Janardhan Kodavoor/ Team KaravaliXpress
31.6 C
Udupi
Tuesday, May 24, 2022
Sathyanatha Stores Brahmavara

ಸುಮನಸಾ ಕೊಡವೂರು ~ಬಹುಭಾಷಾ ನಾಟಕೋತ್ಸವ

ಉಡುಪಿ: ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಒಂದಾದ ಯುವಕರು ಕಟ್ಟಿದ ಸಂಸ್ಥೆ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆ. ಹೀಗೆ ಎರಡು ದಶಕಗಳ ಹಿಂದೆ ಹುಟ್ಟಿದ ಸಂಸ್ಥೆ ನಿರಂತರವಾಗಿ ರಂಗಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬಂದಿತ್ತು. ಸಂಸ್ಥೆಗೆ 10 ವರ್ಷ ತುಂಬಿದಾಗ ರಂಗ ಹಬ್ಬ ಆರಂಭಿಸಿತ್ತು. ಇದೀಗ ಸಂಸ್ಥೆಗೆ 20 ವರ್ಷ, ರಂಗಹಬ್ಬಕ್ಕೆ 10 ವರ್ಷ ತುಂಬಿದ ಪ್ರಯುಕ್ತ ರಾಷ್ಟ್ರೀಯ ರಂಗಹಬ್ಬ, ಬಹುಭಾಷಾ ನಾಟಕೋತ್ಸವ ಮಾಡುತ್ತಿದೆ. ಮಾರ್ಚ್ 20ರಿಂದ 29ರವರೆಗೆ ಈ ಕಾರ್ಯಕ್ರಮ ಅಜ್ಜರಕಾಡು ಬಯಲು ರಂಗಮಂದಿರದಲ್ಲಿ ನಡೆಯಲಿದೆ.

ಸಂಸ್ಥೆಯ ಬಗ್ಗೆ ಒಂದಿಷ್ಟು: ಸುಮನಸಾ ಕೊಡವೂರು, ಉಡುಪಿ ಸಾಂಸ್ಕೃತಿಕ ಸಂಘಟನೆ… ಈ ಹೆಸರು ಕೇಳಿದಾಕ್ಷಣ ಹೊರಜಗತ್ತಿಗೆ ತಕ್ಷಣಕ್ಕೆ ನಾಟಕಗಳು ನೆನಪಿಗೆ ಬರುತ್ತವೆ. ನಾವು ಸಂಘಟಿಸಿಕೊ೦ಡು ಬಂದಿರುವ ರಂಗಹಬ್ಬ ನೆನಪಿಗೆ ಬರುತ್ತದೆ. ಅದು ಸಹಜ ಕೂಡ. ಆದರೆ ಸುಮನಸಾ ಕೊಡವೂರು ಎಂಬ ಸಂಸ್ಥೆಯ ಹುಟ್ಟು ಈ ಕಾರಣಕ್ಕೆ ಆಗಿರಲಿಲ್ಲ ಎಂದರೆ ಎಲ್ಲರಿಗೂ ಅಚ್ಚರಿ ಆದೀತು.

