ಎಸ್.ಡಿ.ಎಮ್‌ನಲ್ಲಿ 23ನೇ ಶಿಷ್ಯೋಪನಯನ ಸಮಾರಂಭ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ 23ನೇ ಶಿಷ್ಯೋಪನಯನ ಸಮಾರಂಭವು ಪ್ರಾತಃ ಕಾಲದ ಸಮಯದಲ್ಲಿ ನಡೆದ ಧನ್ವಂತರಿ ಹೋಮದೊಂದಿಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಸಮಕ್ಷಮದಲ್ಲಿ ನೆರವೇರಿತು. ತದನಂತರದ ಸಭಾ ಕಾರ್ಯಕ್ರಮವು ವಿದ್ಯಾರ್ಥಿಗಳ ವೇದಘೋಷದೊಂದಿಗೆ ಪ್ರಾರಂಭವಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ. ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕಾರಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಉಪನಯನ ಸಂಸ್ಕಾರದಿoದ ವಿದ್ಯಾರ್ಥಿಗಳ ಮೌಲ್ಯವರ್ಧನೆಯಾಗುವುದು ಎಂದು ನುಡಿದು ನೆರೆದಿರುವ ಎಲ್ಲರನ್ನೂ ಸ್ವಾಗತಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ವಾಮಿ ವಿವೇಕ ಚೈತನ್ಯಾನಂದಜೀ, ರಾಮಕೃಷ್ಣ ತಪೋವನ, ಪೊಳಲಿ, ಮಂಗಳೂರು ಇವರು ‘ಜೀವನದಲ್ಲಿ ಆಧ್ಯಾತ್ಮಿಕ ತತ್ವಗಳನ್ನು ಅಳವಡಿಸಿಕೊಂಡಲ್ಲಿ ಸರ್ವತೋಮುಖ ಅಭಿವೃದ್ಧಿಯಾಗುವುದು. ಆದರ್ಶ ವ್ಯಕ್ತಿಗಳಾದ ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಜೀವನಶೈಲಿ ಹಾಗೂ ತತ್ವಗಳನ್ನು ಪಾಲಿಸುವಂತೆ’ ಸೂಚಿಸಿದರು. ನಂತರ ನೂತನವಾಗಿ ನೇಮಕಗೊಂಡ ಎಸ್.ಡಿ.ಎಮ್. ಎಜ್ಯುಕೇಶನಲ್ ಸೊಸ್ಸೈಟಿಯ ಕಾರ್ಯದರ್ಶಿಗಳಾದ ಶ್ರೀಯುತ ಡಾ. ಸತೀಶ್ಚಂದ್ರ ಎಸ್. ಅವರನ್ನು ಸನ್ಮಾನಿಸಲಾಯಿತು.

ಎಸ್.ಡಿ.ಎಮ್. ಎಜ್ಯುಕೇಶನಲ್ ಸೊಸ್ಸೈಟಿಯ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್. ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ‘ಉನ್ನತ ಶಿಕ್ಷಣದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಕಾಲೇಜಿನ ಎಲ್ಲಾ ಸೌಕರ್ಯಗಳನ್ನು ಸದುಪಯೋಗ ಪಡಿಸಿಕೊಂಡು ಅತ್ಯುತ್ತಮ ವೈದ್ಯರಾಗಿ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕೆಂದು’ ತಿಳಿಹೇಳಿದರು. ಇದೇ ಸಂದರ್ಭದಲ್ಲಿ ಪಂಚಕರ್ಮ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಪದ್ಮಕಿರಣ್ ಸಿ. ಅವರ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರವೀಂದ್ರ ಅಂಗಡಿಯವರು ಸಂದೇಶ ವಾಚನ ಮಾಡಿದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವೀರಕುಮಾರ ಕೆ. ಇವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ಬೋಧನೆಯನ್ನು ನೆರವೇರಿಸಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್.ರವರು ವಂದನಾರ್ಪಣೆಯನ್ನು ನಡೆಸಿದರು. ಸ್ನಾತಕೋತ್ತರ ವಿಭಾಗದ ಉಪ ಮುಖ್ಯಸ್ಥರಾದ ಡಾ. ಸುಚೇತ ಕುಮಾರಿ, ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಚೈತ್ರಾ ಹೆಬ್ಬಾರ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಹಿತ ಸಿದ್ಧಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮಹಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಅನಂತರ ಶಿಕ್ಷಕ ಪೋಷಕರ ಸಭೆ ನಡೆಸಲಾಯಿತು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply