ಅದ್ಭುತ ಪ್ರತಿಭೆ ಅನನ್ಯಾ ಅಂಬರೀಶ್

ರ೦ಗಪ್ರವೇಶಕ್ಕೆ ಅಣಿಯಾದ ಯುವ ಕಲಾವಿದೆ
18ರಂದು ಬೆಂಗಳೂರಿನ ಜೆಎಸ್‌ಎಸ್ ಸಭಾಂಗಣದಲ್ಲಿ ಕಾರ್ಯಕ್ರಮ

ಬೆಂಗಳೂರು: ಪ್ರಖ್ಯಾತ ನೃತ್ಯ ವಿದುಷಿ ಬೆಂಗಳೂರಿನ ನಾಟ್ಯ ನಿಕೇತನದ ಗುರು ರೇವತಿ ನರಸಿಂಹನ್ ಅವರ ಶಿಷ್ಯೆ ಮತ್ತು ಅಂಬರೀಶ್- ವೀಣಾ ಅವರ ಸುಪುತ್ರಿ ಅನನ್ಯಾ ಅಂಬರೀಶ್ ಗಿಳಿಗಾರ್ ಭರತನಾಟ್ಯ ರಂಗಪ್ರವೇಶಕ್ಕೆ ಅಣಿಯಾಗಿದ್ದಾರೆ.

ಬೆಂಗಳೂರಿನ ಜಯನಗರ ೮ನೇ ಬಡಾವಣೆಯ ಜೆಎಸ್‌ಎಸ್ ಸಭಾಂಗಣದಲ್ಲಿ ಜೂ. 18ರ ಬೆಳಗ್ಗೆ 10.30ಕ್ಕೆ ಆಯೋಜನೆ ಗೊಂಡಿರುವ ಕಾರ್ಯಕ್ರಮದಲ್ಲಿ ಅನನ್ಯಾ ಅಂಬರೀಶ್ ರಂಗಪ್ರವೇಶ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಖ್ಯಾತ ನರ್ತಕಿ, ಅಭಿನವ ಡಾನ್ಸ್ ಅಕಾಡೆಮಿ ನಿರ್ದೇಶಕಿ ನಿರುಪಮಾ ರಾಜೇಂದ್ರ, ಹಿರಿಯ ವಿಮರ್ಷಕ ಎಸ್. ನಂಜು೦ಡರಾವ್, ಕರ್ನಾಟಕಶಾಸ್ತ್ರೀಯ ಸಂಗೀತ ಗಾಯಕ ಕೆ. ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅನನ್ಯಾ ಅಂಬರೀಶ್ ರಂಗಪ್ರವೇಶದ ಪ್ರಸ್ತುತಿಗೆ ವಿದ್ವಾಂಸರಾದ ಡಿ.ಎಸ್. ಶ್ರೀವತ್ಸ (ಗಾಯನ), ಗುರು ರೇವತಿ ನರಸಿಂಹನ್( ನಟುವಾಂಗ), ಹರ್ಷ ಸಾಮಗ (ಮೃದಂಗ), ವಿವೇಕ ಕೃಷ್ಣ (ಕೊಳಲು) ಮತ್ತು ಶಂಕರ್ ರಾಮನ್ (ವೀಣೆ) ಸಹಕಾರವಿದೆ.
ಅನನ್ಯಾ ಸಾಧನಾ ಪಥ: ಬೆಂಗಳೂರಿನ ಉದ್ಯಮಿ ಅಂಬರೀಶ್ ಗಿಳಿಗಾರ್ ಮತ್ತು ವೀಣಾ ಅಂಬರೀಶ್ ಪುತ್ರಿ ಅನನ್ಯಾ ಸಂಗೀತ- ನೃತ್ಯ ಮತ್ತು ಚಿತ್ರಕಲಾ ರಂಗದ ಉದಯೋನ್ಮುಖ ಪ್ರತಿಭೆ. ಈಕೆ ನೃತ್ಯ ಕ್ಷೇತ್ರಕ್ಕೆ ಅಡಿ ಇಟ್ಟಿದ್ದು ೮ನೇ ವಯಸ್ಸಿನಲ್ಲಿ. ಮನೆಯ ಸುಸಂಸ್ಕೃತ, ಸಂಗೀತ, ಸಾಹಿತ್ಯದ ವಾತಾವರಣವೇ ಅನನ್ಯಾಗೆ ಕಲಾಸಕ್ತಿಮೂಡಿಸಿತು. ವೀಣಾ ವಾದಕರಾಗಿರುವ ಅಜ್ಜ ಗಣಪತಿ ಸೋಮಯಾಜಿ ಅವರ ಜೀವನ ಮತ್ತು ಸಾಧನೆಯೇ ಈಕೆಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡಿತು.
ವಿದುಷಿ ರೇವತಿ ನರಸಿಂಹನ್ ಅವರಲ್ಲಿ ಶಿಷ್ಯತ್ವ ಸ್ವೀಕರಿಸಿದ ಅನನ್ಯಾ, ಬಹುಬೇಗ ನರ್ತನವನ್ನು ತನ್ನದಾಗಿಸಿಕೊಳ್ಳುವತ್ತ ಆಸಕ್ತಿ ತೋರಿದ್ದು ವಿಶೇಷ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆ ಹೊಂದಿದ ಈಕೆ ಈಗ ವಿದ್ವತ್ ಪರೀಕ್ಷೆ ಅಭ್ಯಾಸ ನಿರತೆ. 2019ರಿಂದ ಕೇಂದ್ರ ಸಂಸ್ಕೃತಿ ಸಚಿವಾಲಯದ ಸಿಸಿಆರ್‌ಟಿ ವಿದ್ಯಾರ್ಥಿವೇತನ ಪಡೆದು ನೃತ್ಯ ಕಲಿಕೆಯಲ್ಲಿ ಸಾಧನೆ ತೋರುತ್ತಿರುವುದು ಬಹು ವಿಶೇಷ.
ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸದಲ್ಲೂ ವಿಶೇಷ ಆಸಕ್ತಿ ತೋರಿದ್ದಾಳೆ ಅನನ್ಯಾ.  ಈಗ ಸೀನಿಯರ್ ಹಂತದ ಅಭ್ಯಾಸ ದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದ ವಿದುಷಿ ಗಾಯತ್ರಿ ಮಯ್ಯ ಅವರ ಶಿಷ್ಯತ್ವದಲ್ಲಿ ಗಾಯನವನ್ನು ಕರಗತ ಮಾಡಿಕೊಳ್ಳುವತ್ತ ಸಾಗಿರುವುದು ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ.