20 ವರ್ಷಗಳ ಕೆಳಗೆ ಕೊಡವೂರು ಪರಿಸರದಲ್ಲಿ ಒಂದು ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿತ್ತು. ಇದರಿಂದ ಆ ಬಡ ಕುಟುಂಬದ ಬದುಕಿಗೇ ಬೆಂಕಿ ಬಿದ್ದಂತಾಗಿತ್ತು. ದಿಕ್ಕು ತೋಚದೇ ಬೀದಿಗೆ ಬೀಳುವ ಪರಿಸ್ಥಿತಿಯನ್ನು ಆ ಕುಟುಂಬ ಎದುರಿಸಿತ್ತು. ಈ ಕುಟುಂಬಕ್ಕೆ ಏನಾದರೂ ಸಹಾಯ ಮಾಡಬೇಕಲ್ಲ ಎಂದು ಯೋಚಿಸಿ ನಾವೊಂದಷ್ಟು ಮಂದಿ ಯೋಚಿಸಿದೆವು. ಯೋಚನೆಗೆ ಸೀಮತರಾಗದೇ ನೆರವಿನ ಮೂಲಕ ಶ್ರಮದಾನದ ಮೂಲಕ ಮನೆ ಕಟ್ಟಿ ಕೊಟ್ಟೆವು. ಆ ಮನೆಗೆ ಸುಮನಸಾ ಎಂದು ಹೆಸರಿಟ್ಟೆವು. ಈ ರೀತಿ ಒಂದಾದ ಸುಮನಸ್ಸಿಗರಿಗೆ ಸುಮನಸಾ ಎಂದೇ ಹೆಸರಾಯಿತು. ಹೀಗೆ ಹುಟ್ಟಿಕೊಂಡ ಸಂಸ್ಥೆ ನಮ್ಮದು.

ಸಂಕಷ್ಟದಲ್ಲಿರುವವರಿಗೆ, ಸಹಾಯ ಅಗತ್ಯ ಇರುವವರಿಗೆ ಕೈಲಾದ ನೆರವು ನೀಡಲು ಸದಾ ಸಿದ್ಧ ಇದ್ದ ನಮ್ಮ ತಂಡ ಅಷ್ಟಕ್ಕೆ ಸೀಮಿತವಾಗಬಾರದು, ನಿರಂತರ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಾವು ನಿರ್ಧರಿಸಿದೆವು. ಸುಮನಸಾ ತಂಡವು ಒಂದು ಸಂಘವಾಗಿ ಇರಬೇಕಿದ್ದರೆ ಹೇಗಿರಬೇಕು ಎಂದು ಚರ್ಚೆಗಳಾದವು. ನಮ್ಮ ತಂಡದಲ್ಲಿ ಇದ್ದ ಎಲ್ಲರೂ ಸಂಘಟನೆಯನ್ನು ಮುನ್ನಡೆಸಬಲ್ಲವರೇ ಆಗಿದ್ದರು. ಆದರೂ ಶಿಷ್ಟಾಚಾರದ ಪ್ರಕಾರ ಒಬ್ಬರನ್ನು ಅಧ್ಯಕ್ಷರನ್ನಾಗಿ, ಒಬ್ಬರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ, ಉಳಿದ ಪದಾಧಿಕಾರಿಗಳ ಆಯ್ಕೆಯೂ ನಿಯಮಬದದ್ಧವಾಗಿ ನಡೆಸಲಾಯಿತು.


2002ರಲ್ಲಿ ಉಡಲ್ದ ಬರ್ಸ ಎಂಬ ತುಳು ನಾಟಕ ಮಾಡುವ ಮೂಲಕ ಮೊದಲ ರಂಗಪ್ರಯೋಗ ನಡೆಸಿದೆವು. ಹೀಗೆ ಆರಂಭಗೊ೦ಡ ಪಯಣ ಮತ್ತೆಂದಿಗೂ ನಿಂತಿಲ್ಲ. ಪ್ರತಿ ವರ್ಷ ಕನಿಷ್ಠ ಮೂರು ರಂಗಪ್ರಯೋಗಗಳನ್ನು ಸುಮನಸಾ ಸಂಸ್ಥೆಯ ಮೂಲಕ ಮಾಡುತ್ತಾ ಬಂದಿದೆ. 2002ರಲ್ಲಿ ಯಕ್ಷಗಾನ ಪ್ರಸಂಗವನ್ನು ಕೂಡ ಆಡಲು ಆರಂಭಿಸಿದೆವು. ನಾಟಕಗಳ ಜತೆಗೆ ಈ ಯಕ್ಷಗಾನದ ನಂಟು ಇಂದಿಗೂ ಮುಂದುವರಿದಿದೆ. 22ತುಳು ನಾಟಕಗಳು, 26 ಕನ್ನಡ ನಾಟಕಗಳು, 12
 ಯಕ್ಷಪ್ರಸಂಗಗಳು ಇವಲ್ಲದೇ ಟೆಲಿಚಿತ್ರಗಳು, ಯೂಟ್ಯೂಬ್ ಚಿತ್ರಗಳು ಹೀಗೆ ಅನೇಕ ಪ್ರಯೋಗಗಳನ್ನು ಸುಮನಸಾ ಮಾಡಿಕೊಂಡು ಬಂದಿದೆ.

