದು ಆಶಿಸೋಣ.

, [email protected]

 
 
 
 
 
 
 
 
 
 
 

Leave a Reply