 ಪ್ರದರ್ಶನದಲ್ಲಿ ಹೆಜ್ಜೆ ಗುರುತು: ರಾಮಾನುಜ ವೈಭವ’ ವಿಶೇಷ ನೃತ್ಯ ನಾಟಕದಲ್ಲಿ ಪುಟ್ಟ ಕೃಷ್ಣನ ಅಭಿನಯದಿಂದ ಪ್ರೇಕ್ಷಕರ ಮನಗೆದ್ದ ಅನನ್ಯಾ ವೇದಿಕೆಯ ಪ್ರಸ್ತುತಿಗಳಿಗೆ ಹೇಳಿ ಮಾಡಿಸಿದ ಪ್ರತಿಭೆ. ನಾಟ್ಯನಿಕೇತನ ಸಂಸ್ಥೆಯ ವಾರ್ಷಿಕ ಮಹೋತ್ಸವಗಳಲ್ಲಿ ಸಹ ಕಲಾವಿದೆ ಯರೊಂದಿಗೆ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದು ಗಮನಾರ್ಹ ಸಂಗತಿ. ಗುರು ರೇವತಿ ಅವರ ಮಾರ್ಗದರ್ಶನ ಹಲವು ವಿನೂತನ ಪ್ರಯೋಗಾತ್ಮಕ ನೃತ್ಯಗಳಲ್ಲಿ ಅನನ್ಯಾ ತನ್ನ ನೃತ್ಯ ಕೌಶಲ ಪಡಮೂಡಿಸಿ ಸೈ ಎನಿಸಿಕೊಂಡಿರುವುದು ಬೆಳವಣಿಗೆಯ ಸಂಕೇತವೇ ಆಗಿದೆ. ಶಂಕರ ಟಿವಿ ವಾಹಿನಿ ನೃತ್ಯ ಸ್ಪರ್ಧೆಯಲ್ಲಿ ಈಕೆಗೆ ಬಹುಮಾನ ಬಂದಿರುವುದು ಗಮನೀಯ.

ಬೆಂಗಳೂರಿನ ಕುಮಾರನ್ಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಷಯ ಅಧ್ಯಯನ ಮಾಡುವುದರೊಂದಿಗೆ ಸಂಗೀತ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಸಾಧನೆ ಹೆಜ್ಜೆಗಳನ್ನು ಮೂಡಿಸುತ್ತಿರುವ ಅನನ್ಯಾಗೆ ಗುರುಕೃಪೆಯೊಂದಿಗೆ ಶ್ರದ್ಧೆ ಮತ್ತು ಆಸಕ್ತಿಗಳು ಕೈ ಹಿಡಿದು ಬೆಳೆಸುತ್ತಿವೆ. ಮೂಲ ವಿಜ್ಞಾನ ಮತ್ತು ಕಲೆಯನ್ನು ಜೀವನದ ಸಾಧನೆಗೆ ಒಗ್ಗಿಸಿಕೊಂಡು ಉನ್ನತ ಸ್ಥಾನಕ್ಕೆ ಏರಬೇಕು ಎಂಬುದು ಈಕೆಯ  ಆಶಯ. ಅದಕ್ಕೆ ಹೆತ್ತವರು ಸದಾ ಪ್ರೋತ್ಸಾಹ ನೀಡುತ್ತಿರುವುದು ಒಂದು ಯೋಗವೇ ಸರಿ.

 
 
 
 
 
 
 
 
 
 
 

Leave a Reply