ಉಡುಪಿ ಸಹಿತ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ತುಳು, ಕನ್ನಡ ನಾಟಕ ಸ್ಪರ್ಧೆಗಳಲ್ಲಿ ಸುಮನಸಾ ನಿರಂತರವಾಗಿ ಭಾಗವಹಿಸುತ್ತಾ ಬಂದಿದೆ. ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಜಿಲ್ಲಾ ರಾಜ್ಯೋತ್ಸವ, ಸಿಜಿಕೆ ರಂಗ ಪುರಸ್ಕಾರ ಸಹಿತ ಹಲವು ಪುರಸ್ಕಾರ, ಪ್ರಶಸ್ತಿಗಳು ನಮ್ಮ ಸಂಸ್ಥೆಗೆ ಸಂದಿರುವುದು ಸುಮನಸಾದ ಕೀರ್ತಿಯನ್ನು ಹೆಚ್ಚಿಸಿದೆ.

ಸುಮನಸಾ ಸಾಂಸ್ಕೃತಿಕ ಸಂಘಟನೆಗೆ 10ವರ್ಷ ತುಂಬಿದಾಗ ಅದನ್ನು ವಿಶಿಷ್ಟವಾಗಿ ಆಚರಿಸಬೇಕು ಎಂದು ಚಿಂತನೆ ನಡೆಸಿದೆವು. ಆ ವರ್ಷ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಆಗ ರಂಗಹಬ್ಬ ಎಂಬ ಪರಿಕಲ್ಪನೆ ಹುಟ್ಟಿಕೊಂಡಿತು. ನಮ್ಮ ಸುತ್ತಮುತ್ತ ತಂಡಗಳಿಗೆ ಅವಕಾಶ ನೀಡುವ, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ನಾಟಕ ತಂಡಗಳನ್ನು ಆಹ್ವಾನಿಸಿ ನಾಟಕ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಯೋಜನೆ ಈ ಮೂಲಕ ಸಾಕಾರಗೊಂಡಿತು. ಬೇರೆ ಬೇರೆ ರಾಜ್ಯಗಳ ರಂಗತ೦ಡಗಳನ್ನು ಆಹ್ವಾನಿಸಿ ನಾಟಕ ಆಡಿಸುವ ಮೂಲಕ ಬೇರೆ ಭಾಷೆ, ಬೇರೆ ನೆಲದ ರಂಗಪರಿಕಲ್ಪನೆಗಳನ್ನು ಉಡುಪಿಗೆ ಪರಿಚಯಿಸಿದ ಕೀರ್ತೀ ಕೂಡ ನಮ್ಮ ಸುಮನಸಾಕ್ಕೆ ಸಲ್ಲುತ್ತದೆ.

ಈ ರೀತಿ ವರ್ಷಕ್ಕೊಮ್ಮೆ ರಂಗಹಬ್ಬ ಮಾಡಲು ಆರಂಭಿಸಿ 10 ವರ್ಷಗಳಾದವು. ಈ ಸವಿನೆನಪು ಶಾಶ್ವತ ಆಗಬೇಕು ಎಂಬ ಕಾರಣಕ್ಕಾಗಿಯೇ ರಾಷ್ಟ್ರೀಯ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಜತೆಗೆ 20 ವರ್ಷಗಳ ಕಾಲ ಸುಮನಸಾ ನಡೆದು ಬಂದ ಹಾದಿಯನ್ನು ನೆನಪಿಸಿಕೊಳ್ಳಬೇಕು, ಮೆಲುಕು ಹಾಕಿಕೊಳ್ಳಬೇಕು, ಮುಂದಿನ ಹಾದಿಗೆ ಬೆಳಕಾಗಬೇಕು ಎಂಬ ಕಾರಣಕ್ಕೆ ಸ್ಮರಣ ಸಂಚಿಕೆಯನ್ನು ಹೊರತರಲು ನಿರ್ಧರಿಸಲಾಗಿದೆ.

ಈ ಎಲ್ಲ ನೆನಪುಗಳಲ್ಲಿ ಈ ಬಾರಿ ರಾಷ್ಟ್ರೀಯ ರಂಗೋತ್ಸವ ಹಮ್ಮಿಕೊಳ್ಳಲಾಗಿದೆ. ಕನ್ನಡ, ತುಳು, ಮಲಯಾಳಂ, ಬೋಂದೆಲಿ, ಹಿಂದಿ, ಇಂಗ್ಲಿಷ್, ಕೊಂಕಣಿ ಭಾಷೆಗಳ ನಾಟಕಗಳು ಪ್ರದರ್ಶನಗೊಳ್ಳಲಿವೆ. ಪ್ರತಿದಿನ ರಂಗ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ನಡೆಯಲಿದೆ.

ಮಾರ್ಚ್ 20ರಿಂದ 29ರವರೆಗಿನ ಸನ್ಮಾನಿತರು ಮತ್ತು ಅಂದು ಪ್ರದರ್ಶನಗೊಳ್ಳುವ ನಾಟಕಗಳ ವಿವರ ನೀಡಲಾಗಿದೆ.

ದಿನಾಂಕ : ಮಾರ್ಚ್ 20, ಸನ್ಮಾನ : ರಾಜ್‌ಗೋಪಾಲ್ ಶೇಟ್, ನಾಟಕ : ವಿಶಾಂಕೇ (ಕನ್ನಡ), ತಂಡ : ರಂಗಭೂಮಿ (ರಿ.) ಉಡುಪಿ

ದಿನಾಂಕ : ಮಾರ್ಚ್ 21, ಸನ್ಮಾನ : ಸುಹೇಲ್ ಉಡುಪಿ, ನಾಟಕ : ಭೂಮಿ (ಇಂಗ್ಲೀಷ್), ತ೦ಡ : ಆದಿಶಕ್ತಿ ಥಿಯೇರ‍್ಸ್, ತಮಿಳುನಾಡು

ದಿನಾಂಕ : ಮಾರ್ಚ್ 22, ಸನ್ಮಾನ : ಸದಾಶಿವ ಕೋಟ್ಯಾನ್ ಕೆಮ್ಮಣ್ಣು, ನಾಟಕ : ವಾಹ್‌ತಾಜ್ (ಕನ್ನಡ), ತಂಡ : ಸುಮನಸಾ ಕೊಡವೂರು

ದಿನಾಂಕ : ಮಾರ್ಚ್ 23, ಸನ್ಮಾನ : ಸ್ಟ್ಯಾನಿ ಪಾಯಸ್ ಬಾರ್ಕೂರು, ನಾಟಕ : ಮಿತ್ರಾಂಚಿ ಕಣಿ (ಕೊಂಕಣಿ), ತ೦ಡ : ರುದ್ರೇಶ್ವರ್, ಪಣಜಿ, ಗೋವಾ

ದಿನಾಂಕ : ಮಾರ್ಚ್ 24, ಸನ್ಮಾನ : ಶೇಖರ್ ಶೆಟ್ಟಿಗಾರ್ ಅಂಬಲಪಾಡಿ, ನಾಟಕ : ಅಗ್ನಿ ಔರ್ ಬರ್ಕಾ (ಹಿಂದಿ), ತ೦ಡ : ಸಮಾಗಮ್ ರಂಗ ಮಂಡಲ್ ಮಧ್ಯಪ್ರದೇಶ

ದಿನಾಂಕ : ಮಾರ್ಚ್ 25, ಸನ್ಮಾನ : ಸುಗಂಧಿ ಉಮೇಶ್, ನಾಟಕ : ಅಗರಬತ್ತಿ (ಬೋಂದೆಲಿ), ತ೦ಡ : ಸಮಾಗಮ್ ರಂಗ ಮಂಡಲ್ ಮಧ್ಯಪ್ರದೇಶ


ದಿನಾಂಕ : ಮಾರ್ಚ್ 26, ಸನ್ಮಾನ : ರವೀಂದ್ರ ಭಟ್ ಹಂದಾಡಿ, ಯಕ್ಷಗಾನ : ಶ್ವೇತಕುಮಾರ ಚರಿತ್ರೆ (ಕನ್ನಡ), ತಂಡ : ಸುಮನಸಾ ಕೊಡವೂರು

ದಿನಾಂಕ : ಮಾರ್ಚ್ 27, ಸನ್ಮಾನ : ಭರತ್ ಕುಮಾರ್ ಪೊಲಿಪು, ನಾಟಕ : ಆಟಿತಿಂಗೊಳ್ದ ಒಂಜಿ ದಿನ (ತುಳು), ತಂಡ : ಕರ್ನಾಟಕ ಸಂಘ, ಮುಂಬೈ

ದಿನಾAಕ : ಮಾರ್ಚ್ 28, ಸನ್ಮಾನ : ಸಖಾರಾಮ್ ಹಾವಂಜೆ, ನಾಟಕ : ಆರದಿರಲಿ ಬೆಳಕು (ಕನ್ನಡ), ತಂಡ : ಭೂಮಿಕಾ(ರಿ.), ಹಾರಾಡಿ

ದಿನಾಂಕ : ಮಾರ್ಚ್ 29, “ಯಕ್ಷಸುಮ” ಪ್ರಶಸ್ತಿ ಪುರಸ್ಕೃತರು : ಕೃಷ್ಣಮೂರ್ತಿ ಭಟ್ ಬಗ್ವಾಡಿ, ನಾಟಕ : ಚಕ್ಕ (ಮಲಯಾಳಂ), ತ೦ಡ : ತ್ರಿಶೂರ್ ನಾಟಕ್ ಸಂಘ, ಕೇರಳ

ಒಂದು ಸಂಸ್ಥೆ 20 ವರ್ಷಗಳು ಸಾಗಿ ಬರುವುದು ಸುಲಭದ ಮಾತಲ್ಲ. ಸುಮನಸಾ ಸಂಸ್ಥೆ 20 ವರ್ಷಗಳ ಕಾಲ ನಿರಂತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಈ ಸಾಧನೆಗೆ ಜಿಲ್ಲಾ ರಾಜ್ಯೋತ್ಸವ ಸಹಿತ ಹಲವು ಪ್ರಶಸ್ತಿಗಳು ಸಂದಿವೆ. ಸಂಸ್ಥೆಯು ಈ ಬಾರಿ ವಿಭಿನ್ನ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವುದರಿಂದ ಈ ಬಗ್ಗೆ ವಿಶೇಷ ವರದಿಗಳನ್ನು ಪ್ರಕಟಿಸಬೇಕಾಗಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತಿದ್ದೇವೆ.

ಪ್ರಕಾಶ್ ಕೊಡವೂರು, ಅಧ್ಯಕ್ಷರು, ಮಾಹಿತಿಗಾಗಿ: (98800 58665) ಇಲ್ಲವೇ ಪ್ರವೀಣ್ ಕೊಡವೂರು (96114 96267)  ಅವರನ್ನು ಸಂಪರ್ಕಿಸಿ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!